ಮಾಗಡಿ: ಪಟ್ಟಣದ ಹೊಸಪೇಟೆ ಬಳಿ ಬೆಂಗಳೂರು–ಕುಣಿಗಲ್ ರಸ್ತೆಯಲ್ಲಿ ಬಿದ್ದಿರುವ ಆಳುದ್ದದ ಗುಂಡಿಗಳಿಗೆ ಪುರಸಭೆ ವತಿಯಿಂದ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಸುರಿದು ಗುಂಡಿ ಮುಚ್ಚಲಾಯಿತು.
ಬುಧವಾರದ ‘ಪ್ರಜಾವಾಣಿ’ಯಲ್ಲಿ ರಸ್ತೆಯಲ್ಲಿನ ಗುಂಡಿ ಮುಚ್ಚಿಸಿ ಸುದ್ದಿ ಪ್ರಕಟವಾಗಿತ್ತು. ಜಾಗೃತರಾದ ಪುರಸಭೆ ಅಧಿಕಾರಿಗಳು, ಟ್ರ್ಯಾಕ್ಟರ್‌ನಲ್ಲಿ ಮಣ್ಣು ಸಾಗಿಸಿ, ಗುಂಡಿಗಳಿಗೆ ಸುರಿದು ತಾತ್ಕಾಲಿಕವಾಗಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜೆಸಿಬಿ ಬಳಸಿ ರಸ್ತೆ ಬದಿ ನೀರು ಹರಿಯವಂತೆ ತಾತ್ಕಾಲಿಕ ಚರಂಡಿ ವ್ಯವಸ್ಥೆ ಮಾಡಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ನಟರಾಜು ಮಾತನಾಡಿ, ಬೆಂಗಳೂರು–ಕುಣಿಗಲ್ ರಸ್ತೆ ಲೋಕೋಪಯೋಗಿ ಇಲಾಖೆಗೆ ಸೇರಿದೆ. ಆದರೂ ವಾಹನ ಸವಾರರಿಗೆ ತೊಂದರೆಯಾಗುವುದನ್ನು ಗಮನಿಸಿದೆವು. ಲೋಕೋಪಯೋಗಿ ಇಲಾಖೆಯ ಅಧಿಕಾರಿ ರಾಮಣ್ಣ ಅವರ ಗಮನಕ್ಕೆ ತಂದು ತಾತ್ಕಾಲಿಕವಾಗಿ ಮಣ್ಣು ಸುರಿದು ಗುಂಡಿಗಳನ್ನು ಮುಚ್ಚಿಸಿ, ನೀರು ರಸ್ತೆಯ ಮೇಲೆ ಹರಿಯದಂತೆ ಮಾಡಿದ್ದೇವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.