ಶಿಡ್ಲಘಟ್ಟ: ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂಬುದು ಈಗ ಬಹುತೇಕರ ಕನಸು. ಆದರೆ ಉದ್ಯಮ ಪ್ರಾರಂಭಿಸುವುದು ಸುಲಭದ ಕೆಲಸ ಅಲ್ಲ. ಕಠಿಣ ಪರಿಶ್ರಮ, ತ್ಯಾಗ ಹಾಗೂ ದೃಢಸಂಕಲ್ಪವಿದ್ದರೆ ಮಾತ್ರ ಉದ್ಯಮದಲ್ಲಿ ಯಶಸ್ಸು ಸಾಧಿಸಬಹುದು. ಸಾಕಷ್ಟು ಸಿದ್ಧತೆ ಹಾಗೂ ತಾಳ್ಮೆ ಅಗತ್ಯ ಎಂದು ಜಿಎಫ್‌ಜಿಸಿ ಕೋಲಾರದ ವಾಣಿಜ್ಯ ವಿಭಾಗ ಮುಖ್ಯಸ್ಥ ಪ್ರೊ.ಎಸ್.ಮುರಳೀಧರ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ‘ಕಾಮರ್ಸ್ ನೆಕ್ಸಸ್– 2025’ ಮತ್ತು ‘ಅಂತರಕಾಲೇಜು ಕಾಮರ್ಸ್ ಫೆಸ್ಟ್’ನಲ್ಲಿ ಅವರು ಮಾತನಾಡಿದರು.
ಯಶಸ್ವಿ ಉದ್ಯಮಶೀಲತೆಗೆ ನಿರಂತರ ಕಲಿಕೆ, ಹೊಸದನ್ನು ಕಲಿತುಕೊಳ್ಳುವ ಹಾಗೂ ಅದಕ್ಕೆ ಹೊಂದಿಕೊಳ್ಳುವ, ನಿರಂತರವಾಗಿ ಪರಿಶ್ರಮಪಡಬೇಕು. ಮಾರುಕಟ್ಟೆ ಸಂಶೋಧನೆಯಿಂದ ಹಿಡಿದು ಅಪಾಯದ ಮೌಲ್ಯಮಾಪನದವರೆಗೆ ಬಲವಾದ ವ್ಯಾಪಾರ ಅಡಿಪಾಯ ಹಾಕಿಕೊಂಡರೆ ಯಶಸ್ಸು ಸಾಧಿಸಬಹುದು. ಮಾರುಕಟ್ಟೆ ಸಂಶೋಧನೆ, ವ್ಯಾಪಾರ ಯೋಜನೆ, ಹಣಕಾಸಿನ ವಿಶ್ಲೇಷಣೆ, ನಿಯಮ ಹಾಗೂ ಕಾನೂನು ಪರಿಗಣನೆ, ಮಾರ್ಕೆಟಿಂಗ್ ತಂತ್ರಗಳು, ಸವಾಲುಗಳ ಮೌಲ್ಯಮಾಪನ ಅಗತ್ಯವಿದೆ ಎಂದು ಹೇಳಿದರು.
ವಿವಿಧ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಅಂತರಕಾಲೇಜು ಕ್ವಿಜ್, ಹೊಸ ಉದ್ದಿಮೆಯ ಪರಿಕಲ್ಪನೆ, ಜಾಹೀರಾತು ಕಲ್ಪನೆ ಮುಂತಾದ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಜಿ.ಮುರಳೀ ಆನಂದ್, ಪ್ರೊ. ಎ.ಸಾಯಿರಾಮ್, ಪ್ರಾಧ್ಯಾಪಕ ಬಿ.ರವಿಕುಮಾರ್, ಎಂ.ಸುನೀತಾ, ವಿ.ಆರ್.ಶಿವಶಂಕರಿ, ಪ್ರೊ.ಜಿ.ಬಿ.ವೆಂಕಟೇಶ್, ಶೋಭಾ, ಗೀತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.