ADVERTISEMENT

ಖಾಸಗಿ ಶಿಕ್ಷಕರು ಅಸಂಘಟಿತ ಕಾರ್ಮಿಕರು: ಪುಟ್ಟಣ್ಣ ಹೇಳಿಕೆ

ಸಂಕಷ್ಟಕ್ಕೆ ಸ್ಪಂದಿಸುವಂತೆ ಕಾರ್ಮಿಕ ಇಲಾಖೆಗೆ ಮನವಿ: ಪುಟ್ಟಣ್ಣ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2020, 16:29 IST
Last Updated 29 ಸೆಪ್ಟೆಂಬರ್ 2020, 16:29 IST
ಬ್ಲಾಸಮ್‌ ಶಾಲೆ ಆವರಣದಲ್ಲಿ ಮಂಗಳವಾರ ಉಸ್ಮಾನ್‌ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪುಟ್ಟಣ್ಣ ಉದ್ಘಾಟಿಸಿದರು
ಬ್ಲಾಸಮ್‌ ಶಾಲೆ ಆವರಣದಲ್ಲಿ ಮಂಗಳವಾರ ಉಸ್ಮಾನ್‌ ಆಡಳಿತ ಮಂಡಳಿ ಸದಸ್ಯರ ಸಭೆಯನ್ನು ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪುಟ್ಟಣ್ಣ ಉದ್ಘಾಟಿಸಿದರು   

ರಾಮನಗರ:'ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳ ಶಿಕ್ಷಕರನ್ನು ಅಸಂಘಟಿತ ವಲಯದ ಕಾರ್ಮಿಕರು ಎಂದು ಪರಿಗಣಿಸುವಂತೆ ಕಾರ್ಮಿಕ ಇಲಾಖೆಯನ್ನು ಕೋರಲಾಗಿದೆ’ ಎಂದು ವಿಧಾನ ಪರಿಷತ್‌ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಪುಟ್ಟಣ್ಣ ತಿಳಿಸಿದರು.

"ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಶಾಲೆಗಳ ಶಿಕ್ಷಕರಿಗೆ ವಿಶೇಷ ಪ್ಯಾಕೇಜ್‌ ನೀಡಬೇಕು ಎಂದು ಮೊದಲು ಒತ್ತಾಯಿಸಿದ್ದೇ ನಾನು. ಕಳೆದ ಮೇ 16ರಂದು ವಿಧಾನ ಪರಿಷತ್‌ನ ಎಲ್ಲ ಸದಸ್ಯರ ಜೊತೆಗೂಡಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆವು. ನಂತರವೂ ನಾಲ್ಕೈದು ಬಾರಿ ಸಭೆಗಳು ನಡೆದವು. ಶಿಕ್ಷಕರ ಕಷ್ಟಕ್ಕೆ ಸ್ಪಂದಿಸುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ನಂತರದಲ್ಲಿ ಕೋವಿಡ್ ಪೀಡಿತನಾದ ಕಾರಣ ೪೫ ದಿನ ಮನೆಯಲ್ಲೇ ಇರಬೇಕಾಯಿತು. ಹೀಗಾಗಿ ಶಿಕ್ಷಕರ ಪರ ಧ್ವನಿ ಎತ್ತಲು ಸಾಧ್ಯವಾಗಲಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು. "ಸದ್ಯ ಖಾಸಗಿ ಶಾಲೆಗಳಿಗೆ ಆರ್‌ಟಿಇ ಬಾಕಿಯ ಎರಡನೇ ಕಂತು ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದರಿಂದ ಅವರ ಸಮಸ್ಯೆ ಸ್ವಲ್ಪ ಮಟ್ಟಿಗೆ ಬಗೆಹರಿದಿದೆ’ ಎಂದರು.

"ಪರಿಷತ್‌ ಸದಸ್ಯನಾಗಿ ಕಳೆದ ಎರಡು ದಶಕಗಳಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ಸಮುದಾಯದ ಪರವಾಗಿ ಹಲವು ಕಾರ್ಯಗಳನ್ನು ಮಾಡಿದ್ದೇನೆ. ಎಲ್ಲಿಯೂ ಕಪ್ಪು ಚುಕ್ಕೆ ಇಲ್ಲ. ಜಾತಿ-ಧರ್ಮಕ್ಕೆ ಅಂಟಿಕೊಳ್ಳದೇ ಕೆಲಸ ಮಾಡಿದ್ದೇನೆ. ಸತತ ಎರಡು ವರ್ಷ ಹೋರಾಟ ಮಾಡಿ ಖಾಸಗಿ ಶಾಲೆಗಳ ನೂರಾರು ಶಿಕ್ಷಕರಿಗೆ ಮರಳಿ ಉದ್ಯೋಗ ದೊರಕಿಸಿಕೊಟ್ಟಿದ್ದೇನೆ. ಅನುದಾನಿತ ಶಿಕ್ಷಣ ಸಂಸ್ಥೆಗಳ ನಡುವೆ ಶಿಕ್ಷಕರ ವರ್ಗಾವಣೆ, ಐದನೇ ವೇತನ ಆಯೋಗದ ಶಿಫಾರಸು ಜಾರಿ, ಎಕ್ಸ್‌ಗ್ರೇಷಿಯಾ ಹೆಚ್ಚಳ, ಖಾಸಗಿ ಶಾಲೆಗಳ ಶಿಕ್ಷಕರಿಗೆ ಚೆಕ್‌ ಮೂಲಕ ವೇತನ ಪಾವತಿ ಜೊತೆಗೆ ಇಎಸ್‌ಐ, ಪಿಎಫ್‌ ಸೌಲಭ್ಯ, 2009, 2015ರಲ್ಲಿ ಉಪನ್ಯಾಸಕರ ನೇಮಕಾತಿ ಹೋರಾಟದಲ್ಲಿ ಭಾಗಿಯಾಗಿದ್ದೇನೆ’ ಎಂದು ವಿವರಿಸಿದರು.

ADVERTISEMENT

ನಕಲಿ ಮತದಾರರ ಪಟ್ಟಿ ವಿಚಾರದಲ್ಲಿ ತಮ್ಮ ಬೆಂಬಲಿಗರು ಭಾಗಿಯಾಗಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು "ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸಲಾರೆ. ಹೇಗೆ ಚುನಾವಣೆ ನಡೆಸಬೇಕು ಎಂಬುದು ಚುನಾವಣಾ ಆಯೋಗಕ್ಕೆ ಗೊತ್ತು. ಯಾರು ಎಷ್ಟು ಹೆಸರುಗಳನ್ನು ಬೇಕಾದರೂ ಕಿತ್ತುಹಾಕಿ ಅರ್ಹತೆ ಇದ್ದವರಿಗಷ್ಟೇ ಮತದಾನಕ್ಕೆ ಅವಕಾಶ ನೀಡಲಿ’ ಎಂದರು.

ಕೆಎಎಂಎಸ್‌ ಕಾರ್ಯದರ್ಶಿ ಶಶಿಕುಮಾರ್‍, ಉಸ್ಮಾರ್ಡ್‌ ಜಿಲ್ಲಾ ಘಟಕದ ಅಧ್ಯಕ್ಷ ಪಟೇಲ್‌ ರಾಜು, ಕಾರ್ಯದರ್ಶಿ ಸುನಿಲ್‌ಕುಮಾರ್‍, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್‌.ಕೆ. ಬೈರಲಿಂಗಯ್ಯ, ಅನುದಾನಿತ ಶಾಲೆಗಳ ಸಂಘದ ಅಧ್ಯಕ್ಷ ಅರಸೇಗೌಡ, ಶಿಕ್ಷಣ ಸಂಸ್ಥೆಗಳ ಮುಖಂಡರಾದ ಜಾಲಮಂಗಲ ನಾಗರಾಜು, ಸುಬ್ಬಯ್ಯ, ಗಂಗಾಧರ ಮೂರ್ತಿ, ಕುಮಾರಸ್ವಾಮಿ, ಎಚ್. ಚಂದ್ರಶೇಖರ್‍, ಅಲ್ತಾಫ್‌ ಅಹಮ್ಮದ್, ಅಜ್ಗರ್‌ ಮುಲ್ಲಾ, ಬೈರಪ್ಪ, ಮಂಜುನಾಥ್‌ ಇದ್ದರು.

ನಂತರ ಪುಟ್ಟಣ್ಣ ನಗರದ ವಿವಿಧ ಖಾಸಗಿ ಶಾಲೆ ಮುಖಂಡರು ಮತ್ತು ಸಿಬ್ಬಂದಿ ಜೊತೆ ಸಮಾಲೋಚನೆ ಸಭೆ ನಡೆಸಿದರು.


ಮೊದಲು ಕಾಲೇಜು ಆರಂಭ ಒಳಿತು
"ಕೋವಿಡ್‌ನಿಂದಾಗಿ ಕಳೆದ ಆರೇಳು ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಬಂದ್‌ ಆಗಿವೆ. ತರಗತಿಗಳನ್ನು ಆರಂಭಿಸುವುದೇ ಆದರೆ ಮೊದಲು ಕಾಲೇಜು ಹಾಗೂ ನಂತರದಲ್ಲಿ ಶಾಲೆಗಳನ್ನು ತೆರೆಯಬೇಕು’ ಎಂದು ಪುಟ್ಟಣ್ಣ ಸಲಹೆ ನೀಡಿದರು.

"ರಾಜ್ಯದಲ್ಲಿ ಶಾಲೆ ಆರಂಭದ ಬಗ್ಗೆ ಶಿಕ್ಷಣ ಸಚಿವರು ಎಲ್ಲರ ಅಭಿಪ್ರಾಯ ಕೇಳಿದ್ದು, ಅವರಿಗೆ ನಮ್ಮ ಅನಿಸಿಕೆ ತಿಳಿಸಿದ್ದೇವೆ. ಕೋವಿಡ್ ನಡುವೆಯೂ ಕಾಲೇಜು-ಪ್ರೌಢಶಾಲೆ ವಿದ್ಯಾರ್ಥಿಗಳು ಓಡಾಡಿಕೊಂಡೇ ಇದ್ದಾರೆ. ಹೀಗಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದಲ್ಲಿ ವಾರದಲ್ಲಿ ಕನಿಷ್ಠ ಮೂರು ದಿನ ತರಗತಿ ನಡೆಸಬಹುದಾಗಿದೆ’ ಎಂದರು.

ನಕಲಿ ಮತದಾರರ ಪಟ್ಟಿ ಬಗ್ಗೆ ಚುನಾವಣಾ ಆಯೋಗ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಅರ್ಹರಿಗೆ ಮಾತ್ರ ಮತದಾನದ ಹಕ್ಕು ನೀಡಿದರೆ ಸಾಕು
ಪುಟ್ಟಣ್ಣ
ಬಿಜೆಪಿ ಸಂಭಾವ್ಯ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.