ADVERTISEMENT

ಗಮನ ಸೆಳೆವ ವಿಜ್ಞಾನ ಮಾದರಿಗಳು

ಶರತ್‌ ಶಾಲೆಯಲ್ಲಿ ಎರಡು ದಿನಗಳ ಪ್ರದರ್ಶನಕ್ಕೆ ಚಾಲನೆ: 300ಕ್ಕೂ ಹೆಚ್ಚು ಮಾದರಿ ರೂಪಿಸಿರುವ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2019, 17:19 IST
Last Updated 20 ನವೆಂಬರ್ 2019, 17:19 IST
ಶರತ್ ಮೆಮೊರಿಯಲ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು
ಶರತ್ ಮೆಮೊರಿಯಲ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿರುವ ವಿಜ್ಞಾನ ಮಾದರಿಗಳ ಪ್ರದರ್ಶನ ನಡೆಯಿತು   

ರಾಮನಗರ: ಇಲ್ಲಿನ ಶರತ್ ಮೆಮೊರಿಯಲ್ ಶಾಲೆಯ ಆವರಣದಲ್ಲಿ ನಡೆಯುತ್ತಿರುವ ‘ಎಕ್ಸ್‌ಪೋ ಯೂನಿವರ್ಸಲ್ ಸೂಕ್ಷ್ಮದಿಂದ ಸಮಗ್ರದೆಡೆಗೆ’ ವಿಜ್ಞಾನ ವಸ್ತು ಪ್ರದರ್ಶನವು ಮಕ್ಕಳ ಪ್ರತಿಭೆ ಪ್ರದರ್ಶನಕ್ಕೆ ವೇದಿಕೆಯಾಗಿದೆ.

ವಿವಿಧ ಮಾದರಿಗಳ ಪ್ರದರ್ಶನವು ನೋಡುಗರನ್ನು ಬೇರೊಂದು ಲೋಕಕ್ಕೆ ಕರೆದೊಯುತ್ತದೆ. ಎಲ್ಲಾ ಪಠ್ಯ ವಿಷಯಗಳಿಗೆ ಸಂಬಂಧಿಸಿದ ವಿವಿಧ ಮಾದರಿ ಮತ್ತು ಕಲಾಕೃತಿಗಳನ್ನು ಸಿದ್ಧಪಡಿಸಿ ಪ್ರದರ್ಶನಕ್ಕೆ ಇಡಲಾಗಿದೆ. ವಿವಿಧ ಮೂಲಗಳಿಂದ ವಿದ್ಯುತ್‌ ಉತ್ಪಾದನೆ, ಕನ್ನಡ ಭಾಷಾ ವ್ಯಾಕರಣದಲ್ಲಿ ಲೇಖನ ಚಿಹ್ನೆಗಳ ಬಳಕೆಯ ವಿಧಾನ, ತೊಗಲು ಗೊಂಬೆಯಾಟ, ಅರಣ್ಯದ ಮಹತ್ವ ಸಾರುವ ಮಾದರಿಗಳು ಗಮನ ಸೆಳೆಯುತ್ತಿವೆ.

ಜನಪದ ಕಲೆಗಳ ಬಗ್ಗೆ, ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯ ಕಲಿಕೆ ಹಾಗೂ ಮಹತ್ವದ ಬಗ್ಗೆ, ವಿವಿಧ ಆಟಗಳೊಂದಿಗೆ ಕಲಿಯುವ ಗಣಿತ, ಬಗ್ಗೆ, ಜೀವವಿಜ್ಞಾನ, ರಸಾಯನ ವಿಜ್ಞಾನ, ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳು, ಇತಿಹಾಸ ಹಾಗೂ ದೇಶದ ಸಂಸ್ಕೃತಿಯನ್ನು ಬಿಂಬಿಸುವ ಮಾದರಿಗಳು, ಸಮಾಜ ವಿಜ್ಞಾನದ ಮಾದರಿಗಳು, ಕಂಪ್ಯೂಟರ್ ಹಾಗೂ ತಂತ್ರಜ್ಞಾನಕ್ಕೆ ಸಂಬಂಧಿಸಿದ ಮಾದರಿಗಳನ್ನು ವಿದ್ಯಾರ್ಥಿಗಳು ವಿಶಿಷ್ಟವಾಗಿ ರೂಪಿಸಿ ಪ್ರದರ್ಶಿಸಿದ್ದಾರೆ.

ADVERTISEMENT

300 ಮಾದರಿಗಳ ಪ್ರದರ್ಶನ: ವಿವಿಧ ವಿಷಯಗಳಿಗೆ ಸಂಬಂಧಿಸಿದ 300 ಮಾದರಿಗಳನ್ನು ವಿದ್ಯಾರ್ಥಿಗಳು ರೂಪಿಸಿದ್ದಾರೆ. ಪ್ರತಿ ವಿಷಯದಲ್ಲಿ 40 ಕ್ಕೂ ಹೆಚ್ಚು ಮಾದರಿಗಳನ್ನು ಸಿದ್ಧಪಡಿಸಲಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಅವುಗಳ ವಿವರಣೆ ನೀಡಿದರು. ಜತೆಗೆ ವಿವಿಧ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಮಾರಾಟ ಮಾಡಿದರು. ಪ್ರದರ್ಶನವು ಗುರುವಾರವೂ ಇರಲಿದೆ.

ವೈಜ್ಞಾನಿಕ ಮನೋಭಾವ ಬೆಳೆಸಿ: ಪ್ರದರ್ಶನಕ್ಕೆ ಚಾಲನೆ ನೀಡಿದ ದಯಾನಂದ ಸಾಗರ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ ಮತ್ತು ಕಮ್ಯೂನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ವೈಭವ್ ಎ. ಮೇಶ್ರಂ ಮಾತನಾಡಿ ಪ್ರಾಥಮಿಕ ಶಾಲಾ ಹಂತದಿಂದಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿದರೆ ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗುತ್ತಾರೆ. ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿಸಬೇಕು. ದೈನಂದಿನ ಕಲಿಕೆಯ ಜತೆಗೆ ತಂತ್ರಜ್ಞಾನ ಆಧಾರಿತ ಚಟುವಟಿಕೆ ಮಾಡಿಸಬೇಕು. ಇಂತಹ ಪ್ರಯತ್ನಗಳ ಮೂಲಕ ಮಕ್ಕಳ ವಿಜ್ಞಾನ ಕಲಿಕೆಗೆ ಪ್ರೋತ್ಸಾಹ ನೀಡಬೇಕು ಎಂದರು.

ವಿಜ್ಞಾನಿ ಪಿ. ರಾಧಾಕೃಷ್ಣನ್ ಮಾತನಾಡಿ ಹುಟ್ಟಿನಿಂದಲೇ ಎಲ್ಲಾ ವಿಷಯಗಳಲ್ಲೂ ಯಾರೊಬ್ಬರೂ ಸಮರ್ಥರಾಗಿರುವುದಿಲ್ಲ. ವಿದ್ಯಾರ್ಥಿ ಬೆಳೆದಂತೆ ಸಂಸ್ಕಾರ ಕಲಿಯುತ್ತಾನೆ. ಎಲ್ಲಾ ಮಕ್ಕಳಲ್ಲಿಯೂ ಸಹಜ ಪ್ರತಿಭೆ ಇರುತ್ತದೆ. ಉತ್ತೇಜನ ನೀಡಿದರೆ ಪ್ರಸಿದ್ಧ ವಿಜ್ಞಾನಿಗಳ ರೀತಿ ಹೊಸ ಆವಿಷ್ಕಾರ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಮರೀಗೌಡ ಮಾತನಾಡಿ, ಸಮಾಜದಲ್ಲಿ ಮನೆ ಮಾಡಿರುವ ಮೌಢ್ಯ ನಿವಾರಣೆಗೆ ವಿಜ್ಞಾನದ ಅರಿವು ಅಗತ್ಯ. ಶಿಕ್ಷಕರು ಮಕ್ಕಳ ಆಲೋಚನೆಗೆ ಪ್ರೇರಣೆ ನೀಡಬೇಕು. ವಿಜ್ಞಾನದ ಉತ್ತಮ ಮಾದರಿ ತಯಾರಿಸಲು ಪ್ರೋತ್ಸಾಹ ಕೊಡಬೇಕು. ಮಕ್ಕಳಲ್ಲಿನ ಮೌಢ್ಯ ಹೋಗಲಾಡಿಸಲು, ಅವರ ಪ್ರತಿಭೆ ಅನಾವರಣಗೊಳ್ಳಲು ಇಂತಹ ಪ್ರಯತ್ನಗಳು ಸಹಕಾರಿ ಎಂದು ತಿಳಿಸಿದರು.

ನೀಲಾಂಬ ಚಾರಿಟಬಲ್ ಟ್ರಸ್ಟಿನ ಅಧ್ಯಕ್ಷ ನಾಗಿ ರೆಡ್ಡಿ, ಟ್ರಸ್ಟಿ ಜಯಪ್ರಕಾಶ್ ರೆಡ್ಡಿ, ಶರತ್ ಮೆಮೊರಿಯಲ್ ಶಾಲೆಯ ಸಂಸ್ಥಾಪಕ ಕಾರ್ಯದರ್ಶಿ ಆದಿನಾರಾಯಣರೆಡ್ಡಿ, ರಾಜೇಶ್ವರಿ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.