ರಾಮನಗರ: ‘ನಿನ್ನ ಬದುಕನ್ನು ರೂಪಿಸಿಕೊಳ್ಳಬೇಕಾದ ಶಿಲ್ಪಿ ನೀನೇ ಎಂದು ಸ್ವಾಮಿ ವಿವೇಕಾನಂದ ಅವರು ಕರೆ ಕೊಟ್ಟರು. ಡಾ. ಬಿ.ಆರ್. ಅಂಬೇಡ್ಕರ್ ಅವರು, ವಿದ್ಯೆಯೆಂಬುದು ಹುಲಿಯ ಹಾಲಿದ್ದಂತೆ. ಅದನ್ನು ಕುಡಿದವರು ಘರ್ಜಿಸಲೇಬೇಕು’ ಎಂದು ವನವಾಸಿ ಕಲ್ಯಾಣ ಜಿಲ್ಲಾ ಖಜಾಂಚಿ ಆರ್.ಕೆ. ಸತೀಶ್ ಹೇಳಿದರು.
ಪ್ರೊಫೆರ‍್ಸ್ ಎಜುಕೇಷನಲ್ ಟ್ರಸ್ಟ್ ಹಾಗೂ ನ್ಯೂ ಎಕ್ಸ್‌ಪರ್ಟ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ಆಯೋಜಿಸಿದ್ದ ಎಕ್ಸ್‌ಪರ್ಟ್ ಯುವ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನೀವು ಜೀವಮಾನವಿಡೀ ಮಾಡಿದ ಕೆಲಸವು ಕರ್ಮದ ರೂಪದಲ್ಲಿ ಮತ್ತೆ ವಾಪಸ್ಸು ಬರುತ್ತದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲೇ ಇದೆ’ ಎಂದರು.
ಎಸ್.ಎಂ.ವಿ ಸಂಸ್ಥಾಪಕಿ ರಾಧಿಕಾ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟುವ ತನಕ ಪ್ರಯತ್ನವನ್ನು ಬಿಡಬಾರದು. ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆ ನಿಟ್ಟಿನಲ್ಲಿ ಚನ್ನಾಗಿ ಓದಿ, ಉನ್ನತ ಸ್ಥಾನಮಾನ ಅಲಂಕರಿಸಬೇಕು’ ಎಂದು ಸಲಹೆ ನೀಡಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನ್ಯೂ ಎಕ್ಸ್‌ಪರ್ಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ. ಡಿ.ಆರ್. ರವಿಕುಮಾರ್, ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಆರ್. ಚಂದ್ರಶೇಖರ್, ಪಿಯುಸಿ ಉಪ ಪ್ರಾಚಾರ್ಯೆ ಕೆ.ಎಸ್. ಭುವನಶ್ರೀ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.