ADVERTISEMENT

ರಾಮನಗರ: ಬೂದು ನೀರು ಮುಕ್ತವಾಗಲಿವೆ ಗ್ರಾಮಗಳು!

ಮಲಿನ ನೀರಿನ ಸದ್ಬಳಕೆ: ಜಿಲ್ಲೆಯಲ್ಲಿ ವಿನೂತನ ಪ್ರಯೋಗ

ಆರ್.ಜಿತೇಂದ್ರ
Published 9 ಆಗಸ್ಟ್ 2021, 3:53 IST
Last Updated 9 ಆಗಸ್ಟ್ 2021, 3:53 IST
ಎಸ್‌.ಎಂ. ದೊಡ್ಡಿ ಗ್ರಾಮದಲ್ಲಿ ಬಚ್ಚಲು ಗುಂಡಿ ನಿರ್ಮಾಣ ಕಾಮಗಾರಿ ನಡೆದಿರುವುದು
ಎಸ್‌.ಎಂ. ದೊಡ್ಡಿ ಗ್ರಾಮದಲ್ಲಿ ಬಚ್ಚಲು ಗುಂಡಿ ನಿರ್ಮಾಣ ಕಾಮಗಾರಿ ನಡೆದಿರುವುದು   

ರಾಮನಗರ: ಎಲ್ಲವೂ ಅಂದು ಕೊಂಡಂತೆ ಆದರೆ ಜಿಲ್ಲೆಯ 127 ಗ್ರಾಮ ಪಂಚಾಯಿತಿಗಳಲ್ಲಿನ ತಲಾ ಒಂದು ಗ್ರಾಮ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಬೂದು ನೀರು ಮುಕ್ತ ಗ್ರಾಮಗಳಾಗಿ ಘೋಷಣೆ ಆಗಲಿವೆ. ರಾಜ್ಯದಲ್ಲೇ ಈ ಪ್ರಯೋಗ ಮಾಡಿದ ಮೊದಲ ಜಿಲ್ಲೆ ಎಂಬ ಕೀರ್ತಿಯೂ ರಾಮನಗರಕ್ಕೆ ಸಿಗಲಿದೆ.

ಮನೆಗಳಲ್ಲಿ ದಿನನಿತ್ಯದ ಕಾರ್ಯಗಳಿಗೆ ಬಳಕೆ ಆಗುವ ನೀರಿನ ಪೈಕಿ ಶೌಚಾಲಯಕ್ಕೆ ಬಳಸುವ ನೀರು ಹೊರತುಪಡಿಸಿ ಸಾಮಾನ್ಯ ಕೆಲಸಗಳಿಗೆ ಬಳಸುವ ನೀರನ್ನು ನೆಲದಲ್ಲೇ ಇಂಗಿಸಿ ಅಂತರ್ಜಲ ವೃದ್ಧಿಸುವ ಇಲ್ಲವೇ ಶುದ್ಧೀಕರಣ ಘಟಕಗಳ ಮೂಲಕ ಮರುಬಳಕೆ ಮಾಡುವ ಯೋಜನೆ ಇದಾಗಿದೆ. ದಿನಬಳಕೆ ನೀರನ್ನು ಅದರ ಮಲಿನತೆ ಆಧಾರದಲ್ಲಿ ಬೂದು ನೀರು ಹಾಗೂ ಕಪ್ಪು ನೀರನ್ನಾಗಿ ವಿಂಗಡಿಸಲಾಗುತ್ತಿದ್ದು, ಈ ಪೈಕಿ ಬೂದು ನೀರಿನ ಸದ್ಬಳಕೆ ಮಾಡಲು ಜಿಲ್ಲಾ ಪಂಚಾಯಿತಿಯು ಯೋಜನೆ ರೂಪಿಸಿದೆ. ನಿತ್ಯ ನಾವು ಬಳಕೆ ಮಾಡುವ ನೀರಿನಲ್ಲಿ ಶೇ 60ರಷ್ಟು ನೀರು ಬೂದು ನೀರಾಗಿದ್ದರೆ, ಉಳಿದದ್ದು ಕಪ್ಪು ನೀರಾಗಿದೆ ಎಂದು ಅಂದಾಜಿಸಲಾಗಿದೆ.

ಜಲಜೀವನ ಮಿಷನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಜಿಲ್ಲೆಯಲ್ಲಿನ ದ್ರವ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕೆಲಸ ಇದಾಗಿದೆ. ಜಿ.ಪಂ. ಸಿಬ್ಬಂದಿ ಈಗಾಗಲೇ ಈ ಸಂಬಂಧ ಮನೆ ಮನೆ ಸರ್ವೆ ಮಾಡಿದ್ದು, ಆಯ್ದ ಗ್ರಾಮಗಳಲ್ಲಿ ಕಾಮಗಾರಿಗಳೂ ನಡೆಯುತ್ತಿವೆ.

ADVERTISEMENT

ವಿಂಗಡಣೆ ಹೇಗೆ?: ಜಲಜೀವನ ಮಿಷನ್‌ ಯೋಜನೆ ಅಡಿ ಒಬ್ಬ ವ್ಯಕ್ತಿಗೆ ದಿನಕ್ಕೆ 55 ನೀರು ಬಳಕೆಗೆ ಮೀಸಲಿಡಲಾಗಿದೆ. ಅದರಂತೆ ಒಂದು ಕುಟುಂಬದಲ್ಲಿ ನಾಲ್ಕು ಜನ ಇದ್ದರೆ ನಿತ್ಯ 220 ಲೀಟರ್ ನೀರು ಪೂರೈಕೆಯಾಗಬೇಕು. ಇದರಲ್ಲಿ 139 ಲೀಟರ್‌ನಷ್ಟು ನೀರು ಬೂದು ನೀರಾಗಿ ಪರಿವರ್ತನೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.

ಪಾತ್ರೆ ತೊಳೆಯುವುದು, ಬಟ್ಟೆ ಸ್ವಚ್ಛಗೊಳಿಸುವುದು, ಕಾಲು- ಕೈ ತೊಳೆಯುವುದು, ಸ್ನಾನ ಮಾಡು ವುದು... ಹೀಗೆ ಇತರೆ ಬಳಕೆಗೆ ಬಳ ಸುವ ನೀರೆಲ್ಲವು ಬೂದು ನೀರಾಗಿ ಬದಲಾಗ ಲಿದೆ. ಶೌಚಾಲಯಕ್ಕೆ ಬಳಸುವ ನೀರು ಕಪ್ಪು ನೀರಾಗಿ ಪರಿವರ್ತನೆಗೊಳ್ಳಲಿದೆ.

ಗುಂಡಿಗಳ ನಿರ್ಮಾಣ: ಯೋಜನೆಯ ಆರಂಭಿಕ ಹಂತವಾಗಿ ಮನೆಗಳ ಸಮೀಪವೇ ವೈಜ್ಞಾನಿಕ ರೀತಿಯಲ್ಲಿ ಬಚ್ಚಲು ಗುಂಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ನರೇಗಾ ಯೋಜನೆ ಅಡಿ ತಲಾ 5 ಅಡಿ ಉದ್ದ ಹಾಗೂ ಅಗಲ ಮತ್ತು 7 ಅಡಿ ಆಳಕ್ಕೆ ಈ ಗುಂಡಿಗಳನ್ನು ತೆಗೆಯಲಾಗುತ್ತದೆ. ಇದರಲ್ಲಿ ಸಿಮೆಂಟ್ ಕಾಂಕ್ರೀಟ್ ಬಳೆಗಳ ಜೊತೆಗೆ ಸ್ಥಳೀಯವಾಗಿ ಸಿಗುವ ಕಲ್ಲು, ಜಲ್ಲಿಕಲ್ಲುಗಳನ್ನು ಬಳಸಿ ಗುಂಡಿ ನಿರ್ಮಿಸಲಾಗುತ್ತದೆ. ಜೊತೆಗೆ ನೈಲಾನ್‌ ಮೆಶ್‌ ಸಹ ಅಳವಡಿಸಲಾಗುತ್ತದೆ.

ಮನೆಯ ಬಚ್ಚಲು ಮನೆ, ಅಡುಗೆ ಮನೆಯಿಂದ ಹೊರ ಹೋಗುವ ನೀರನ್ನು ಪೈಪ್‌ಲೈನ್‌ ಮೂಲಕ ಈ ಗುಂಡಿಗೆ ಹರಿಸಿ, ಬೂದು ನೀರನ್ನು ಅಂತರ್ಜಲಕ್ಕೆ ಇಂಗಿಸಲಾಗುತ್ತದೆ. ನರೇಗಾ ಯೋಜನೆ ಅಡಿ ಇದಕ್ಕೆ ₹ 14 ಸಾವಿರ ಅನುದಾನ ಲಭ್ಯ ಇದ್ದು, 21 ಮಾನವ ದಿನಗಳ ಬಳಕೆಗೆ ಅವಕಾಶ ಇದೆ. ಸದ್ಯಕ್ಕೆ ಈ ಯೋಜನೆಯ ಅಡಿ ಜಿಲ್ಲೆಯಲ್ಲಿ 8,586 ಗುಂಡಿಗಳ ನಿರ್ಮಾಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಈಗಾಗಲೇ 4,900ಕ್ಕೂ ಹೆಚ್ಚು ಗುಂಡಿಗಳು ನಿರ್ಮಾಣ ಆಗಿವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಳೆದ ಕೆಲವು ತಿಂಗಳಿನಿಂದಲೂ ಈ ಯೋಜನೆಯ ಕಾಮಗಾರಿಗಳು ನಡೆದಿವೆ. ಇದಕ್ಕಾಗಿ ರಾಮನಗರ ಜಿಲ್ಲಾ ಪಂಚಾಯಿತಿಯು ಬೆಂಗಳೂರಿನ ಸಿಡಿಸಿ ಸಂಸ್ಥೆಯ ಸಹಯೋಗದಲ್ಲಿ ನೀರಿನ ಸದ್ಬಳಕೆ ಕುರಿತು ತನ್ನೆಲ್ಲ ತಾಂತ್ರಿಕ ಸಿಬ್ಬಂದಿಗೆ ಮೂರು ದಿನಗಳ ವಿಶೇಷ ತರಬೇತಿ ಸಹ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.