ADVERTISEMENT

‘ಮಕ್ಕಳನ್ನು ವಿಶ್ವಮಾನವರನ್ನಾಗಿ ಮಾಡಿ’

ಹಸಿದವರಿಗೆ ಅನ್ನ ನೀಡುವಂತೆ ಕಗ್ಗ ಪ್ರೇರೇಪಣೆ ನೀಡಿದೆ – ಕುಂ.ವೀರಭದ್ರಪ್ಪ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 13:45 IST
Last Updated 17 ಜನವರಿ 2019, 13:45 IST
ಡಿವಿಜಿ ಪ್ರಶಸ್ತಿ ನೀಡಿ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯರನ್ನು ಸಿ.ಬಿ.ಅಶೋಕ್‌ ಸನ್ಮಾನಿಸಿದರು
ಡಿವಿಜಿ ಪ್ರಶಸ್ತಿ ನೀಡಿ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯರನ್ನು ಸಿ.ಬಿ.ಅಶೋಕ್‌ ಸನ್ಮಾನಿಸಿದರು   

ಮಾಗಡಿ: ‘ಆಂಗ್ಲ ಭಾಷೆಯು ಅಡುಗೆ ಕೋಣೆಯ ಭಾಷೆ ಆಗಿಬಿಟ್ಟಿದೆ. ಆದರೆ, ಅದು ಅಂಗಳದ ಭಾಷೆಯಾಗಬೇಕು. ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿಸಲು ಆಳುವ ವರ್ಗದವರು ಯೋಜನೆ ರೂಪಿಸಿಬೇಕು’ ಎಂದು ಸಾಹಿತಿ ಕುಂ. ವೀರಭದ್ರಪ್ಪ ಒತ್ತಾಯಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಡಿವಿಜಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆಯ ವತಿಯಿಂದ ಗುರುವಾರ ಮಾರುತಿ ಪಬ್ಲಿಕ್ ಶಾಲೆಯ ಆವರಣದಲ್ಲಿ ನಡೆದ ‘ಡಿವಿಜಿ ಸಂಸ್ಮರಣಾ ದಿನಾಚರಣೆ’ ಉದ್ಘಾಟಿಸಿ ಅವರು ಮಾತನಾಡಿದರು.

₹4 ಸಾವಿರ ಬೆಲೆಯ ಬೂಟುಗಳನ್ನು ತಂದರೂ ಅವುಗಳನ್ನು ಅಡುಗೆ ಮನೆಗೆ ಕೊಂಡೊಯ್ಯುವುದಿಲ್ಲ. ಅಂತೆಯೇ ಆಂಗ್ಲ ಭಾಷೆ.ಕನ್ನಡ ಮಾಧ್ಯಮಗಳ ಸರ್ಕಾರಿ ಶಾಲೆಗಳಿಗೆ ಪ್ರೋತ್ಸಾಹ ಕೊಡುವ ಕೆಲಸವನ್ನು ಮುಖ್ಯಮಂತ್ರಿ ಮಾಡಬೇಕು. ಸಾವಿರ ಆಂಗ್ಲಭಾಷಾ ಶಾಲೆ ತೆರೆಯುವುದು ಅವೈಜ್ಞಾನಿಕ ವಿಧಾನವಾಗಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ನಾಲ್ಕು ಗೋಡೆಗಳ ನಡುವೆ ಕಲಿಯುವುದೇ ಶಿಕ್ಷಣವಲ್ಲ. ಮಕ್ಕಳಲ್ಲಿ ಸ್ವಾವಲಂಬನೆ, ಸರಳತೆ, ಸಹಜತೆ, ಸಮಾನತೆ ಬೆಳೆಸುವುದೇ ನಿಜವಾದ ಶಿಕ್ಷಣವಾಗಬೇಕು.ಪೋಷಕರು ಮತ್ತು ಶಿಕ್ಷಕರು ಸೇರಿ ಮಕ್ಕಳನ್ನು ಡಿವಿಜಿ ಅವರಂತೆ ವಿಶ್ವಮಾನವರನ್ನಾಗಿ ಬೆಳೆಸಬೇಕು. ಸರ್ಕಾರ ಡಿವಿಜಿ ಮತ್ತು ಸರ್ವಜ್ಞ ಅವರಂತಹ ಮೇರು ವ್ಯಕ್ತಿಗಳ ಜೀವನ ಸಂದೇಶಗಳನ್ನು ಎಲ್ಲ ಕಡೆ ಬಿತ್ತಿ ಬೆಳೆಸಲು ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

‘ಕನ್ನಡ ಸಾಹಿತ್ಯದ ಸರಳತೆ, ಸಜ್ಜನಿಕೆಯ ಪ್ರತಿರೂಪ ಡಿವಿಜಿ. ಮೈಸೂರಿನ ದಿವಾನರು ನಮ್ಮನ್ನು ಕೇಳಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಬೇಕು ಎಂಬ ಷರತ್ತು ವಿಧಿಸಿದ್ದರು. ಕೂಡಲೆ ಮದ್ರಾಸಿಗೆ ತೆರಳಿದ ಡಿವಿಜಿ ಪತ್ರಿಕೆ ಪ್ರಕಟಣೆಗೆ ಸಂಬಂಧಿಸಿದಂತಹ 30 ಸಾವಿರ ಪುಸ್ತಕಗಳನ್ನು ಅಧ್ಯಯನ ಮಾಡಿ ವರದಿ ಪ್ರಕಟಿಸಲು ಮುಂದಾದಮೇಲೆ ದಿವಾನರು ಬಾಯಿಗೆ ಬೀಗ ಹಾಕಿಕೊಂಡರು’ ಎಂದು ನೆನೆದರು.

ಸಮಗ್ರ ಕರ್ನಾಟಕದ ದರ್ಶನ ಮಾಡಿಸಿದರೆ ಮಕ್ಕಳಲ್ಲಿ ಮತ್ತೊಬ್ಬ ಡಿವಿಜಿ ಬೆಳೆಯಲಿದ್ದಾರೆ. ಮಾನವೀಯ ಮೌಲ್ಯಗಳು ದಫನ್ ಆಗಿರುವುದೇ ಇಂದಿನ ದುಸ್ಥಿಗೆ ಕಾರಣ. ಬಡಿಗೆ ಕೈಯಲ್ಲಿ ಹಿಡಿಯೋದೆ ಕೆಲವರಿಗೆ ಹೆಮ್ಮೆಯೆನಿಸಿದರೆ, ದೀನದಲಿತರಿಗೆ ಕಗ್ಗ ದಾರದೀಪವಾಗಿದೆ ಎಂದು ಹೇಳಿದರು.

ಡಿ.ವಿ. ಗುಂಡಪ್ಪ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಮಲಯ ಶಾಂತಮುನಿ ದೇಶೀ ಕೇಂದ್ರ ಶಿವಾಚಾರ್ಯರು, ತೀರ್ಥಕೊಡುವ ಕೈಗಳು ವಿಷ ಇಕ್ಕುವ ಇಂದಿನ ದಿನಮಾನಗಳಲ್ಲಿ ಸಿದ್ಧಗಂಗಾ ಶ್ರೀಗಳು ಮಹಾನ್‌ ಸಂತರು ಎಂದು ಹೇಳಿದರು.

‘ಪಾಠ ಕಲಿಸುವುದೇ ಶಿಕ್ಷಣವಲ್ಲ. ಡಿ.ವಿ.ಜಿ. ಪತ್ರಕರ್ತ, ತ್ಯಾಗಿ, ಯೋಗಿ, ನಗರಸಭಾ ಸದಸ್ಯ, ಲೇಖಕ, ಅವರ ಬದುಕು ಬರಹಗಳನ್ನು ಯುವಜನತೆಗೆ ಮನವರಿಕೆ ಮಾಡಿಕೊಡಬೇಕಿದೆ. ಕಗ್ಗ ನಮ್ಮೆಲ್ಲರ ಕೈದೀವಿಗೆಯಾಗಬೇಕು’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ ಎಸ್‌.ಮಾತನಾಡಿ, ‘ನಾನು ಪಿಯುಸಿ ವಿದ್ಯಾರ್ಥಿಯಾಗಿದ್ದಾಗ ಕುಂ.ವೀ ಅವರ ಕೆಂಡದ ಮಳೆ ನಮಗೆ ಪಠ್ಯವಾಗಿತ್ತು. ಇಂದು ಅವರನ್ನು ನೋಡಿ, ಅವರ ವಿಚಾರಧಾರೆ ಕೇಳಿ ಸಂತಸವಾಯಿತು’ ಎಂದರು.

ಪ್ರಶಸ್ತಿ: ಕರ್ನಾಟಕ ಪ್ರತಿಭಾ ಕೇಂದ್ರದ ಅಧ್ಯಕ್ಷ ಪಾನ್ಯಂ ನಟರಾಜು, ಮಲಯ ಶಾಂತಮುನಿಸ್ವಾಮಿಗೆ ಡಿವಿಜಿ ಪ್ರಶಸ್ತಿ ನೀಡಿ ವೇದಿಕೆಯ ಅಧ್ಯಕ್ಷ ಸಿ.ಬಿ.ಅಶೋಕ್, ಚಿಕ್ಕವೀರಯ್ಯ, ಗೌರಿಶ್‌, ಸಿಂಗಾರೆಡ್ಡಿ, ಕುದೂರಿನ ವೆಂಕಟೇಶ್‌ ಗೌರವಿಸಿದರು.

ಮಾರುತಿ ಶಾಲೆಯ ಸಂಸ್ಥಾಪಕ ಗಂಗರಾಜು, ತಾಲ್ಲೂಕು ಕಸಾಪ ಅಧ್ಯಕ್ಷೆ ಕಲ್ಪನಾಶಿವಣ್ಣ ವೇದಿಕೆಯಲ್ಲಿದ್ದರು. ಕಗ್ಗ ಕಾವ್ಯಗಾಯನ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಡಬಗೆರೆ ಮುನಿರಾಜು ಕಗ್ಗದ ಗಾಯನ ನಡೆಸಿಕೊಟ್ಟರು. ಪಟ್ಟಣದ ಎಲ್ಲ ಶಾಲೆಗಳ ಮಕ್ಕಳು ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.