ADVERTISEMENT

ನಿತ್ಯಾನಂದ ಸ್ವಾಮಿ ಪತ್ತೆಗೆ ‘ಸುಪ್ರೀಂ’ ಸೂಚನೆ

ರಾಮನಗರ ನ್ಯಾಯಾಲಯಕ್ಕೆ ನಿರ್ದೇಶನ...

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 20:21 IST
Last Updated 4 ಮಾರ್ಚ್ 2020, 20:21 IST
   

ನವದೆಹಲಿ: ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಬಿಡದಿಯ ನಿತ್ಯಾನಂದ ಸ್ವಾಮಿ ಅವರನ್ನು ಪತ್ತೆ ಮಾಡಿ ವಿಚಾರಣೆಗೆ ಹಾಜರುಪಡಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಅಧೀನ ನ್ಯಾಯಾಲಯಕ್ಕೆ ಸೂಚಿಸಿದೆ.

ತಮ್ಮ ವಿರುದ್ಧ ಜಾಮೀನುರಹಿತ ವಾರಂಟ್ ಜಾರಿಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ನಿತ್ಯಾನಂದ ಅವರ ವಾಹನದ ಚಾಲಕರಾಗಿದ್ದ ಕೆ.ಲೆನಿನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್‌.ಎ. ಬೊಬಡೆ ನೇತೃತ್ವದ ಪೀಠವು ರಾಮನಗರದಲ್ಲಿರುವ ಅಧೀನ ನ್ಯಾಯಾಲಯಕ್ಕೆ ಈ ನಿರ್ದೇಶನ ನೀಡಿದೆ.

ಅಲ್ಲದೆ, 2010ರಲ್ಲಿ ನಡೆದ ಅತ್ಯಾಚಾರ ಪ್ರಕರಣದ ದೂರಿಗೆ ಸಂಬಂಧಿಸಿದಂತೆ ಸಾಕ್ಷ್ಯ ಹೇಳಲು ಸಿದ್ಧವಿರುವುದಾಗಿ ಅರ್ಜಿದಾರ ಒಪ್ಪಿಗೆ ಸೂಚಿಸಿದ್ದರಿಂದ, ಅವರ ವಿರುದ್ಧ ಹೊರಡಿಸಲಾದ ವಾರಂಟ್‌ ಅನ್ನು ನ್ಯಾಯಪೀಠ ರದ್ದುಪಡಿಸಿದೆ.

ADVERTISEMENT

ನಿತ್ಯಾನಂದ ಅವರಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿ ಫೆಬ್ರುವರಿ 5ರಂದು ರಾಜ್ಯ ಹೈಕೋರ್ಟ್ ಆದೇಶ ನೀಡಿದ್ದರೂ ಫೆಬ್ರವರಿ 17ರಂದು ನಡೆಯಲಿದ್ದ ವಿಚಾರಣೆಯನ್ನು ಹೈಕೋರ್ಟ್‌ಗೆ ವರ್ಗಾಯಿಸಲಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ಈ ಸಂದರ್ಭ ದೂರಿದರು.

ಜಾಮೀನು ಮಂಜೂರು ಮಾಡುವಾಗ ದೇಶ ತೊರೆಯದಂತೆ ವಿಧಿಸಿದ್ದ ಷರತ್ತನ್ನು ಉಲ್ಲಂಘಿಸಿರುವ ಆರೋಪಿ, ಅವಧಿ ಮುಗಿದಿರುವ ಪಾಸ್‌ಪೋರ್ಟ್‌ ಬಳಸಿ ದೇಶ ತೊರೆದಿದ್ದಾರೆ ಎಂದೂ ಆರೋಪಿಸಿದರು.

ಆದರೆ, ಹೈಕೋರ್ಟ್ ಜಾರಿಗೊಳಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಹಸ್ತಕ್ಷೇಪ ಮಾಡುವುದಿಲ್ಲ ಎಂದ ಪೀಠ, ಆರೋಪಿಯನ್ನು ವಿಚಾರಣೆಗೆ ಹಾಜರುಪಡಿಸುವುದಾಗಿ ಅಧೀನ ನ್ಯಾಯಾಲಯ ಖಚಿತಪಡಿಸಬೇಕು ಎಂದು ಪೀಠ ಹೇಳಿತು.

ನಿತ್ಯಾನಂದ ಆಸ್ತಿ ವಿವರ ಸಲ್ಲಿಸಲು ಸೂಚನೆ
ರಾಮನಗರ: ಭಕ್ತೆ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳಾದ ನಿತ್ಯಾನಂದ ಸ್ವಾಮೀಜಿ, ಗೋಪಾಲಶೀಲಂ ರೆಡ್ಡಿ ಅವರ ಆಸ್ತಿ ವಿವರಗಳನ್ನು ಸಲ್ಲಿಸುವಂತೆ ಇಲ್ಲಿನ ಮೂರನೇ ಹೆಚ್ಚುವರಿ ಮತ್ತು ಸೆಷನ್ಸ್‌ ನ್ಯಾಯಾಲಯವು ಗುರುವಾರ ತನಿಖಾ ಅಧಿಕಾರಿಗಳಿಗೆ ಸೂಚಿಸಿತು.

ಈ ಇಬ್ಬರು ಆರೋಪಿಗಳ ವಿರುದ್ಧ ಈಗಾಗಲೇ ಬಂಧನ ವಾರಂಟ್‌ ಜಾರಿಯಾಗಿದೆ. ಆದಾಗ್ಯೂ ಅವರು ಪತ್ತೆಯಾಗದ ಕಾರಣ ಇಬ್ಬರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಗೆ ನ್ಯಾಯಾಲಯವು ಮುಂದಾಗಿದ್ದು, ಗುರುವಾರ ವಿಚಾರಣೆ ವೇಳೆ ಈ ಕುರಿತು ಆದೇಶ ನೀಡಿ, ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿತು.

ವಾರಂಟ್ ರದ್ದು: ‘ತಮ್ಮ ಮೇಲಿನ ಬಂಧನದ ವಾರಂಟ್‌ ರದ್ದುಪಡಿಸಬೇಕು. ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಬೇಕು’ ಎಂದು ಕೋರಿ ಇದೇ ಪ್ರಕರಣದ ದೂರುದಾರ ಲೆನಿನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಆದರೆ, ಪ್ರಕರಣವನ್ನು ಬೇರೊಂದು ನ್ಯಾಯಾಲಯಕ್ಕೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ದೂರುದಾರರ ಮೇಲಿನ ಬಂಧನ ವಾರಂಟ್‌ ಅನ್ನು ರದ್ದುಪಡಿಸುವಂತೆ ಅಧೀನ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು. ಈ ಹಿನ್ನೆಲೆಯಲ್ಲಿ ಲೆನಿನ್‌ ಗುರುವಾರ ಇಲ್ಲಿನ ಸೆಷನ್ಸ್‌ ಕೋರ್ಟ್‌ನಲ್ಲಿ ವಿಚಾರಣೆಗೆ ಹಾಜರಾಗಿದ್ದು, ನ್ಯಾಯಾಧೀಶರು ಅವರ ಮೇಲಿನ ಬಂಧನದ ವಾರಂಟ್‌ ರದ್ದುಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.