ADVERTISEMENT

ಕನಕಪುರ: ಕಮಲ್ ಹಾಸನ್ ಹೇಳಿಕೆ ವಿರೋಧಿಸಿ ಪ್ರತಿಭಟನೆ

ಭಾವಚಿತ್ರ ಸುಟ್ಟು ಆಕ್ರೋಶ: ಕ್ಷಮೆಯಾಚನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 16:25 IST
Last Updated 3 ಜೂನ್ 2025, 16:25 IST
ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು
ಕನಕಪುರದ ಚನ್ನಬಸಪ್ಪ ವೃತ್ತದಲ್ಲಿ ಕನ್ನಡಪರ ಸಂಘಟನೆ ಪದಾಧಿಕಾರಿಗಳು ಕಮಲ್ ಹಾಸನ್ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದರು   

ಕನಕಪುರ: ತಮಿಳು ನಟ ಕಮಲ್ ಹಾಸನ್ ಅವರ ವಿವಾದಾತ್ಮಕ ಹೇಳಿಕೆ ವಿರೋಧಿಸಿ ಕನ್ನಡ ಪರ ಸಂಘಟನೆ ಪದಾಧಿಕಾರಿಗಳು ಇಲ್ಲಿನ ಚನ್ನಬಸಪ್ಪ ವೃತ್ತದ ಅಶೋಕ ಸ್ತಂಭದ ಮುಂಭಾಗ ಪ್ರತಿಭಟನೆ ನಡೆಸಿ, ಅವರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಕಮಲ್‌ ಹಾಸನ್ ಅವರು ಕನ್ನಡಿಗರ ಬಳಿ ಕ್ಷಮೆಯಾಚಿಸದೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಈ ಹಿಂದೂ ಪರ ಸಂಘಟನೆಯ ಎಂ.ಪಿ. ಕೃಷ್ಣಪ್ಪ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಕೀಳಾಗಿ ಮಾತನಾಡಿ ದುರಹಂಕಾರದ ಹೇಳಿಕೆ ನೀಡಿರುವುದನ್ನು ಖಂಡಿಸುತ್ತೇವೆ ಎಂದರು.

ADVERTISEMENT

ಸ್ವತಂತ್ರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್ ಮಾತನಾಡಿ, ತಮಿಳುನಾಡಿನ ಕಮಲ ಹಾಸನ್ ಕನ್ನಡಿಗರ ಕ್ಷಮೆ ಕೇಳುವವರೆಗೂ ಅವರು ಅಭಿನಯಿಸುವ ಯಾವ ಚಿತ್ರವನ್ನೂ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ. ಅವರನ್ನು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ಕಾಲಿಡದಂತೆ ರಾಜ್ಯ ಸರ್ಕಾರ ಮತ್ತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

‌ಕಮಲ್ ಹಾಸನ್ ಹೇಳಿಕೆ ನೀಡಿದ ವೇದಿಕೆಯಲ್ಲಿ ಇದ್ದಂತ ನಮ್ಮ ನಟ ಶಿವರಾಜ್ ಕುಮಾರ್ ಆ ಮಾತನ್ನು ಖಂಡಿಸಬೇಕಾಗಿತ್ತು. ಆದರೆ, ಅವರು ಕಮಲ್ ಹಾಸನನ್ನು ಒಲೈಸುತ್ತಿದ್ದಾರೆ. ನಿಜವಾಗಿಯೂ ಇವರು ಡಾ.ರಾಜಕುಮಾರ್ ಅವರ ಮಗನೇ ಅನ್ನಿಸುತ್ತಿದೆ ಎಂದರು.

ಅವರಲ್ಲದೆ ಕನ್ನಡ ಚಿತ್ರರಂಗದ ನಟರಾದ ಯಶ್, ಸುದೀಪ್, ದರ್ಶನ್, ದುನಿಯಾ ವಿಜಯ್, ಉಪೇಂದ್ರ ಯಾರೂ ಈ ಹೇಳಿಕೆಯನ್ನು ಖಂಡಿಸಿಲ್ಲ. ಇವರಿಂದ ಕನ್ನಡ ಭಾಷೆಗೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂಗಿ ಗಿರಿಯಪ್ಪ, ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ವೀರೇಶ್, ಮಿಲಿಟರಿ ರಾಮಣ್ಣ, ಮಿಲಿಟರಿ ದೇವರಾಜ್, ಶಂಕರ, ಗಬ್ಬಾಡಿ ಕಾಡೇಗೌಡ, ಕೆ.ಸಿ.ಅಪ್ಪಾಜಿ, ಆಸ್ಕರ್ ಖಾನ್, ಅಂಗಡಿ ರಮೇಶ್, ನಾರಾಯಣ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.