ADVERTISEMENT

‘ಶಿಕ್ಷಣ ಕ್ಷೇತ್ರಕ್ಕೆ ಪುಟ್ಟಣ್ಣ ಕೊಡುಗೆ ಶೂನ್ಯ’

ಹಣ ಸಂಪಾದನೆಗಷ್ಟೇ ಅವರು ಸೀಮಿತ: ಜೆಡಿಎಸ್‌ ಅಭ್ಯರ್ಥಿ ರಂಗನಾಥ ಆರೋಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:00 IST
Last Updated 20 ಫೆಬ್ರುವರಿ 2020, 20:00 IST
ಗುರುವಾರ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ ಮಾತನಾಡಿದರು
ಗುರುವಾರ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ ಮಾತನಾಡಿದರು   

ರಾಮನಗರ: ‘18 ವರ್ಷಗಳಿಂದ ಶಿಕ್ಷಕ ಸಮುದಾಯದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪುಟ್ಟಣ್ಣನವರು ಕೆಲಸ ಮಾಡಿದ್ದರೆ ಉಡುಗೊರೆಗಳನ್ನು ಹಂಚುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದು ಬೆಂಗಳೂರು ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ತಮ್ಮ ಕುಟುಂಬಕ್ಕೆ ಸೇರಿದ 14 ಮಂದಿಗೆ ಕೆಎಎಸ್ ಹುದ್ದೆ ಕೊಡಿಸುವಲ್ಲಿ, ನೂರಾರು ಕೋಟಿ ವೆಚ್ಚದಲ್ಲಿ ಶಿಕ್ಷಣ ಸಂಸ್ಥೆಯನ್ನು ತೆರೆಯಲು ಹಾಗೂ ಹಲವು ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಜತೆಗೆ ಕೋಟ್ಯಾಂತರ ಬೆಲೆ ಬಾಳುವ ಆಸ್ತಿ ಮಾಡಿದ್ದಾರೆ ಎಂದು ಶಿಕ್ಷಕ ಸಮುದಾಯದವರೇ ಹೇಳುತ್ತಿದ್ದಾರೆ’ ಎಂದು ದೂರಿದರು.

‘ಜೆಡಿಎಸ್‌ನಿಂದ ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಅವರು ಪಕ್ಷದ ಎಲ್ಲಾ ಸವಲತ್ತು, ಅಧಿಕಾರಗಳನ್ನು ಅನುಭವಿಸಿ ಈಗ ಪಕ್ಷಕ್ಕೆ ಚೂರಿ ಹಾಕಿ ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಇಂತಹ ವ್ಯಕ್ತಿಗೆ ಈ ಬಾರಿ ಶಿಕ್ಷಕರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಅವರು ಮೊದಲು ವಿಧಾನ ಪರಿಷತ್ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಲಿ. ನಂತರ ನರೇಂದ್ರ ಮೋದಿ, ಅಮಿತ್ ಶಾ ಅವರ ಫೋಟೊ ಹಾಕಿಕೊಂಡು ಚುನಾವಣೆ ಮಾಡಲಿ. ಪುಟ್ಟಣ್ಣ ಅವರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. ‘ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಬಸವರಾಜ ಹೊರಟ್ಟಿ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ’ ಎಂದು ತಿಳಿಸಿದರು.

‘20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಉತ್ತಮವಾದ ಕೆಲಸಗಳನ್ನು ಮಾಡಿದ್ದೇನೆ. ಶಿಕ್ಷಕರ, ಉಪನ್ಯಾಸಕರ ಸಮಸ್ಯೆಗಳನ್ನು ಅರಿತಿದ್ದೇನೆ. ಪ್ರಚಾರದ ಸಂದರ್ಭದಲ್ಲಿ ಶಿಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರೆಯುತ್ತಿದೆ. ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸುತ್ತೇನೆಂದು ನಾನು ಭರವಸೆ ನೀಡುವುದಿಲ್ಲ, ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡು ಸರ್ಕಾರ ಮತ್ತು ಇಲಾಖೆಗೆ ಅರ್ಥೈಸುವುದರ ಜತೆಗೆ ಹೋರಾಟ ರೂಪಿಸುತ್ತೇನೆ’ ಎಂದರು.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್, ನಿವೃತ್ತ ಪ್ರಾಚಾರ್ಯರಾದ ಎಸ್.ಎಲ್. ವನರಾಜು, ಕೆ. ಕರೀಗೌಡ, ವಕೀಲ ಮಂಜೇಶ್, ಮುಖಂಡ ಬಿ. ಉಮೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.