ADVERTISEMENT

ಕಾವೇರಿ ಗ್ರಾಮೀಣ ಬ್ಯಾಂಕ್‌ನ ವ್ಯವಸ್ಥಾಪಕರ ವರ್ಗಾವಣೆ ಖಂಡಿಸಿ ಸ್ಥಳೀಯರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2018, 14:11 IST
Last Updated 3 ಸೆಪ್ಟೆಂಬರ್ 2018, 14:11 IST
ಸಿಂಗರಾಜಪುರ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ನಂದಕುಮಾರ್‌ ವರ್ಗಾವಣೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು
ಸಿಂಗರಾಜಪುರ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ನಂದಕುಮಾರ್‌ ವರ್ಗಾವಣೆ ಖಂಡಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದರು   

ಚನ್ನಪಟ್ಟಣ: ತಾಲ್ಲೂಕಿನ ಸಿಂಗರಾಜಪುರ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕ ನಂದಕುಮಾರ್ ಅವರ ವರ್ಗಾವಣೆಯನ್ನು ಖಂಡಿಸಿ ಸ್ಥಳೀಯರು ಬ್ಯಾಂಕಿನ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ಶಾಖೆಗೆ ಬೀಗ ಜಡಿದ ಪ್ರತಿಭಟನಾಕಾರರು, ಅವರು ಜನಾನುರಾಗಿ ವ್ಯವಸ್ಥಾಪಕರಾಗಿದ್ದರು. ಗ್ರಾಹಕರ ಬಗ್ಗೆ ಮೃದು ಧೋರಣೆ ಹೊಂದಿದ್ದರು. ಎಲ್ಲಾ ಕೆಲಸ ಕಾರ್ಯಗಳಿಗೂ ಉತ್ತಮ ಸ್ಪಂದನೆ ನೀಡುತ್ತಿದ್ದರು. ಅಂತಹ ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಕೂಡಲೇ ವರ್ಗಾವಣೆ ರದ್ದು ಮಾಡಬೇಕು. ಅವರನ್ನು ಮತ್ತೆ ಇದೇ ಶಾಖೆಗೆ ವ್ಯವಸ್ಥಾಪಕರನ್ನಾಗಿ ನೇಮಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

ADVERTISEMENT

ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಇಲ್ಲದಿದ್ದರೆ ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವುದಿಲ್ಲ. ಬ್ಯಾಂಕಿನ ಬೀಗವನ್ನು ತೆಗೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಇದಕ್ಕೆ ಬ್ಯಾಂಕಿನ ಖಾತೆದಾರರು ಸಹ ಕೈಜೋಡಿಸಿದರು.

ಒಪ್ಪಿಕೊಳ್ಳಿ: ವಿಷಯ ತಿಳಿದು ಸ್ಥಳಕ್ಕೆ ಬಂದ ರಾಮನಗರ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ಶಿವಕುಮಾರ್ ಮಾತನಾಡಿ, ವರ್ಗಾವಣೆಗೊಂಡಿರುವ ವ್ಯವಸ್ಥಾಪಕರು ಗ್ರಾಹಕರಿಗೆ ಹೇಗೆ ಸ್ಪಂದಿಸುತ್ತಿದ್ದರೋ ಅದೇ ರೀತಿ ನೂತನ ವ್ಯವಸ್ಥಾಪಕರಾದ ರವಿಶಂಕರ್ ಅವರು ಸ್ಪಂದನೆ ನೀಡುವಂತೆ ನೋಡಿಕೊಳ್ಳಲಾಗುವುದು. ಒಮ್ಮೆ ವರ್ಗಾವಣೆಗೊಂಡವರನ್ನು ಮತ್ತೆ ವಾಪಸ್ ಕರೆಯಿಸಿಕೊಳ್ಳುವ ನಿಯಮ ಇಲ್ಲದ ಕಾರಣ ಗ್ರಾಹಕರು ಇದನ್ನು ಒಪ್ಪಿಕೊಳ್ಳಬೇಕು ಎಂದು ಮನವಿ ಮಾಡಿದರು.

ನಂತರ ಪ್ರತಿಭಟನೆ ವಾಪಸ್ ತೆಗೆದುಕೊಳ್ಳಲಾಯಿತು. ಸ್ಥಳೀಯರಾದ ದೇವರಾಜು, ಕೃಷ್ಣೇಗೌಡ, ತಿಮ್ಮೇಗೌಡ, ಸಾಗರ್, ಸುನೀಲ್, ನಾಗಣ್ಣ, ನಾಗೇಶ್, ಸ್ಥಳೀಯರು, ಗ್ರಾಹಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.