ಚನ್ನಪಟ್ಟಣ: ನಗರದ ಹೊರವಲಯ ತಿಟ್ಟಮಾರನಹಳ್ಳಿ ರಸ್ತೆ ಬಳಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ವಿದ್ಯುತ್ ಚಿತಾಗಾರಕ್ಕೆ ಅಗತ್ಯ ಸೌಕರ್ಯ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಗುರುವಾರ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಅವರು ಸಂಸದರಾಗಿದ್ದ ವೇಳೆ ಅನುದಾನದಲ್ಲಿ ಚಿತಾಗಾರವನ್ನು ನಿರ್ಮಿಸಲಾಗಿತ್ತು. ಆದರೆ, ಅಗತ್ಯ ಸೌಕರ್ಯಗಳು ಕಲ್ಪಿಸದ ಕಾರಣ ಚಿತಾಗಾರ ಸಾರ್ವಜನಿಕ ಬಳಕೆಗೆ ಸಮರ್ಪಣೆಯಾಗಿಲ್ಲ. ಹಾಗಾಗಿ ಚಿತಾಗಾರದಲ್ಲಿ ಅವಶ್ಯವಿರುವ ಶೌಚಾಲಯ, ನೀರಿನ ವ್ಯವಸ್ಥೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಮೈದಾನದಲ್ಲಿ ಗಿಡಗಂಟೆ ಬೆಳೆದಿದ್ದು, ಅದನ್ನು ಸ್ವಚ್ಚಗೊಳಿಸಿ, ರಸ್ತೆ ನಿರ್ಮಿಸಿದ ಬಳಿಕ ಸಾರ್ವಜನಿಕರು ಬಳಸಬಹುದು ಎಂದರು.
ವಿದ್ಯುತ್ ಚಿತಾಗಾರ ಪೂರ್ಣಗೊಂಡು ಎರಡು ವರ್ಷ ಕಳೆದರೂ ಸಾರ್ವಜನಿಕ ಸೇವೆಗೆ ಬಳಕೆಯಾಗುತ್ತಿಲ್ಲ. ಚಿತಾಗಾರದ ಬಳಿ ಕೊಳವೆ ಬಾವಿ ಸಮಸ್ಯೆ ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡದ ಕಾರಣ ಇದನ್ನು ಬಳಕೆ ಮಾಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಕಾರಣ ಭೇಟಿ ನೀಡಿ ವೀಕ್ಷಣೆ ಮಾಡಿದ್ದೇನೆ. ಇಲ್ಲಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನಗರಸಭಾ ಅಧ್ಯಕ್ಷ ವಾಸಿಲ್ ಆಲಿಖಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಕೋಟೆ ಚಂದ್ರು, ಪೌರಾಯುಕ್ತ ಮಹೇಂದ್ರ ಕುಮಾರ್, ಸದಸ್ಯರಾದ ಜಯಮಾಲಾ, ಸತೀಶ್ ಬಾಬು, ಮತೀನ್, ಸಬೀರ್, ನಾಗೇಶ್, ರೇವಣ್ಣ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ ಸುನೀಲ್, ಹಿರಿಯ ಮುಖಂಡ ರಾಂಪುರ ಮಲುವೆಗೌಡ, ಇತರರು ಹಾಜರಿದ್ದರು.
ನೀರಾ ಉದ್ಯಮಕ್ಕೆ ಒತ್ತು
ಜಿಲ್ಲೆಯಲ್ಲಿನ ತೆಂಗು ಬೆಳೆಗಾರರ ಹಿತ ಕಾಯುವ ಸಲುವಾಗಿ ನೀರಾ ಉದ್ಯಮಕ್ಕೆ ಒತ್ತು ನೀಡಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಿ.ಪಿ. ಯೋಗೇಶ್ವರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೆಂಗಿನಕಾಯಿಗೆ ವೈಜ್ಞಾನಿಕ ದರ ಸಿಗದ ಕಾರಣ ತೆಂಗಿನ ಬಗ್ಗೆ ತಾತ್ಸಾರ ಪ್ರವೃತ್ತಿ ಬೆಳೆಸಿಕೊಂಡಿದ್ದ ರೈತರು ತೆಂಗು ಬೆಳೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದರು. ಈಗ ತೆಂಗಿನಕಾಯಿ ಕೊಬ್ಬರಿಗೆ ಉತ್ತಮ ದರ ಸಿಕ್ಕಿದೆ. ಆದರೆ ಇಳುವರಿ ಇಲ್ಲದೆ ರೈತರು ಪರಿತಪಿಸುವಂತಾಗಿದೆ ಎಂದರು. ತೆಂಗಿನಿಂದ ನೀರಾವನ್ನು ಇಳಿಸುವ ಉದ್ದೇಶದಿಂದ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದೇನೆ. ಈ ಬಗ್ಗೆ ಸೂಕ್ತ ಮಾರ್ಗದರ್ಶನ ಪಡೆಯುವ ಸಲುವಾಗಿ ವಿಜ್ಞಾನಿಗಳು ರೈತರು ಹಾಗೂ ಅಧಿಕಾರಿಗಳ ಜೊತೆ ಶೀಘ್ರ ಸಂವಾದ ನಡೆಸಲಾಗುವುದು. ನೀರಾವನ್ನು ಉದ್ಯಮವಾಗಿಸುವ ಮೂಲಕ ಮುಂದಿನ ದಿನಗಳಲ್ಲಿ ತೆಂಗು ಬೆಳೆಗಾರರ ಹಿತ ಕಾಯುವ ಕೆಲಸ ಮಾಡುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.