ADVERTISEMENT

‘ಪ್ರತಿಯೊಂದಕ್ಕೂ ಕಂಪ್ಯೂಟರ್‌ ಜ್ಙಾನ ಅವಶ್ಯ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 14:00 IST
Last Updated 31 ಜುಲೈ 2019, 14:00 IST
ಹಾರೋಹಳ್ಳಿ ಕೆನರಾ ಬ್ಯಾಂಕ್‌ ಗ್ರಾಮೀಣ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಚಂದ್ರಶೇಖರ್‌ ಮಾತನಾಡಿದರು
ಹಾರೋಹಳ್ಳಿ ಕೆನರಾ ಬ್ಯಾಂಕ್‌ ಗ್ರಾಮೀಣ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಚಂದ್ರಶೇಖರ್‌ ಮಾತನಾಡಿದರು   

ಹಾರೋಹಳ್ಳಿ (ಕನಕಪುರ): ‘ಇಂದಿನ ಪರಿಸ್ಥಿತಿಯಲ್ಲಿ ಕಂಪ್ಯೂಟರ್‌ ಇಲ್ಲದೆ ಯಾವುದೆ ಕೆಲಸವಾಗುವುದಿಲ್ಲ. ಪ್ರತಿಯೊಂದಕ್ಕೂ ಇಂದು ನಾವು ಕಂಪ್ಯೂಟರ್‌ ಮೇಲೆ ಅವಲಂಬಿತರಾಗಿದ್ದೇವೆ. ಪ್ರತಿಯೊಂದಕ್ಕೂ ಇದರ ಜ್ಙಾನ ಬೇಕಿದೆ’ ಎಂದು ರಾಮನಗರ ಜಿಲ್ಲಾ ಪಂಚಾಯತ್‌ ಯೋಜನಾ ನಿರ್ದೇಶಕ ಚಂದ್ರಶೇಖರ್‌ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಕೆನರಾ ಬ್ಯಾಂಕ್‌ ಗ್ರಾಮೀಣ ಮಹಿಳಾ ಸ್ವ ಉದ್ಯೋಗ ತರಬೇತಿ ಸಂಸ್ಥೆಗೆ ಬುಧವಾರ ಭೇಟಿ ನೀಡಿ ಸಂಸ್ಥೆಯಲ್ಲಿ ಕಂಪ್ಯೂಟರ್‌ ಟ್ಯಾಲಿ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳನ್ನು ಕುರಿತು ಮಾತನಾಡಿದರು.

‘ಉದ್ಯೋಗ ಅರಸಿ ನೀವು ಎಲ್ಲೇ ಹೋದರೂ ಮೊದಲಿಗೆ ಕೇಳುವುದು ಕಂಪ್ಯೂಟರ್‌ ಮತ್ತು ಆಂಗ್ಲ ಭಾಷೆ ‌ಬರುತ್ತದೆಯೇ, ಇದರಲ್ಲಿ ನಿಮಗೆ ನೈಪುಣ್ಯತೆಯಿದೆಯೇ’ ಎಂದರು.

‘ಅದಕ್ಕಾಗಿ ಇಲ್ಲಿ ನಿಮಗೆ ಉಚಿತವಾಗಿ ಟ್ಯಾಲಿಯನ್ನು ಹೇಳಿಕೊಡಲಾಗುತ್ತಿದೆ. ಉಚಿತವೆಂದು ಉದಾಸೀನ ಮಾಡದೆ ಶ್ರದ್ಧೆಯಿಂದ ಕಲಿತು ಇದನ್ನು ಸದ್ಬಳಕೆ ಮಾಡಿಕೊಳ್ಳಿ’ ಎಂದು ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕಿ ಸುಮ ಎನ್‌. ಗಾಂವಕರ್‌ ಮಾತನಾಡಿ, ‘ಆರ್ಥಿಕ ಸಬಲೀಕರಣಕ್ಕಾಗಿ ಗ್ರಾಮೀಣ ಮಹಿಳೆಯರನ್ನು ಗುರಿಯಾಗಿಸಿಕೊಂಡು ಇಲ್ಲಿ ಎಲ್ಲ ರೀತಿಯ ಉಚಿತ ಕೌಶಲ ತರಬೇತಿಯನ್ನು ಕೊಡುತ್ತಿದ್ದೇವೆ. ನೀವುಗಳು ಅದರ ಉಪಯೋಗ ಪಡೆಯಬೇಕು ಮತ್ತು ಇಲ್ಲಿನ ತರಬೇತಿಗಳು ಬೇರೆಯವರಿಗೂ ಸಿಗುವಂತೆ ಮಾಡಬೇಕೆಂದು’ ಮನವಿ ಮಾಡಿದರು.

ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.