ADVERTISEMENT

ಸರ್ಕಾರಿ ನೌಕರರು ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿ: ಸಿ.ಪಿ. ಯೋಗೇಶ್ವರ

ಸರ್ಕಾರಿ ನೌಕರರಿಗೆ ಸೇವಾ ರತ್ನ ಪ್ರಶಸ್ತಿ ಪ್ರದಾನ; ಪ್ರತಿಭಾ ಪುರಸ್ಕಾರ

​ಪ್ರಜಾವಾಣಿ ವಾರ್ತೆ
Published 30 ಜನವರಿ 2021, 13:13 IST
Last Updated 30 ಜನವರಿ 2021, 13:13 IST
ಸ್ಪೂರ್ತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಸಚಿವ ಸಿ.ಪಿ. ಯೋಗೇಶ್ವರ ಸನ್ಮಾನಿಸಿದರು
ಸ್ಪೂರ್ತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಪ್ರತಿಭಾನ್ವಿತ ಮಕ್ಕಳನ್ನು ಸಚಿವ ಸಿ.ಪಿ. ಯೋಗೇಶ್ವರ ಸನ್ಮಾನಿಸಿದರು   

ರಾಮನಗರ: ಸರ್ಕಾರಿ ನೌಕರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಿದರೆ ಸಮಾಜವನ್ನು ಉತ್ತಮವಾಗಿ ಮುನ್ನಡೆಸಬಹುದು ಎಂದು ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಸಿ.ಪಿ. ಯೋಗೇಶ್ವರ್‌ ಸಲಹೆ ನೀಡಿದರು.

ಸ್ಪೂರ್ತಿ ಭವನದ ಆವರಣದಲ್ಲಿ ಶನಿವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕವು ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ರಾಜ್ಯ ಸರ್ಕಾರಿ ನೌಕರರ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಈ ಸಮಯದಲ್ಲಿ ತಮ್ಮ ಅಧಿಕಾರ ಬಳಸಿಕೊಂಡು ಜನ ಸಾಮಾನ್ಯರಿಗೆ ಒಳ್ಳೆಯ ಕೆಲಸವನ್ನು ಮಾಡಬಹುದು, ಕಿರುಕುಳವನ್ನೂ ನೀಡಬಹುದು. ವರ್ಗಾವಣೆಗೆ ಅರ್ಜಿ ತೆಗೆದುಕೊಂಡು ಬರುವವರು, ಬೇಕಾದಲ್ಲಿಗೆ ವರ್ಗಾವಣೆ ಮಾಡಿಸಿಕೊಡಿ ಎನ್ನುವ ನೌಕರರೂ ಇದ್ದಾರೆ. ತಮ್ಮ ಪಾಲಿನ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತ, ಜನಮುಖಿಯಾಗಿ ಕೆಲಸ ಮಾಡುವ ನೌಕರರೂ ಇದ್ದಾರೆ. ಈ ಕುರಿತು ನೌಕರರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.

ಬಜೆಟ್ ಖೋತಾ: ರಾಜ್ಯದಲ್ಲಿ ವರ್ಷಕ್ಕೆ ಸಂಗ್ರಹವಾಗುವ ₨1 ಲಕ್ಷ ಕೋಟಿ ತೆರಿಗೆಯಲ್ಲಿ ಶೇ 80 ರಷ್ಟು ಭಾಗ ಸರ್ಕಾರಿ ನೌಕರರು, ಜನಪ್ರತಿನಿಧಿಗಳ ಸಂಬಳಕ್ಕೇ ಹೋಗುತ್ತಿದೆ. ಉಳಿದ ಶೇ 20 ರಷ್ಟು ತೆರಿಗೆ ಮಾತ್ರ ಅಭಿವೃದ್ಧಿ ಕೆಲಸಗಳಿಗೆ ಉಳಿಯುತ್ತಿದೆ. ಕೋವಿಡ್ ಕಾರಣಕ್ಕೆ ಈ ಬಾರಿ ತೆರಿಗೆ ಸಂಗ್ರಹ ಪ್ರಮಾಣ ಕುಸಿದಿದ್ದು, ಬಜೆಟ್‌ ಗಾತ್ರ ಕುಗ್ಗಲಿದೆ. ಈಗಾಗಲೇ ರಾಜ್ಯಕ್ಕೆ ₨4.5 ಲಕ್ಷ ಕೋಟಿ ಸಾಲವಿದೆ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಮಾತನಾಡಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ADVERTISEMENT

1998ರಲ್ಲಿ ರಾಜ್ಯದಲ್ಲಿ 7.7 ಲಕ್ಷ ಸರ್ಕಾರಿ ಹುದ್ದೆಗಳಿದ್ದವು, ಅದರಲ್ಲಿ ಸದ್ಯ 5.2 ಲಕ್ಷದಷ್ಟು ಹುದ್ದೆಗಳು ಮಾತ್ರವೇ ಭರ್ತಿ ಇವೆ. ಹುದ್ದೆಗಳು ಮಾತ್ರ ಭರ್ತಿಯಾಗುತ್ತಿಲ್ಲ. ಒತ್ತಡದಲ್ಲಿಯೂ ನೌಕರರು ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಾ ಬಂದಿದ್ದೇವೆ ಎಂದರು.

ಏಪ್ರಿಲ್ 21ರಂದು ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸರ್ಕಾರಿ ನೌಕರರ ದಿನಾಚರಣೆ ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಮುಂದಿನ ತಿಂಗಳಿಂದ ಸರ್ಕಾರಿ ನೌಕರರಿಗೆ ಆನ್‌ಲೈನ್ ಕೆಜಿಐಡಿ ಸಾಲ ಸೌಲಭ್ಯ, ಏಪ್ರಿಲ್ 1ರಿಂದ ನೌಕರರ ಕುಟುಂಬ ಸದಸ್ಯರಿಗೆ ನಗದು ರಹಿತ ಉಚಿತ ಚಿಕತ್ಸಾ ಸೌಲಭ್ಯ ಜಾರಿಯಾಗಲಿದೆ ಎಂದು ಹೇಳಿದರು. ಕೋವಿಡ್ ಕಾರಣಕ್ಕೆ ಗಳಿಕೆ ರಜೆ ನಗದೀಕರಣವನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಈ ವರ್ಷವೂ ಸ್ಥಗಿತಗೊಳಿಸುವ ಉದ್ದೇಶವಿತ್ತು. ಆದರೆ ಅದನ್ನು ಹಿಂಪಡೆದು 700 ಕೋಟಿ ಮಂಜೂರು ಮಾಡಿದೆ ಎಂದು ತಿಳಿಸಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ಎಂ.ಎಸ್ .ಅರ್ಚನಾ, ಜಿಪಂ ಸಿಇಒ ಇಕ್ರಂ ಸೇರಿದಂತೆ 36 ಮಂದಿ ಸರ್ಕಾರಿ ನೌಕರರಿಗೆ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ತಾ.ಪಂ. ಸದಸ್ಯ ಗಾಣಕಲ್‌ ನಟರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸೋಮಶೇಖರಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಗುರುಸಿದ್ದಯ್ಯ, ನಗರಸಭೆ ಆಯುಕ್ತ ನಂದಕುಮಾರ್, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ, ನಿವೃತ್ತ ಔಷಧ ಉಪನಿಯಂತ್ರಕ ಎಚ್.ಶ್ರೀನಿವಾಸ್ ಉಪಸ್ಥಿತರಿದ್ದರು.

***

2022–23ನೇ ಹಣಕಾಸು ವರ್ಷದಿಂದ ರಾಜ್ಯದಲ್ಲಿ ಕೇಂದ್ರ ಮಾದರಿ ವೇತನ ಶ್ರೇಣಿ ಜಾರಿಗೆ ಬರುವ ವಿಶ್ವಾಸ ಇದೆ. ಅದಕ್ಕಾಗಿ ಸಿದ್ಧತೆಗಳು ನಡೆದಿವೆ

- ಸಿ.ಎಸ್. ಷಡಕ್ಷರಿ,ಅಧ್ಯಕ್ಷ, ರಾಜ್ಯ ಸರ್ಕಾರಿ ನೌಕರರ ಸಂಘ

***

ಸರ್ಕಾರಿ ನೌಕರರಲ್ಲಿ ಪ್ರಾಮಾಣಿಕರು, ಅವಕಾಶಕ್ಕಾಗಿ ಎದುರು ನೋಡುವವರೂ ಇದ್ದಾರೆ. ಅವರೆಲ್ಲ ಆತ್ಮವಲೋಕನ ಮಾಡಿಕೊಳ್ಳಬೇಕಿದೆ

-ಸಿ.ಪಿ. ಯೋಗೇಶ್ವರ,ಪ್ರವಾಸೋದ್ಯಮ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.