ADVERTISEMENT

ಕಣದಲ್ಲಿ ಒಬ್ಬರೇ ಮಹಿಳಾ ಅಭ್ಯರ್ಥಿ!

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಸ್ತ್ರೀಯರಿಗಿಲ್ಲ ಪ್ರಾತಿನಿಧ್ಯ

ಆರ್.ಜಿತೇಂದ್ರ
Published 5 ಏಪ್ರಿಲ್ 2019, 7:15 IST
Last Updated 5 ಏಪ್ರಿಲ್ 2019, 7:15 IST
   

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಈ ಬಾರಿ 15 ಮಂದಿ ಸ್ಪರ್ಧೆಯಲ್ಲಿ ಉಳಿದಿದ್ದು, ಅವರಲ್ಲಿ ಏಕೈಕ ಮಹಿಳಾ ಅಭ್ಯರ್ಥಿ ಕಣದಲ್ಲಿ ಇದ್ದಾರೆ.

ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ಟಿ.ಸಿ. ರಮಾ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ಘಟಾನುಘಟಿ ಅಭ್ಯರ್ಥಿಗಳ ನಡುವೆ ತಮ್ಮದೇ ಛಾಪು ಮೂಡಿಸುವ ಪ್ರಯತ್ನದಲ್ಲಿ ಇದ್ದಾರೆ. ಅವರನ್ನು ಹೊರತುಪಡಿಸಿ ಉಳಿದ ಯಾವ ಮಹಿಳೆಯೂ ನಾಮಪತ್ರ ಸಲ್ಲಿಸುವ ಮನಸ್ಸು ಮಾಡಿಲ್ಲ. 2014ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಯಾವೊಬ್ಬ ಮಹಿಳೆಯೂ ಸ್ಪರ್ಧೆಯಲ್ಲಿ ಇರಲಿಲ್ಲ.

ಕ್ಷೇತ್ರದ ವ್ಯಾಪ್ತಿಯಲ್ಲಿ ಮಹಿಳೆಯರಿಗಿಂತ 79,172 ಪುರುಷ ಮತದಾರರು ಅಧಿಕವಾಗಿದ್ದಾರೆ. ಆದರೆ ಮಹಿಳಾ ಮತದಾರರ ಪಾತ್ರವೂ ನಿರ್ಣಾಯಕವಾಗಿಯೇ ಇದೆ. ಆದಾಗ್ಯೂ ಈ ಬಾರಿ ಯಾವ ಪಕ್ಷಗಳೂ ಸ್ತ್ರೀಯರಿಗೆ ಅವಕಾಶ ನೀಡುವ ಮನಸ್ಸು ಮಾಡಿಲ್ಲ.

ADVERTISEMENT

ಒಮ್ಮೆ ಮಾತ್ರ ಗೆಲುವು: ಬೆಂಗಳೂರು ಗ್ರಾಮಾಂತರ ಹಾಗೂ ಅದರ ಹಿಂದೆ ಅಸ್ತಿತ್ವದಲ್ಲಿದ್ದ ಕನಕಪುರ ಲೋಕಸಭಾ ಕ್ಷೇತ್ರದಿಂದ ಒಮ್ಮೆ ಮಾತ್ರ ಮಹಿಳೆ ಗೆದ್ದಿದ್ದಾರೆ. ಆ ದಾಖಲೆ ಇರುವುದು ತೇಜಸ್ವಿನಿ ಗೌಡ ಹೆಸರಿನಲ್ಲಿ.

2004ರಲ್ಲಿ ನಡೆದ ಕನಕಪುರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ನಾಮಪತ್ರ ಸಲ್ಲಿಕೆಯ ಕಡೆಯ ದಿನ ಇವರನ್ನು ತನ್ನ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಎದುರಾಳಿಯಾಗಿ ಸೆಣೆಸಿದ ಅವರು 1.16 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿ ಇತಿಹಾಸ ಬರೆದರು. ಬಿಜೆಪಿ ಅಭ್ಯರ್ಥಿ ರಾಮಚಂದ್ರ ಗೌಡ ದ್ವಿತೀಯ ಸ್ಥಾನ ಗಳಿಸಿದರೆ, ದೇವೇಗೌಡರು ನಂತರದ ಸ್ಥಾನಕ್ಕೆ ತಳ್ಳಲ್ಪಟ್ಟರು.

2009ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದಲೂ ತೇಜಸ್ವಿನಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಆದರೆ ಈ ಚುನಾವಣೆಯಲ್ಲಿ ಅವರ ವಿರುದ್ಧ ದೇವೇಗೌಡರ ಪುತ್ರ ಎಚ್‌.ಡಿ. ಕುಮಾರಸ್ವಾಮಿ ಗೆದ್ದು ಸೇಡು ತೀರಿಸಿಕೊಂಡರು. ತೇಜಸ್ವಿನಿ ಮೂರನೇ ಸ್ಥಾನಕ್ಕೆ ಕುಸಿಯಲ್ಪಟ್ಟರು.

ಅನಿತಾ ಸ್ಪರ್ಧೆ: 2013ರಲ್ಲಿ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ ಕುಮಾರಸ್ವಾಮಿ ಕ್ಷೇತ್ರದಿಂದ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿದರು. ಈ ಮೂಲಕ ಮತ್ತೊಬ್ಬ ಮಹಿಳೆಗೆ ರಾಜಕೀಯ ಪ್ರಾತಿನಿಧ್ಯದ ಅವಕಾಶ ಒದಗಿ ಬಂತು. ಆದರೆ ತೀವ್ರ ಸ್ಪರ್ಧೆಯ ನಡುವೆಯೂ ಅನಿತಾ ಸೋಲನ್ನಪ್ಪಿದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಕಣಕ್ಕೆ ಇಳಿದಿದ್ದ ಡಿ.ಕೆ. ಸುರೇಶ್‌ 1.37 ಲಕ್ಷ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು.

ನಿಶಾಗೆ ಸಿಗದ ಅವಕಾಶ

ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣದ ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್‌ ಪುತ್ರಿ ನಿಶಾರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಅದಕ್ಕೆ ಪಕ್ಷದ ಸ್ಥಳೀಯ ಕಾರ್ಯಕರ್ತರು ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದರು. ಕುಟುಂಬ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂಬ ಅಂಶವನ್ನೂ ಪರಿಗಣಿಸಿದ ಬಿಜೆಪಿ ಹೈಕಮಾಂಡ್‌ ನಿಶಾರ ಸ್ಪರ್ಧೆಗೆ ರೆಡ್‌ ಸಿಗ್ನಿಲ್‌ ತೋರಿತು.

ರಾಮನಗರದಲ್ಲಿ ಸ್ತ್ರೀಯರೇ ಹೆಚ್ಚು

ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಮನಗರ ಜಿಲ್ಲೆಯಲ್ಲಿ ಪುರುಷರಿಗಿಂತ ಮಹಿಳಾ ಮತದಾರರೇ ಹೆಚ್ಚಿರುವುದು ವಿಶೇಷ. ಇಲ್ಲಿ 4,30,601 ಪುರುಷ ಮತದಾರರಿಗೆ ಪ್ರತಿಯಾಗಿ 4,34,894 ಮಹಿಳೆಯರು ಇದ್ದಾರೆ. ಆದಾಗ್ಯೂ ಜಿಲ್ಲೆಯಿಂದ ಈವರೆಗೆ ಯಾವೊಬ್ಬ ಸ್ತ್ರೀಯೂ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಮನಸ್ಸು ಮಾಡಿಲ್ಲ.

ಅಂಕಿ–ಅಂಶ

24,56,207–ಕ್ಷೇತ್ರದಲ್ಲಿನ ಒಟ್ಟು ಮತದಾರರು

12,67,379–ಪುರುಷ ಮತದಾರರು

11,88,207–ಮಹಿಳಾ ಮತದಾರರು

340–ತೃತೀಯ ಲಿಂಗಿ ಮತದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.