ADVERTISEMENT

ಹೊಳೆ ಮಧ್ಯೆ ವಿದ್ಯಾರ್ಥಿಗಳ ಸಂಚಾರ

ನದಿಯ ಒಂದು ದಡದಲ್ಲಿ ವಾಲೆತೋಪು ಗ್ರಾಮ l ಮತ್ತೊಂದು ದಡದಲ್ಲಿ ಸರ್ಕಾರಿ ಶಾಲೆ

ಆರ್.ಜಿತೇಂದ್ರ
Published 22 ಜನವರಿ 2022, 4:32 IST
Last Updated 22 ಜನವರಿ 2022, 4:32 IST
ಕಣ್ವ ಹೊಳೆ ದಾಟಿ ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ
ಕಣ್ವ ಹೊಳೆ ದಾಟಿ ಶಾಲೆಯತ್ತ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು ಪ್ರಜಾವಾಣಿ ಚಿತ್ರಗಳು: ಚಂದ್ರೇಗೌಡ   

ರಾಮನಗರ: ಚನ್ನಪಟ್ಟಣ ತಾಲ್ಲೂಕಿನ ವಾಲೆತೋಪು ಗ್ರಾಮದ ಆ ಪುಟ್ಟ ಮಕ್ಕಳು ಬೆಳಿಗ್ಗೆ 9ಕ್ಕೆಲ್ಲ ಸಮವಸ್ತ್ರ ಧರಿಸಿ, ಹೆಗಲಿಗೆ ಬ್ಯಾಗ್‌ ಏರಿಸಿಕೊಂಡು ಶಾಲೆಗೆ ಹೊರಡುತ್ತಾರೆ. ಒಬ್ಬರಿಗೊಬ್ಬರ ಕೈ ಹಿಡಿದು ಹೊಳೆಯಲ್ಲಿ ಜೋಪಾನವಾಗಿ ಹೆಜ್ಜೆ ಹಾಕುತ್ತಾರೆ. ಒದ್ದೆಯಾದ ಬಟ್ಟೆಯಲ್ಲೇ ಶಾಲೆ ಅಂಗಳದಲ್ಲಿ ಕುಳಿತು ಪಾಠ ಕೇಳುತ್ತಾರೆ.

ಅರೆ! ಶಾಲೆಗೆ ಹೋಗಬೇಕಾದ ಮಕ್ಕಳು ಹೊಳೆಗೆ ಯಾಕೆ ಹೋದರು ಎಂದು ಕೇಳಬೇಡಿ. ಯಾಕೆಂದರೆ ಈ ವಿದ್ಯಾರ್ಥಿಗಳು ನಿತ್ಯ ಹೊಳೆ ದಾಟಿಯೇ ಶಾಲೆಗೆ ಹೋಗಬೇಕು.

ಹೊಳೆಯ ಈಚೆ ಬದಿಯಲ್ಲಿ ಇರುವ ಗ್ರಾಮದಲ್ಲಿ ಇವರ ಮನೆಗಳಿವೆ. ಹೊಳೆಯ ಆಚೆ ಬದಿಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ತೀರಾ ಅಪರೂಪಕ್ಕೆ ಎಂಬಂತೆ ಕಣ್ವ ಹೊಳೆ ಉಕ್ಕಿ ಹರಿದಿದ್ದು, ಇದೇ ಈ ಮಕ್ಕಳಿಗೆ ಸಂಕಷ್ಟ ತಂದೊಡ್ಡಿದೆ.

ADVERTISEMENT

ಎರಡು ದಶಕಗಳ ನಂತರ ಕಣ್ವ ಜಲಾಶಯ ಭರ್ತಿಯಾಗಿದ್ದು, ಹೊಳೆಗೆ ನೀರು ಹರಿಸಲಾಗುತ್ತಿದೆ. ಇದರಿಂದಾಗಿ ಹೊಸ ವಾಲೆತೋಪು ಮತ್ತು ಹಳೇ ವಾಲೆತೋಪು ನಡುವಿನ ಸಂಪರ್ಕವೇ ಕಡಿತಗೊಂಡಿದೆ. ಹೊಸ ಬಡಾವಣೆಯ ಜನರು ಹಳೇ ಗ್ರಾಮಕ್ಕೆ ಬರಬೇಕಾದರೆ ಹೊಳೆ ದಾಟಬೇಕು. ಇಲ್ಲವೇ ಮಳೂರು ಕಡೆಯಿಂದ ನಾಲ್ಕಾರು ಕಿಲೋಮೀಟರ್ ರಸ್ತೆ ಬಳಸಿ ಬರಬೇಕಿದೆ.

ಕಣ್ವ ಹೊಳೆಯು ವಾಲೆತೋಪು ಗ್ರಾಮವನ್ನು ಎರಡು ಭಾಗಗಳಾಗಿ ವಿಂಗಡಿಸಿ ಹರಿಯುತ್ತಿದೆ. ಗ್ರಾಮಸ್ಥರು ಹೆಚ್ಚಾಗಿ ವಾಸವಿರೋ ಭಾಗದಲ್ಲಿ ಶಾಲೆಯನ್ನು ಕಟ್ಟದೇ ಹೊಳೆಯ ಮತ್ತೊಂದು ಭಾಗದಲ್ಲಿ ಶಾಲೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಹೊಳೆ ತುಂಬಿ ಹರಿದಾಗಲೆಲ್ಲ ಈ ಶಾಲೆ ಮಕ್ಕಳಿಗೆ ಅಘೋಷಿತ ರಜೆ ಎಂಬಂತೆ ಆಗಿದೆ.

ಕೆಲವೊಮ್ಮೆ ಪೋಷಕರು ಮಕ್ಕಳನ್ನು ಹೆಗಲ ಮೇಲೆ ಹೊತ್ತು ಶಾಲೆಗೆ ಬಿಟ್ಟು ಬಂದಿದ್ದಾರೆ. ಈಚೆಗೆ ಹೊಳೆಯಲ್ಲಿ ಪ್ರವಾಹ ಬಂದ ಕಾರಣಕ್ಕೆ ಒಂದು ತಿಂಗಳ ಕಾಲ ಆಶ್ರಮದಲ್ಲೇ ಶಾಲೆ ನಡೆದಿದೆ. ಈಗಲೂ ಹೊಳೆಯಲ್ಲಿ ನೀರು ಹರಿಯುತ್ತಿದ್ದು, ಮಕ್ಕಳು ನಿತ್ಯ ಇದನ್ನು ದಾಟಿಕೊಂಡೇ ಶಾಲೆಗೆ ಹೋಗುತ್ತಿದ್ದಾರೆ.

ಶಾಲೆಯಲ್ಲಿ ಸದ್ಯ 12 ವಿದ್ಯಾರ್ಥಿಗಳಿದ್ದಾರೆ. ಮುಖ್ಯ ಶಿಕ್ಷಕಿ ವಿಜಯಮ್ಮ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದಾರೆ. ಉಳಿದೆಲ್ಲ ಸೌಲಭ್ಯಗಳು ಇದ್ದರೂ ಶಾಲೆಯ ದಾರಿಯೇ ಸರಿ ಇಲ್ಲ. ‘ ಹಾವು–ಚೇಳು ಭಯದಲ್ಲೇ ನಿತ್ಯ ನಡೆದು ಬರ್ತಾ ಇದ್ದೀವಿ. ಈ ಹೊಳೆಗೊಂದು ಸೇತುವೆ ಕಟ್ಟಿಕೊಡಿ ಪ್ಲೀಸ್‌’ ಎನ್ನುವುದು ಈ ವಿದ್ಯಾರ್ಥಿಗಳ ಒಕ್ಕೊರಲ ಒತ್ತಾಯ

ದಶಕಗಳ ಬೇಡಿಕೆ: ಹೊಸ ವಾಲೆತೋಪು ಪ್ರದೇಶದಲ್ಲಿ ದಶಕಗಳಿಂದಲೂ ಸರ್ಕಾರಿ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ಜೊತೆಗೆ ಅಲ್ಲಿ 15ಕ್ಕೂ ಹೆಚ್ಚು ಕುಟುಂಬಗಳು ವಾಸವಿವೆ. ಅಂಗನವಾಡಿಯು ಹಳೇ ಗ್ರಾಮದಲ್ಲೇ ಇದ್ದು, ಪುಟ್ಟ ಮಕ್ಕಳನ್ನು ಅಲ್ಲಿಂದ ಇಲ್ಲಿಗೆ ಹೊಳೆ ದಾಟಿಸಿಕೊಂಡೇ ಬರಬೇಕಿದೆ. ದಿನ ಬಳಕೆ ವಸ್ತು ಖರೀದಿಗೂ ಹೊಳೆ ದಾಟುವುದು ಅನಿವಾರ್ಯ. ಹೀಗಾಗಿ ಸೇತುವೆ ನಿರ್ಮಿಸಿಕೊಡುವಂತೆ ಇಲ್ಲಿನ ಜನರು ಒತ್ತಾಯಿಸುತ್ತಲೇ ಬಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.