ಕನಕಪುರ ನಗರಸಭೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಭೇಟಿ ನೀಡಿ ದಾಖಲೆ ಪರಿಶೀಲನೆ ಮಾಡುತ್ತಿರುವುದು
ಕನಕಪುರ: ಲೋಕಾಯುಕ್ತ ಅಧಿಕಾರಿಗಳು ಹಳೆಯ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಕಚೇರಿಗೆ ಸೋಮವಾರ ಭೇಟಿ ನೀಡಿ ಕಡತ ಪರಿಶೀಲನೆ ನಡೆಸಿದರು.
ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದ ತಂಡವು ನಗರಸಭೆ ಕಚೇರಿಗೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿತು.
2022ರಲ್ಲಿ ಸಾರ್ವಜನಿಕರ ದೂರಿನ ಹಿನ್ನೆಲೆ ಅಂದಿನ ಎಸಿಬಿ ಅಧಿಕಾರಿಗಳು ನಗರಸಭೆ ಕಚೇರಿ ಮೇಲೆ ಧಿಡೀರ್ ದಾಳಿ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದರು. ಆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿನ ಲೋಕಾಯುಕ್ತ ಅಧಿಕಾರಿಗಳ ತಂಡವು ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
ಭೇಟಿ ವೇಳೆ ಹಾಜರಾತಿ, ಆರ್‌ಟಿಐ ಅರ್ಜಿ, ಜನನ ಮತ್ತು ನೋಂದಣಿ, ಡಾಟಾ ಎಂಟ್ರಿ ಸೇರಿದಂತೆ ಕಚೇರಿಯ ವಿವಿಧೆಡೆ ಭೇಟಿ ನೀಡಿ ಕಡತ ಪರಿಶೀಲಿಸಿದರು. ನಗರಸಭೆ ಕಚೇರಿಯಲ್ಲಿನ ಕಡತ ಪರಿಶೀಲನೆ ನಂತರ ತಾಲ್ಲೂಕು ಪಂಚಾಯಿತಿ, ಸರ್ವೆ ಇಲಾಖೆ, ಆಹಾರ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ ಸಾರ್ವಜನಿಕರ ದೂರುಗಳು ಎಷ್ಟಿವೆ? ವಿಲೇವಾರಿಯಾಗಿರುವ ದೂರುಗಳೆಷ್ಟು ಎಂದು ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಆಹಾರ ಇಲಾಖೆಯಲ್ಲಿ ಅನಧಿಕೃತವಾಗಿ ಡಾಟಾ ಎಂಟ್ರಿ ಆಪರೇಟರ್ ಮತ್ತು ಜವಾನನ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅವರ ವೇತನ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರು.
ಅನಧಿಕೃತವಾಗಿ ಕೆಲಸಕ್ಕೆ ನೇಮಕ ಮಾಡಿಕೊಂಡಿರುವ ಬಗ್ಗೆ ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಈ ಹಿಂದೆ ಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಆಪರೇಟರ್ ಮತ್ತು ಜವಾನನ ಕೆಲಸ ನಿರ್ವಹಿಸುತ್ತಿರುವವರನ್ನು ತೆಗೆದುಕೊಳ್ಳಲಾಗಿತ್ತು. ಸರ್ಕಾರವು ನಂತರದಲ್ಲಿ ಆ ಆದೇಶ ಹಿಂಪಡೆದಿದೆ. ಕಚೇರಿಯಲ್ಲಿ ಸಿಬ್ಬಂದಿ ಕೊರತೆಯಿಂದ ಅವರನ್ನೇ ಮುಂದುವರೆಸುತಿದ್ದೇವೆ. ಕಾನೂನಾತ್ಮಕವಾಗಿ ತೊಡಕಾದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ತಂಡದಲ್ಲಿ ಅಧಿಕಾರಿಗಳಾದ ರಮ್ಯ, ರಘು, ಶಿವಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.