ADVERTISEMENT

ಕನಕಪುರ: ಮಲ್ಲಯ್ಯನಕೆರೆ ಒತ್ತುವರಿ ತೆರವು ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 5:49 IST
Last Updated 10 ಅಕ್ಟೋಬರ್ 2021, 5:49 IST
ಒತ್ತುವರಿಯಾಗಿದ್ದ ಮಲ್ಲಯ್ಯನಕೆರೆಯನ್ನು ತೆರವುಗೊಳಿಸಲಾಯಿತು
ಒತ್ತುವರಿಯಾಗಿದ್ದ ಮಲ್ಲಯ್ಯನಕೆರೆಯನ್ನು ತೆರವುಗೊಳಿಸಲಾಯಿತು   

ಕನಕಪುರ:ತಾಲ್ಲೂಕಿನ ಹಾರೋಹಳ್ಳಿ ಹೋಬಳಿಯ ಕೊಳ್ಳಿಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಳುಗೊಂಡನಹಳ್ಳಿ ಮಲ್ಲಯ್ಯನಕೆರೆ ಒತ್ತುವರಿಯಾಗಿದ್ದು, ಶುಕ್ರವಾರ ತೆರವುಗೊಳಿಸಲಾಯಿತು.

ಹುಳುಗೊಂಡನಹಳ್ಳಿ ಸರ್ವೆ ನಂ. 67ರಲ್ಲಿ 6.36 ಎಕರೆ ಕೆರೆ ಜಾಗವಿದೆ. ಕೆರೆಯಲ್ಲಿ ನೀರು ತುಂಬಿ ಗ್ರಾಮಕ್ಕೆ ಜೀವನಾಡಿಯಾಗಿತ್ತು. ಕಾಲ ಕ್ರಮೇಣ ಅಕ್ಕಪಕ್ಕದವರು ಸುಮಾರು 3 ಎಕರೆಯಷ್ಟು ಕೆರೆಯನ್ನು ಒತ್ತುವರಿ ಮಾಡಿಕೊಂಡಿದ್ದರು.

ಇತ್ತೀಚೆಗೆ ರೈತ ಸಂಘದ ಕಾರ್ಯಕರ್ತರು, ಸ್ಥಳೀಯ ಮುಖಂಡರು ಕೆರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹೋರಾಟ ಪ್ರಾರಂಭಿಸಿದ್ದರು. ಒತ್ತುವರಿಯಾಗಿರುವ ಜಾಗವನ್ನು ಬಿಡಿಸುವಂತೆ ಒತ್ತಾಯಿಸಿ ತಾಲ್ಲೂಕು ಆಡಳಿತ ಮತ್ತು ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದರು.

ADVERTISEMENT

ಈ ದೂರಿನ ಅನ್ವಯ ಗ್ರಾಮ ಪಂಚಾಯಿತಿಯು ಕಂದಾಯ ಇಲಾಖೆ ಮೂಲಕ ಸರ್ವೆ ಇಲಾಖೆಗೆ ಮೂಲ ಕೆರೆಯ ಜಾಗವನ್ನು ಅಳತೆ ಮಾಡಿ ಗಡಿ ಗುರ್ತಿಸುವಂತೆ ಪತ್ರ ವ್ಯವಹಾರ ನಡೆಸಿತ್ತು. ಸರ್ವೆ ಅಧಿಕಾರಿಗಳು ಸರ್ವೆ ಮಾಡುವುದಕ್ಕೂ ಒಂದು ವಾರ ಮುಂಚಿತವಾಗಿ ಒತ್ತುವರಿದಾರರು ಸೇರಿದಂತೆ ಸುತ್ತಮುತ್ತಲ ರೈತರಿಗೆ ನೋಟಿಸ್‌ ನೀಡಲಾಗಿತ್ತು.

ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಪಂಚಾಯಿತಿ ಅಧಿಕಾರಿಗಳು, ರೈತ ಸಂಘ ಹಾಗೂ ಗ್ರಾಮದ ಮುಖಂಡರು ಸರ್ವೆ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಒತ್ತುವರಿಯಾಗಿರುವ ಜಾಗವನ್ನು ಜೆಸಿಬಿ ಯಂತ್ರದ ಮೂಲಕ ಟ್ರಂಚ್‌ ಮಾಡಿಸಿ ಕೆರೆಯ ಸುಪರ್ದಿಗೆ
ಸೇರಿಸಿಕೊಂಡರು.

‘ಹುಳುಗೊಂಡನಹಳ್ಳಿ ಮಲ್ಲಯ್ಯನಕೆರೆ ಒತ್ತುವರಿಯನ್ನು ಸ್ಥಳೀಯ ರೈತ ಮುಖಂಡರು ನೀಡಿದ ದೂರಿನನ್ವಯ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲಾಗಿದೆ. ಇನ್ನು ಹಲವು ಕೆರೆಗಳು ಒತ್ತುವರಿಯಾಗಿದ್ದು ಮುಂದೆ ತೆರವು ಕಾರ್ಯ ಮಾಡಲಾಗುವುದು’ ಎಂದುಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ. ದೊಡ್ಡಲಿಂಗೇಗೌಡ ತಿಳಿಸಿದರು.

‘ಕೆರೆಗೆ ಕೈಗಾರಿಕೆಗಳ ತ್ಯಾಜ್ಯ ಸೇರುತ್ತಿದ್ದು, ಕಾರ್ಖಾನೆಗಳಿಗೆ ನೋಟಿಸ್‌ ನೀಡಿ ತ್ಯಾಜ್ಯ ಬಿಡದಂತೆ ಕ್ರಮ ಕೈಗೊಳ್ಳಲಾಗುವುದು. ಒಟ್ಟು 6.38 ಎಕರೆ ಜಮೀನಿದ್ದು, ಕೆರೆಯನ್ನು ಮತ್ತೆ ಪುನಶ್ಚೇತನಗೊಳಿಸಿ ಪಾರ್ಕ್‌ ಆಗಿ ಅಭಿವೃದ್ಧಿಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.