ADVERTISEMENT

ಮಕ್ಕಳ ಪ್ರತಿಭೆ ಗುರುತಿಸಿ: ನಾರಾಯಣಪ್ಪ

​ಪ್ರಜಾವಾಣಿ ವಾರ್ತೆ
Published 15 ಮೇ 2019, 13:08 IST
Last Updated 15 ಮೇ 2019, 13:08 IST
ಚನ್ನಪಟ್ಟಣ ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಗಪಟು ವಿದ್ಯಾರ್ಥಿಗಳಾದ ವೈಷ್ಣವಿ ಹಾಗೂ ವೇದಾಂತ್‌ ಅವರನ್ನು ಸನ್ಮಾನಿಸಲಾಯಿತು
ಚನ್ನಪಟ್ಟಣ ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಗಪಟು ವಿದ್ಯಾರ್ಥಿಗಳಾದ ವೈಷ್ಣವಿ ಹಾಗೂ ವೇದಾಂತ್‌ ಅವರನ್ನು ಸನ್ಮಾನಿಸಲಾಯಿತು   

ಚನ್ನಪಟ್ಟಣ: ‘ಮಕ್ಕಳ ಪ್ರತಿಭೆಯನ್ನು ಗುರುತಿಸಿದಾಗ ಮಾತ್ರ ಅವರು ಬೆಳೆಯಲು ಸಾಧ್ಯ’ ಎಂದು ತಾಲ್ಲೂಕು ಕಚೇರಿಯ ಹಿರಿಯ ಪತ್ರ ಬರಹಗಾರ ನಾರಾಯಣಪ್ಪ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹರಿಸಂದ್ರ ಗ್ರಾಮದಲ್ಲಿ ಬುಧವಾರ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಜೈ ಭೀಮ್ ಯುವಕರ ಸಂಘದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಎಸ್.ಸಿ., ಎಸ್.ಟಿ ಸಮುದಾಯದ ಉತ್ತಮ ಅಂಕ ಗಳಿಸಿದ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಯೋಗದಲ್ಲಿ ಸಾಧನೆ ಮಾಡಿರುವ ಅಂತರರಾಷ್ಟ್ರೀಯ ಯೋಗ ಪಟುಗಳಾದ ವೈಷ್ಣವಿ ಹಾಗೂ ವೇದಾಂತ್ ಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರು ಶೋಷಿತ ಸಮುದಾಯದಲ್ಲಿ ಜನಿಸಿ, ಉನ್ನತ ಶಿಕ್ಷಣ ಪಡೆದು ಶೋಷಿತ ಸಮದಾಯದ ಉದ್ಧಾರಕ್ಕಾಗಿ ದುಡಿದವರು. ಸಂವಿಧಾನ ರಚನೆ ಮಾಡಿ ಶೋಷಿತರ ಬಾಳಿಗೆ ಬೆಳಕಾದವರು. ಸಮಾಜವು ಶಿಕ್ಷಣ ಹಾಗೂ ಪ್ರತಿಭೆಗಳಿಗೆ ಮಾತ್ರ ಬೆಲೆ ಕೊಡುತ್ತದೆ ಎಂದು ಅರಿತಿದ್ದ ಅಂಬೇಡ್ಕರ್ ಅವರ ತತ್ವ, ಆದರ್ಶ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು’ ಎಂದರು.

ADVERTISEMENT

ಬಹುಜನ ವಿದ್ಯಾರ್ಥಿ ಸಂಘದ ಮುಖಂಡ ಕುಮಾರ್ ಮಾತನಾಡಿ, ‘ಸಮುದಾಯದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬುದು ಅಂಬೇಡ್ಕರ್‌ ಅವರ ಆಶಯ. ಇದನ್ನು ಮನದಲ್ಲಿಟ್ಟುಕೊಂಡು ಜೀವನದಲ್ಲಿ ಮಹತ್ತರ ಘಟ್ಟಗಳನ್ನು ತಲುಪಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಹೊಂದಲು ಸಾಧ್ಯ’ ಎಂದರು.

ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಜು, ನಿವೃತ್ತ ಶಿಕ್ಷಕ ರಾಮಕೃಷ್ಣಯ್ಯ, ಗ್ರಾಮದ ಮುಖಂಡರಾದ ಪಾಲಾಕ್ಷ, ಸತೀಶ್, ಚಿಕ್ಕಣ್ಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.