ADVERTISEMENT

ಹಾಲು ಖರೀದಿ ದರ ಕಡಿತ

​ಪ್ರಜಾವಾಣಿ ವಾರ್ತೆ
Published 30 ಮೇ 2021, 3:29 IST
Last Updated 30 ಮೇ 2021, 3:29 IST
ಬಾನಂದೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ
ಬಾನಂದೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ   

ಬಿಡದಿ: ಕೋವಿಡ್‌ ಸಂಕಷ್ಟದ ನಡುವೆಯೇ ರೈತರಿಂದ ಖರೀದಿಸುವ ಪ್ರತಿ ಲೀಟರ್ ಹಾಲಿಗೆ ಜೂನ್‌ 1ರಿಂದ
₹ 1.50 ಕಡಿತಗೊಳಿಸಲಾಗುತ್ತದೆ.

ಇಲ್ಲಿಯವರೆಗೂ ರೈತರಿಂದ ಒಂದು ಲೀಟರ್‌ ಹಾಲಿಗೆ ₹ 27.50 ನೀಡಿ ಖರೀದಿಸಲಾಗುತ್ತಿತ್ತು. ಹಣ ಕಡಿತ ಮಾಡುವ ಸಂಬಂಧ ಬಮೂಲ್‌ ಸುತ್ತೋಲೆ ಹೊರಡಿಸಿದ್ದು, ಕೊರೊನಾ ನಡುವೆ ರೈತರ ಬದುಕಿಗೆ ಬರೆ ಎಳೆದಿದೆ.

ಕೋವಿಡ್ ಎರಡನೇ ಅಲೆಗೆ ರೈತಾಪಿ ವರ್ಗ ತೊಂದರೆಗೆ ಸಿಲುಕಿದೆ. ರೈತರು ಬೆಳೆದ ಜೋಳ, ರಾಗಿ, ತರಕಾರಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಈ ನಡುವೆಯೇ ಹಾಲಿನ ಖರೀದಿ ದರ ಕಡಿತ ಮಾಡಿರುವುದರಿಂದ ಉತ್ಪಾದಕರು ತೊಂದರೆಗೆ ಸಿಲುಕಿದ್ದಾರೆ. ಮತ್ತೊಂದೆಡೆರೈತರಿಗೆ ಸರ್ಕಾರ ನೀಡುತ್ತಿದ್ದ ಪ್ರೋತ್ಸಾಹಧನವನ್ನು ಇನ್ನೂ ಬಿಡುಗಡೆ ಮಾಡಿಲ್ಲ. ರೈತರಿಗೆ ರಾಗಿ ಖರೀದಿಸಿರುವ ಹಣವನ್ನೂ ನೀಡಿಲ್ಲ. ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದಾರೆ.

ADVERTISEMENT

‘ರೈತರ ಬದುಕಿಗೆ ಹೈನುಗಾರಿಕೆ ಉದ್ಯಮ ಅತ್ಯಂತ ಮಹತ್ವದ್ದಾಗಿದೆ. ಸಾಮಾನ್ಯ ಜನರಿಗೆ ಜೀವನ ನಡೆಸಲು ಇದು ದಾರಿದೀಪವಾಗಿತ್ತು. ಈ ಸಂಕಷ್ಟದ ಸಮಯದಲ್ಲಿ ಬೆಲೆ ಕಡಿಮೆ ಮಾಡುತ್ತಿರುವುದು ದುರದೃಷ್ಟಕರ’ ಎಂದುಬಾನಂದೂರು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ಬಿ.ಎನ್. ಗಂಗಾಧರಯ್ಯ ತಿಳಿಸಿದರು.

ಸಂಘದ ಕಾರ್ಯ ನಿರ್ವಣಾಧಿಕಾರಿ ಬಿ.ಎಂ. ಕುಮಾರ್ ಮಾತನಾಡಿ, ‘ನಮ್ಮ ಸಂಘವೂ ತಿಂಗಳಲ್ಲಿ ₹ 18 ಲಕ್ಷದಿಂದ ₹ 20 ಲಕ್ಷ ವಹಿವಾಟು ನಡೆಸುತ್ತಿದೆ. ಈಗಾಗಲೇ ಒಕ್ಕೂಟ ಸುತ್ತೋಲೆ ಹೊರಡಿಸಿರುವುದನ್ನು ರೈತರಿಗೆ ತಿಳಿಸಲಾಗಿದೆ. ಸಂಘದಿಂದ ದಿನನಿತ್ಯ 2,200 ಲೀಟರ್ ಹಾಲು ಸರಬರಾಜು ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.