ADVERTISEMENT

ದೇವಾಲಯ ಸ್ಥಳಾಂತರಕ್ಕೆ ಗ್ರಾಮಸ್ಥರ ವಿರೋಧ

ಹೆದ್ದಾರಿಗೆ ಹೆಚ್ಚುವರಿ ಜಾಗ ತೆಗೆದುಕೊಳ್ಳಲು ಅವಕಾಶ ನೀಡದಿರಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಜನವರಿ 2019, 13:17 IST
Last Updated 16 ಜನವರಿ 2019, 13:17 IST
ವೀರಭದ್ರಸ್ವಾಮಿ ದೇವಾಲಯ
ವೀರಭದ್ರಸ್ವಾಮಿ ದೇವಾಲಯ   

ಕನಕಪುರ: ಇತಿಹಾಸ ಪ್ರಸಿದ್ಧ ಶಿವನಹಳ್ಳಿ ಶ್ರೀ ವೀರಭದ್ರಸ್ವಾಮಿ ದೇವಾಲಯದಲ್ಲಿನ ಮೂಲ ವಿಗ್ರಹವನ್ನು ಯಾವುದೇ ಕಾರಣಕ್ಕೂ ಸ್ಥಳಾಂತರ ಮಾಡಲು ಸಾಧ್ಯವಿಲ್ಲ. ಹೆದ್ದಾರಿಯವರು ಹೆಚ್ಚುವರಿ ಜಾಗ ತೆಗೆದುಕೊಳ್ಳಲು ಅವಕಾಶ ನೀಡಬಾರದೆಂದು ಶಿವನಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ನಿರ್ಣಯಿಸಿದರು.

ನೂರಾರು ವರ್ಷಗಳಷ್ಟು ಹಳೆಯದಾದ ವೀರಭದ್ರಸ್ವಾಮಿ ದೇವಾಲಯದ ಜಾಗವನ್ನು ರಾಷ್ಟ್ರೀಯ ಹೆದ್ದಾರಿ ಅಗಲ ಹೆಚ್ಚಳಕ್ಕೆ ಹೆಚ್ಚುವರಿಯಾಗಿ ಒತ್ತುವರಿ ಮಾಡುತ್ತಿರುವ ಸಂಬಂಧ ದೇವಾಲಯಕ್ಕೆ ಸೇರಿದ ಗ್ರಾಮದ ಜನತೆ ಸಭೆ ನಡೆಸಿ ಮಾತನಾಡಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮೊದಲಿಗೆ ರಸ್ತೆಯ ಎರಡೂ ಬದಿಯಲ್ಲಿ ವಿಸ್ತರಣೆಗೆ ಎಷ್ಟು ಜಾಗ ಬೇಕೋ ಅಷ್ಟನ್ನು ಗುರುತಿಸಿ ಪರಿಹಾರದ ಹಣವನ್ನು ನೀಡಿದ್ದಾರೆ. ಪರಿಹಾರದ ಹಣ ಪಡೆದ ಮೇಲೆ ಗ್ರಾಮಸ್ಥರು ಹಾಗೂ ದೇವಾಲಯದ ಅರ್ಚಕರು ಸೇರಿ ದೇವಾಲಯದ ಕೋಟೆ ತಲೆಯನ್ನು ಒಡೆದು ಕಾಂಪೌಂಡ್‌ ತೆರವುಗೊಳಿಸಿದ್ದಾರೆ. ಬಳಿಕ ಹೆದ್ದಾರಿ ಅಧಿಕಾರಿಗಳು ದೇವಾಸ್ಥಾನದ ಜಾಗವನ್ನು ಹೆಚ್ಚುವರಿಯಾಗಿ ಒತ್ತುವರಿ ಮಾಡಿ ಗರ್ಭಗುಡಿಯ ವರೆಗೂ ಬಂದಿದ್ದಾರೆ ಎಂದು ದೂರಿದರು.

ADVERTISEMENT

ರಸ್ತೆಯ ಬಲಭಾಗದಲ್ಲಿ ಜಾಗಕ್ಕೆ ಪರಿಹಾರದ ಹಣವನ್ನು ನೀಡಿದ್ದರೂ ಆ ಭಾಗದಲ್ಲಿ ರಸ್ತೆ ಅಗಲ ಮಾಡುತ್ತಿಲ್ಲ. ರಸ್ತೆಯ ಎಡ ಭಾಗವಾದ ದೇವಸ್ಥಾನದ ಜಾಗವನ್ನೇ ಹೆಚ್ಚುವರಿಯಾಗಿ ಒತ್ತುವರಿ ಮಾಡುತ್ತಿದ್ದಾರೆಂದು ಆರೋಪಿಸಿದರು.

ಮೊದಲು ಗುರುತು ಮಾಡಿದಷ್ಟೇ ಜಾಗವನ್ನು ತೆಗೆದುಕೊಳ್ಳಬೇಕು. ಹೆಚ್ಚುವರಿಯಾಗಿ ಜಾಗ ತೆಗೆದುಕೊಂಡರೆ ಗರ್ಭಗುಡಿಯಲ್ಲಿನ ಮೂಲ ವಿಗ್ರಹವನ್ನೇ ಸ್ಥಳಾಂತರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಪ್ರಸ್ತುತ ಬೆಂಗಳೂರಿನಿಂದ ಕನಕಪುರಕ್ಕೆ 4 ಪಥದ ರ‍ಸ್ತೆ ಹಾಗೂ ಕನಕಪುರದಿಂದ ದಿಂಡಿಗಲ್‌ವರಗೆ 2 ಪಥದ ರಸ್ತೆಯನ್ನು ಮಾಡುತ್ತಿದ್ದಾರೆ. ಅದರಂತೆ ಅದಕ್ಕೆ ಎಷ್ಟು ಜಾಗ ಬೇಕಿತ್ತೋ ಅಷ್ಟನ್ನು ಮಾತ್ರ ಸ್ವಾಧೀನ ಪಡಿಸಿಕೊಂಡು ಪರಿಹಾರ ನೀಡಿದ್ದಾರೆ ಎಂದರು.

ಗ್ರಾಮದ ವೀರಭಧ್ರಯ್ಯ ಮಾತನಾಡಿ, ‘ಹೆದ್ದಾರಿ ಅಧಿಕಾರಿಗಳು 6 ಪಥದ ರಸ್ತೆಗೆ ಬೇಕಾಗುವಷ್ಟು ಜಾಗವನ್ನು ಈಗಲೆ ಗುರುತಿಸುವುದಾದರೆ ಆ ಜಾಗವನ್ನು ಸರ್ಕಾರದಿಂದ ಸ್ವಾಧೀನ ಪಡಿಸಿಕೊಂಡು ಇಲಾಖೆಯಿಂದ ಅದನ್ನು ದಾಖಲೀಕರಣ ಮಾಡಿಕೊಡುವಂತೆ ಇಲಾಖೆ ಅಧಿಕಾರಿಗಳನ್ನು ಕೇಳಿದ್ದೇವೆ. ಅದಕ್ಕೆ ಅವರು ಒಪ್ಪುತ್ತಿಲ್ಲ’ ಎಂದರು.

ಶಿವನಹಳ್ಳಿ ಪಂಚಾಯಿತಿ ಅಧ್ಯಕ್ಷ ವೀರಪ್ಪ ಮಾತನಾಡಿ, ‘ಅಧಿಕಾರಿಗಳು ಸ್ವಾದೀನ ಪಡಿಸಿಕೊಂಡಿರುವಷ್ಟು ಜಾಗವನ್ನು ಮಾತ್ರ ಗುರುತು ಮಾಡಿದ್ದರು. ಮುಂದೆ ಅಗಲ ಹೆಚ್ಚಳದ ವೇಳೆ ಮತ್ತೆ ದೇವಾಲಯ ಒಡೆಯಬೇಕಾಗುತ್ತದೆ. ಅದಕ್ಕಾಗಿ ಈಗಲೆ ಜಾಗವನ್ನು ಬಿಟ್ಟು ದೇವಾಲಯ ನಿರ್ಮಾಣ ಮಾಡುವಂತೆ ಸಲಹೆ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದರೆ ಮಾತ್ರ ಹೆಚ್ಚುವರಿ ಜಾಗ ತೆಗೆದುಕೊಳ್ಳುತ್ತಾರೆ. ಇಲ್ಲವಾದಲ್ಲಿ ಮೊದಲು ಗುರುತು ಮಾಡಿರುವಷ್ಟೇ ಜಾಗವನ್ನು ತೆಗೆದುಕೊಳ್ಳುತ್ತಾರೆ’ ಎಂದು ತಿಳಿಸಿದರು.

ಇದ್ಕಕೆ ಒಪ್ಪದ ಗ್ರಾಮದ ಜನತೆ ಹತ್ತಾರು ಗ್ರಾಮಗಳಿಗೆ ಸೇರಿದ ಹಾಗೂ ಪುರಾತತ್ವ ಇಲಾಖೆಗೆ ಸೇರಿದ ಪ್ರಾಚೀನ ದೇವಾಲಯವಾಗಿದೆ. ಇಲ್ಲಿ ಉದ್ಭವ ಮೂರ್ತಿಯಿದ್ದು ಸ್ಥಳಾಂತರಿಸಲು ಆಗುವುದಿಲ್ಲ. ರಸ್ತೆಯ ಬಲಭಾಗದಲ್ಲಿ ಸ್ವಾದೀನ ಪಡಿಸಿಕೊಂಡಿರುವ ಜಾಗವನ್ನು ಬಳಸಿ ರಸ್ತೆ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ದೇವಸ್ಥಾನದ ಜಾಗವನ್ನು ಹೆಚ್ಚುವರಿಯಾಗಿ ತೆಗೆದುಕೊಳ್ಳಲು ಅವಕಾಶ ಕೊಡುವುದಿಲ್ಲ. ಯಾವುದೇ ಕಾರಣಕ್ಕೂ ಹೆಚ್ಚುವರಿ ಜಾಗವನ್ನು ತೆಗೆದುಕೊಳ್ಳಲು ಅವಕಾಶ ನೀಡದೆ ಈ ಹಿಂದೆ ಭೂ ಸ್ವಾಧೀನ ಮಾಡಿಕೊಂಡ ಜಾಗದಲ್ಲೇ ರಸ್ತೆ ಅಭಿವೃದ್ಧಿ ಮಾಡಬೇಕು. ದೇವಾಲಯ ಜೀರ್ಣೋದ್ಧಾರ ಕೆಲಸವನ್ನು ಶೀಘ್ರವೇ ಪ್ರಾರಂಭ ಮಾಡಬೇಕೆಂಬ ತೀರ್ಮಾನವನ್ನು ಸಭೆಯಲ್ಲಿ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.