ಚನ್ನಪಟ್ಟಣ: ಕನಕಪುರ ತಾಲ್ಲೂಕಿನ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಮಂಗಳವಾರ ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ವೇಳೆ ಆನೆ ದಾಳಿಯಿಂದ ಮೃತಪಟ್ಟ ಆನೆ ಕಾರ್ಯಪಡೆಯ (ಇಟಿಎಫ್) ಸಿಬ್ಬಂದಿ ಚನ್ನಪಟ್ಟಣದ ಎಲೆಕೇರಿಯ ಶ್ರೇಯಸ್ ಸಿ. (20) ಅವರ ಅಂತ್ಯಕ್ರಿಯೆ ಎಲೆಕೇರಿಯ ರುದ್ರಭೂಮಿಯಲ್ಲಿ ಬುಧವಾರ ಜರುಗಿತು.
ಹಾರೋಹಳ್ಳಿಯ ದಯಾನಂದ ಸಾಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮಧ್ಯಾಹ್ನ ಶವವನ್ನು ರಾಮನಗರದಲ್ಲಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಕಚೇರಿಗೆ ತರಲಾಯಿತು. ಅಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯಿಂದ ಸರ್ಕಾರಿ ಗೌರವ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಅರಣ್ಯ ಸಂರಕ್ಷಣಾಧಿಕಾರಿ ಸಿವಶಂಕರ್, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್‌ಗಳಾದ ನಾಗೇಂದ್ರ ಪ್ರಸಾದ್, ಪುಟ್ಟಮ್ಮ, ಚೈತ್ರಾ, ಚನ್ನಪಟ್ಟಣ ತಹಶೀಲ್ದಾರ್ ಗಿರೀಶ್ ಬಿ.ಎನ್ ಸೇರಿದಂತೆ ಹಿರಿಯ ಅಧಿಕಾರಿಗಳು ಪುಷ್ಪಗುಚ್ಛವಿಟ್ಟು ನಮನ ಸಲ್ಲಿಸಿದರು.
ಅಲ್ಲಿಂದ ಸ್ವಗ್ರಾಮ ಎಲೆಕೇರಿಗೆ ಬಂದ ಮೃತದೇಹಕ್ಕೆ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ನಂತರ ರುದ್ರಭೂಮಿಗೆ ಕೊಂಡೊಯ್ದು ಅಂತ್ಯಕ್ರಿಯೆ ನೆರವೇರಿಸಲಾಯಿತು. ಅರಣ್ಯ ಇಲಾಖೆ ಅಧಿಕಾರಿಗಳು, ಆನೆ ಕಾರ್ಯಪಡೆ ಸಿಬ್ಬಂದಿ, ಸಂಬಂಧಿಕರು, ಸ್ನೇಹಿತರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಜನರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು.
ಮುಗಿಲು ಮುಟ್ಟಿದ ಆಕ್ರಂದನ: ಇನ್ನೂ ಬದುಕಿ ಬಾಳಬೇಕಿದ್ದ ಆಳೆತ್ತರದ ಮಗನ ಶವ ಕಂಡು ತಂದೆ ಚಂದ್ರಶೇಖರ್, ತಾಯಿ ತ್ರಿವೇಣಿ, ತಾತ, ಅಜ್ಜಿ ಸೇರಿದಂತೆ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ‘ನನ್ನ ಮಗನನ್ನು ವಾಪಸ್ ಕೊಡಿ’ ಎಂದು ತಾಯಿ ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ, ಅಲ್ಲಿದ್ದವರ ಕಣ್ಣಾಲಿಗಳನ್ನು ತೇವಗೊಳಿಸಿತು.
ಮೊಮ್ಮಗನ ಸಾವಿನ ಸುದ್ದಿಗೆ ಆಘಾತಗೊಂಡಿದ್ದ ಶ್ರೇಯಸ್ ಅವರ ಅಜ್ಜಿ–ತಾತ ಸೇರಿದಂತೆ ಚಿಕ್ಕಮಂದಿರು, ಮಾವಂದಿರು ಸೇರಿದಂತೆ ಸ್ನೇಹಿತರು ಸಹ ಬಿಕ್ಕಿ ಬಿಕ್ಕಿ ಅತ್ತರು. ಕೆಲವರು ಅಸ್ವಸ್ಥಗೊಂಡು ಕುಸಿದು ಬಿದ್ದರು. ಆಗ ಜೊತೆಗಿದ್ದವರು ಆರೈಕೆ ಮಾಡಿ ಸಮಾಧಾನ ಮಾಡಿದರು.
ಚಂದ್ರಶೇಖರ್ ಮತ್ತು ತ್ರಿವೇಣಿ ದಂಪತಿಯ ಇಬ್ಬರು ಪುತ್ರರ ಪೈಕಿ ಹಿರಿಯರಾಗಿದ್ದ ಶ್ರೇಯಸ್, ಕಿರಿಯ ವಯಸ್ಸಿನಲ್ಲೇ ಆನೆ ಕಾರ್ಯಪಡೆಗೆ ವರ್ಷದ ಹಿಂದೆ ಸೇರಿದ್ದರು. ತನ್ನ ಕಾರ್ಯವೈಖರಿ ಮೂಲಕ ಅಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರವಾಗಿದ್ದರು ಎಂದು ಅಧಿಕಾರಿಗಳು ನೆನೆದರು.
ಏಕಾಏಕಿ ದಾಳಿ: ಕಬ್ಬಾಳು ಅರಣ್ಯ ಪ್ರದೇಶದಲ್ಲಿ ರೈತರ ಜಮೀನಿನ ಮೇಲೆ ದಾಳಿ ನಡೆಸಿದ್ದ ಐದಾರು ಕಾಡಾನೆಗಳನ್ನು ಕಾಡಿಗೆ ವಾಪಸ್ ಓಡಿಸುವ ಕಾರ್ಯಾಚರಣೆಯನ್ನು ಆನೆ ಕಾರ್ಯಪಡೆ ಕೈಗೊಂಡಿತ್ತು. ನಾಲ್ಕು ಆನೆಗಳನ್ನು ಕಾಡಿಗೆ ಓಡಿಸುತ್ತಿದ್ದಾಗ, ಪೊದೆಗಳ ಹಿಂದೆ ಅಡಗಿದ್ದ ಮತ್ತೊಂದು ಆನೆ ಏಕಾಏಕಿ ಶ್ರೇಯಸ್ ಅವರತ್ತ ನುಗ್ಗಿ ದಾಳಿ ನಡೆಸಿತ್ತು.
ನೆಲಕ್ಕೆ ಕುಸಿದ ಶ್ರೇಯಸ್ ಅವರನನ್ನು ಸಿಬ್ಬಂದಿ ಕೂಡಲೇ ಸಾತನೂರು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹಾರೋಹಳ್ಳಿ ಸಮೀಪದ ದಯಾನಂದ ಸಾಗರ್ ಆಸ್ಪತ್ರೆಗೆ ಕರೆತರುವಾಗ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದರು.
ಎಸಿಎಫ್‌ಗಳಾದ ರವೀಂದ್ರ ಕುಮಾರ್, ಪ್ರಸನ್ನ ಕುಮಾರ್, ಆರ್‌ಎಫ್‌ಒಗಳಾದ ಮಲ್ಲೇಶ್, ಚೈತ್ರಾ, ಮೊಹಮ್ಮದ್ ಮನ್ಸೂರ್ ಸೇರಿದಂತೆ ವಿವಿಧ ಅಧಿಕಾರಿಗಳು, ಇಟಿಎಫ್ ಸಿಬ್ಬಂದಿ ಇದ್ದರು.
ಅರಣ್ಯ ಮತ್ತು ಗ್ರಾಮಗಳ ಸುರಕ್ಷತೆಗಾಗಿ ತಮ್ಮ ಪ್ರಾಣ ತ್ಯಾಗ ಮಾಡಿದ ಶ್ರೇಯಸ್ ಅವರ ಸೇವೆ ಧೈರ್ಯ ಮತ್ತು ಸಮರ್ಪಣೆ ಸ್ಮರಣೀಯ. ಅವರ ಆತ್ಮಕ್ಕೆ ಶಾಂತಿ ದೊರಕಿ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುವೆ– ಡಾ. ಸಿ.ಎನ್. ಮಂಜುನಾಥ್ ಬೆಂಗಳೂರು ಗ್ರಾಮಾಂತರ ಸಂಸದ
ಆನೆ ಕಾರ್ಯಪಡೆ ಸಿಬ್ಬಂದಿ ಶ್ರೇಯಸ್ ಅವರ ಅಗಲಿಕೆ ತುಂಬಾ ನೋವು ತಂದಿದೆ. ಯೌವನದಲ್ಲಿಯೇ ಕರ್ತವ್ಯ ನಿರ್ವಹಿಸುತ್ತಾ ಜೀವ ತ್ಯಾಗ ಮಾಡಿದ ಅವರ ಸೇವೆಯನ್ನು ನಾವು ಸದಾ ಸ್ಮರಿಸಿಕೊಳ್ಳುತ್ತೇವೆ. ಶ್ರೇಯಸ್ ಅವರ ಆತ್ಮಕ್ಕೆ ಶಾಂತಿ ಸಿಗಲಿ– ಸಿ.ಪಿ. ಯೋಗೇಶ್ವರ್ ಚನ್ನಪಟ್ಟಣ ಶಾಸಕ
₹10 ಲಕ್ಷದ ಚೆಕ್ ವಿತರಣೆ
ರಾಮನಗರದ ಡಿಸಿಎಫ್ ಕಚೇರಿ ಬಳಿ ಶ್ರೇಯಸ್ ಅವರ ಮೃತದೇಹಕ್ಕೆ ಗೌರವ ಸಲ್ಲಿಸಿದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ಇದೇ ಸಂದರ್ಭದಲ್ಲಿ ಶ್ರೇಯಸ್ ಅವರ ತಾಯಿ ತ್ರಿವೇಣಿ ಅವರಿಗೆ ₹10 ಲಕ್ಷ ಪರಿಹಾರದ ಚೆಕ್ ವಿತರಣೆ ಮಾಡಿದರು. ಈ ವೇಳೆ ತಾಯಿ ‘ನನಗೆ ಹಣ ಬೇಡ. ಆತನನ್ನು ವಾಪ್ ಕೊಡಿ’ ಎಂದು ಕಣ್ಣೀರು ಹಾಕಿದರು.
ಆಗ ಡಿ.ಸಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ತಾಯಿಯನ್ನು ಸಮಾಧಾನಪಡಿಸಿ ಚೆಕ್ ಹಸ್ತಾಂತರಿಸಿದರು. ‘ಕರ್ತವ್ಯದಲ್ಲಿರುವ ಸಿಬ್ಬಂದಿ ಮೃತಪಟ್ಟರೆ ಇಲಾಖೆಯಿಂದ ₹25 ಲಕ್ಷ ಪರಿಹಾರ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಶ್ರೇಯಸ್ ಅವರ ಕುಟುಂಬಕ್ಕೆ ಇಂದು ₹10 ಲಕ್ಷದ ಚೆಕ್ ವಿತರಿಸಲಾಗಿದೆ. ಉಳಿದ ಮೊತ್ತವನ್ನು ಶೀಘ್ರ ನೀಡಲಾಗುವುದು. ಜೊತೆಗೆ ತಂದೆ ಅಥವಾ ತಾಯಿ ಒಬ್ಬರಿಗೆ ಐದು ಪಿಂಚಣಿ ಸಹ ನೀಡಲಾಗುವುದು’ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಸಹೋದರನಿಗೆ ಉದ್ಯೋಗಕ್ಕೆ ಒತ್ತಾಯ
ಸರ್ಕಾರಿ ಗೌರವ ಸಲ್ಲಿಸಿ ಹೊರಡಲು ಮುಂದಾದ ಜಿಲ್ಲಾಧಿಕಾರಿ ಅವರನ್ನು ಮುತ್ತಿಕೊಂಡ ಸಂಬಂಧಿಕರು ಕರ್ತವ್ಯದಲ್ಲಿರುವಾಗ ಮೃತಪಟ್ಟಿರುವ ಶ್ರೇಯಸ್ ಅವರ ತಮ್ಮನಿಗೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ‘ಶ್ರೇಯಸ್ ಅವರು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರಿಂದ ಈ ಕುರಿತು ತಕ್ಷಣ ನಿಮಗೆ ಭರವಸೆ ನೀಡಲು ಸಾಧ್ಯವಿಲ್ಲ. ಈ ಕುರಿತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉದ್ಯೋಗ ಸಾಧ್ಯತೆ ಕುರಿತು ಸಚಿವರ ಜೊತೆ ಚರ್ಚಿಸಲಿದ್ದಾರೆ. ಬಳಿಕ ನಿಮಗೆ ನಿರ್ಧಾರ ತಿಳಿಸಲಿದ್ದಾರೆ’ ಎಂದರು. ಅದಕ್ಕೆ ಸಂಬಂಧಿಕರು ‘ಅವರ ಕುಟುಂಬಕ್ಕೆ ಏನಾದರೂ ಮಾಡಿ’ ಎಂದು ಗೋಗರೆದರು. ಆಗ ಜೊತೆಗಿದ್ದ ಅರಣ್ಯ ಸಂರಕ್ಷಣಾಧಿಕಾರಿ ಸಿವಶಂಕರ್ ಮತ್ತು ಡಿಸಿಎಫ್ ರಾಮಕೃಷ್ಣಪ್ಪ ಅವರು ‘ಶ್ರೇಯಸ್ ಸಾವಿನಿಂದ ನಮಗೂ ಆಘಾತ ಮತ್ತು ನೋವಾಗಿದೆ. ಇಲಾಖೆಯಿಂದ ಅವರಿಗೆ ಏನೆಲ್ಲಾ ಮಾಡಲು ಸಾಧ್ಯವಿದೆಯೋ ಅಷ್ಟನ್ನು ನಾವು ಮಾಡುತ್ತೇವೆ’ ಎಂದು ಭರವಸೆ ನೀಡಿದರು. ಬಳಿಕ ಸಂಬಂಧಿಕರು ಶವವನ್ನು ಚನ್ನಪಟ್ಟಣದ ಎಲೆಕೇರಿಗೆ ಕೊಂಡೊಯ್ದರು.
‘ಬೇಡ ಎಂದರೂ ಇಟಿಎಫ್ ಸೇರಿದ್ದ’
‘ಡಿಪ್ಲೋಮಾ ಓದಿದ್ದ ಶ್ರೇಯಸ್ ಮುಂದೆ ಶಿಕ್ಷಣ ಮುಂದುವರಿಸಿ ಬೇರೆ ಉದ್ಯೋಗಕ್ಕೆ ಹೋಗುವಂತೆ ತಂದೆ–ತಾಯಿ ಸಲಹೆ ನೀಡಿದ್ದರು. ಆದರೆ ಶ್ರೇಯಸ್ ಆನೆ ಕಾರ್ಯಪಡೆಯಲ್ಲಿ ಕೆಲಸ ಸಿಕ್ಕಿದ್ದು ಮುಂದೆ ಕಾಯಂ ಆಗುವ ಸಾಧ್ಯತೆ ಇರುತ್ತದೆ. ಊರಿನ ಸಮೀಪದಲ್ಲಿ ಕೆಲಸ ಮಾಡಿಕೊಂಡು ಕುಟುಂಬದವರೊಂದಿಗೆ ಇರಬಹುದು ಅಂದುಕೊಂಡು ಕಾರ್ಯಪಡೆಯಲ್ಲಿ ಕೆಲಸ ಮುಂದುವರಿಸಿದ್ದರು.
ಆದರೂ ಕುಟುಂಬದವರು ಒಂದೆರಡು ಸಲ ಕೆಲಸ ಬಿಡಿಸಿ ಬೇರೆ ಕಡೆ ಉದ್ಯೋಗಕ್ಕೆ ಕಳಿಸಿದ್ದರು. ಆದರೆ ಶ್ರೇಯಸ್ ಅಲ್ಲಿ ಹೆಚ್ಚು ದಿನ ಇರದೆ ವಾಪಸ್ ಬಂದು ಆನೆ ಕಾರ್ಯಪಡೆಯಲ್ಲಿ ಮತ್ತೆ ಕೆಲಸಕ್ಕೆ ಸೇರಿದ್ದರು. ಸ್ನೇಹಜೀವಿಯಾಗಿದ್ದ ಅವರು ಅಧಿಕಾರಿಗಳು ಮತ್ತು ಸಹೋದ್ಯೋಗಿಗಳ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದರು’ ಎಂದು ಅವರ ಸಂಬಂಧಿಕರು ಮತ್ತು ಸಹಪಾಠಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.