ADVERTISEMENT

ವಿಶ್ವ ಪತ್ರಿಕಾ ವಿತರಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 3:14 IST
Last Updated 23 ಸೆಪ್ಟೆಂಬರ್ 2021, 3:14 IST
ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಸಮಾಜ ಸೇವಕ ಮಹೇಂದ್ರ ಮನ್ನೋಟ್, ರಮೇಶ್ ಗೌಡ ಹಾಜರಿದ್ದರು
ಚನ್ನಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಸಮಾಜ ಸೇವಕ ಮಹೇಂದ್ರ ಮನ್ನೋಟ್, ರಮೇಶ್ ಗೌಡ ಹಾಜರಿದ್ದರು   

ಚನ್ನಪಟ್ಟಣ: ‘ಒಬ್ಬ ಸಾಮಾನ್ಯ ವ್ಯಕ್ತಿ ಕೂಡ ತನ್ನ ಕರ್ತವ್ಯವನ್ನು ಹಾಗೂ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರೆ ಅದು ದೇಶಸೇವೆಯಾಗಿ ದೇಶದ ಅಭಿವೃದ್ಧಿಯಾಗುತ್ತದೆ’ ಎಂದು ಗೋರಕ್ಷಣಾ ಸಂಘಟಕ ಹಾಗೂ ಸಮಾಜ ಸೇವಕ ಮಹೇಂದ್ರ ಮನ್ನೋಟ್ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಪ್ರಯುಕ್ತ ಬುಧವಾರ ಆಯೋಜಿಸಿದ್ದ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಣೆ ಮತ್ತು ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸಹಕಾರ ನೀಡಿರುವ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶ ಸೇವೆ ಮಾಡಲು ಮಂತ್ರಿ, ರಾಜಕಾರಣಿ, ಅಧಿಕಾರಿಯೇ ಆಗಬೇಕು ಎಂದೇನಿಲ್ಲ. ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ವಿತರಕರು ಸಹ ಸೇವಕರು. ಎಲ್ಲರ ಸಹಕಾರವಿದ್ದಾಗ ಮಾತ್ರ ದೇಶಕ್ಕೆ ಬರುವ ಯಾವುದೇ ಸಮಸ್ಯೆಯನ್ನು ನಾವು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

ವೇದಿಕೆಯ ರಾಜ್ಯ ಘಟಕದ ಆಧ್ಯಕ್ಷ ರಮೇಶ್ ಗೌಡ ಮಾತನಾಡಿ, ‘ಕೊರೊನಾ ಸಂಕಷ್ಟದಲ್ಲಿಯೂ ಮುಂಜಾನೆ ಪತ್ರಿಕೆಗಳನ್ನು ಮನೆ ಮನೆಗೆ ಹಾಕುವ ಪತ್ರಿಕಾ ವಿತರಕರನ್ನು ಪ್ರೋತ್ಸಾಹಿಸಿ ಗೌರವಿಸುವುದು ಎಲ್ಲರ ಕರ್ತವ್ಯ’ ಎಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕಿನಲ್ಲಿ ಪತ್ರಿಕೆ ವಿತರಣೆ ಮಾಡುವ 100ಕ್ಕೂ ಹೆಚ್ಚು ಮಂದಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಕೊರೊನಾ ಸಂಕಷ್ಟದಲ್ಲಿದ್ದವರಿಗೆ ಸಹಕಾರ ನೀಡಿದ್ದ ಡಾ. ಟಿ.ವಿ.ಶಂಕರ್, ಶಿವರಾಮೇಗೌಡ ನಾಗವಾರ, ಡಾ. ಮಲ್ಲೇಶ್ ಗೌಡಗೆರೆ, ಕೆ.ಟಿ.ಲಕ್ಷ್ಮಮ್ಮ, ಜೆ.ಎಸ್. ರಾಜು, ಚಿಕ್ಕಕೊಮ್ಮಾರಿಗೌಡ, ಚಿದಾನಂದ, ಸೈಯದ್ ಎಕ್ಬಾಲ್ ಬೇಗ್, ಗೋಪಾಲ್ ದ್ಯಾವಪಟ್ಟಣ, ರೈತಮುಖಂಡ ದಿವಂಗತ ರಾಮು ಪತ್ನಿ ನಾಗರತ್ನ, ಕ್ರೀಡಾಪಟುಗಳಾದ ಸಯ್ಯದ್ ಸಾಕಿಬ್, ಸಾವಂತ್ ಅವರನ್ನು ಸನ್ಮಾನಿಸಲಾಯಿತು.

ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿನಿಲಯದ ನಿರ್ದೇಶಕ ಚಕ್ಕೆರೆ ವೆಂಕಟರಾಮೇಗೌಡ, ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಬೇವೂರು ಯೋಗೀಶ್ ಗೌಡ, ರಾಜ್ಯ ಘಟಕದ ಉಪಾಧ್ಯಕ್ಷರಾದ ಶ್ರೀಧರ್, ರಂಜಿತ್ ಗೌಡ, ಮುಖಂಡ ಬೋರ್ ವೆಲ್ ರಂಗನಾಥ್, ಡಾ. ಮಲವೇಗೌಡ, ಎಲೇಕೇರಿ ಮಂಜುನಾಥ್, ಎಂಟಿಆರ್ ತಿಮ್ಮರಾಜು, ರೈತಸಂಘದ ಗೌರವಾಧ್ಯಕ್ಷ ಕೃಷ್ಣಪ್ಪ, ಎಸ್.ಟಿ. ನಾರಾಯಣಗೌಡ, ವಿ.ಬಿ.ಚಂದ್ರು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ವೇದಿಕೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.