ADVERTISEMENT

ರಾಮನಗರ: ಶಾಲಾ ಸ್ವಚ್ಛತೆ ಯಾರ ಜವಾಬ್ದಾರಿ?

ಓದೇಶ ಸಕಲೇಶಪುರ
Published 17 ಜೂನ್ 2025, 4:32 IST
Last Updated 17 ಜೂನ್ 2025, 4:32 IST
   

ರಾಮನಗರ: ಮಕ್ಕಳಿಗೆ ಅಕ್ಷರ ಕಲಿಸಿ, ಬದುಕಿಗೆ ದಿಕ್ಕು ತೋರಿಸುವ ಕಲಿಕಾ ದೇವಾಲಯವಾದ ಶಾಲೆಗಳ ಕೊಠಡಿಗಳು ಮತ್ತು ಶಾಲಾವರಣವನ್ನು ಶುಚಿಯಾಗಿಟ್ಟುಕೊಂಡು ಉತ್ತಮ ಕಲಿಕಾ ವಾತಾವರಣ ಸೃಷ್ಟಿಸುವ ಜವಾಬ್ದಾರಿ ಯಾರದ್ದು? ಶಿಕ್ಷಕರದ್ದೊ, ಮಕ್ಕಳದ್ದೊ? ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿಯದ್ದೊ?

ಹೀಗೊಂದು ಪ್ರಶ್ನೆ ಸಾರ್ವಜನಿಕರ ಹಾಗೂ ಶಿಕ್ಷಕರ ವಲಯದಲ್ಲಿ ಕೇಳಿ ಬರುತ್ತಿದೆ. ನಗರದ ತುರುಪಲಾಯದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾ ಪಂಚಾಯಿತಿ ಸಿಇಒ ಅನ್ಮೋಲ್ ಜೈನ್ ಅವರು, ಜೂನ್ 6ರಂದು ಬೆಳಿಗ್ಗೆ ಭೇಟಿ ನೀಡಿದ್ದಾಗ ಶಿಕ್ಷಕಿ ಗಂಗಾಂಭಿಕ ಕೆ.ಆರ್ ಸಮ್ಮುಖದಲ್ಲಿ ವಿದ್ಯಾರ್ಥಿಗಳು ತರಗತಿ ಸ್ವಚ್ಛಗೊಳಿಸುತ್ತಿದ್ದರು.

ಸ್ಥಳದಲ್ಲೇ ಶಿಕ್ಷಕಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಸಿಇಒ ಅವರನ್ನು ಅಮಾನತು ಮಾಡುವಂತೆ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಸೂಚಿಸಿದ್ದರು. ಅದಾದ ಕೆಲವೇ ತಾಸಿನಲ್ಲಿ ಶಿಕ್ಷಕಿಯನ್ನು ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದರು. ಇದಕ್ಕೆ ಶಿಕ್ಷಕರಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸಹ ಅಮಾನತು ಖಂಡಿಸಿದ್ದರು.

ADVERTISEMENT

ಸ್ವಚ್ಛತಾ ಸಿಬ್ಬಂದಿಯೇ ಇಲ್ಲ:

ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ತರಗತಿಗಳನ್ನು ಗುಡಿಸಿ ಸ್ವಚ್ಛಗೊಳಿಸುವುದು ಸೇರಿದಂತೆ ಇತರ ಕೆಲಸಗಳಿಗಾಗಿ ‘ಡಿ’ ಗ್ರೂಪ್‌ ಸಿಬ್ಬಂದಿಯೇ ಇಲ್ಲ. ಜಿಲ್ಲೆಯ ಕೆಲ ಅನುದಾನಿತ ಶಾಲೆಗಳಲ್ಲಿ ಬೆರಳೆಣಿಕೆಯ ಹುದ್ದೆಗಳಲ್ಲಷ್ಟೇ ಭರ್ತಿಯಾಗಿವೆ. ಹೀಗಿರುವಾಗ, ತರಗತಿ ಮತ್ತು ಶಾಲಾವರಣದ ಸ್ವಚ್ಛತೆ ಹೊಣೆ ಯಾರದ್ದು ಎಂಬ ಪ್ರಶ್ನೆ ಎದುರಾಗಿದೆ.

‘ಇಡೀ ಶಾಲೆಯ ನಿರ್ವಹಣೆಯ ಹೊಣೆ ಶಿಕ್ಷಕರದ್ದೇ. ಅವರಿಗೆ ಪೂರಕವಾಗಿ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣೆ ಸಮಿತಿ (ಎಸ್‌ಡಿಎಂಸಿ) ಕೆಲಸ ಮಾಡಲಿದೆ. ಆದರೆ, ಶಾಲೆಯ ತರಗತಿಗಳಲ್ಲಿ ನಿತ್ಯ ಕಸ ಗುಡಿಸುವುದು ಸೇರಿದಂತೆ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತ್ಯೇಕ ಸಿಬ್ಬಂದಿ ಇರುವುದಿಲ್ಲ. ಹಾಗಾಗಿ, ಶಿಕ್ಷಕರೇ ಮಕ್ಕಳ ನೆರವಿನೊಂದಿಗೆ ಆ ಕೆಲಸವನ್ನು ನಿರ್ವಹಿಸುತ್ತಾರೆ. ಸಾಮಾನ್ಯವಾಗಿ ಮಕ್ಕಳೇ ತರಗತಿ ಗುಡಿಸಿ ಸ್ವಚ್ಛಗೊಳಿಸುತ್ತಾರೆ. ಕೆಲವೆಡೆ ಬಿಸಿಯೂಟ ಅಡುಗೆ ಕಾರ್ಯಕರ್ತರು ಸಹ ಕೈ ಜೋಡಿಸುತ್ತಿದ್ದಾರೆ. ಇದು ಹಿಂದಿನಿಂದಲೂ ನಡೆದುಕೊಂಡಿರುವ ಪದ್ಧತಿ’ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಿಕ್ಷಕರು ಸ್ವಚ್ಛಗೊಳಿಸಬೇಕೇ?:

‘ತರಗತಿ ಮತ್ತು ಶಾಲಾವರಣದ ಸ್ವಚ್ಛತೆಯೂ ಶಿಕ್ಷಣದ ಒಂದು ಭಾಗ. ಇತ್ತೀಚಿನ ವರ್ಷಗಳಲ್ಲಿ ಮಕ್ಕಳಿಂದ ಸ್ವಚ್ಛತೆ ಮಾಡಿಸುವಂತಿಲ್ಲ ಎಂದು ಇಲಾಖೆ ಹೇಳುತ್ತದೆ. ಸ್ವಚ್ಛತಾ ಕೆಲಸಕ್ಕೆ ‘ಡಿ’ ಗ್ರೂಪ್ ಸಿಬ್ಬಂದಿಯೂ ಇಲ್ಲದಿರುವಾಗ ಆ ಕೆಲಸವನ್ನು ನಿತ್ಯ ಶಿಕ್ಷಕರು ಮಾಡಬೇಕೇ? ಎಂಬ ಪ್ರಶ್ನೆಗೆ ಇಲಾಖೆ ಬಳಿ ಉತ್ತರವಿಲ್ಲ’ ಎಂದು ಶಿಕ್ಷಕಿಯೊಬ್ಬರು ಹೇಳಿದರು.

‘ಮತ್ತೊಂದೆಡೆ ವಿದ್ಯಾರ್ಥಿಗಳು ತರಗತಿ ಸ್ವಚ್ಛಗೊಳಿಸಿದರು ಎಂಬ ಕಾರಣಕ್ಕೆ ಐಎಎಸ್ ಅಧಿಕಾರಿಗಳು ಶಿಕ್ಷಕರನ್ನು ಅಮಾನತು ಮಾಡುತ್ತಾರೆ? ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ನೀಡುವುದಿಲ್ಲ. ಇದು ನಮ್ಮ ಅಧಿಕಾರಿಗಳ ಬುದ್ದಿಮಟ್ಟ’ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಚ್ಛತೆಯೂ ಶಿಕ್ಷಣದ ಭಾಗ:

 ‘ಜಿಲ್ಲೆಯ ಬಹುತೇಕ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ‘ಡಿ’ ಗ್ರೂಪ್ ಸಿಬ್ಬಂದಿಯೇ ಇಲ್ಲ. ಹೀಗಿರುವಾಗ ಶಾಲೆಗಳಲ್ಲಿ ಸ್ವಚ್ಛತೆ ಕೆಲಸವನ್ನು ಯಾರು ಮಾಡಬೇಕು? ಶಿಕ್ಷಕರೇ ಸ್ವಚ್ಛತೆ ಕೆಲಸ ಮಾಡಬೇಕೇ? ಅಥವಾ ಅವರ ಜೇಬಿನಿಂದ ಸಂಬಳ ಕೊಟ್ಟು ಸ್ವಚ್ಛತೆ ಕೆಲಸಕ್ಕೆ ‘ಡಿ’ ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕೇ?’ ಎಂದು ನಿವೃತ್ತ ಶಿಕ್ಷಕ ಸಿದ್ದರಾಜು ಪ್ರಶ್ನಿಸಿದರು.

‘ಹಿಂದೆಯೂ ಮಕ್ಕಳೇ ಕಸ ಗುಡಿಸುವ, ಶಾಲಾವರಣ ಸ್ವಚ್ಛವಾಗಿಟ್ಟುಕೊಳ್ಳುವ, ಶಾಲಾ ಉದ್ಯಾನ ನಿರ್ವಹಿಸುವ ಪರಿಪಾಠ ಇರಲಿಲ್ಲವೇ? ಮಕ್ಕಳಿಂದ ಬಲವಂತಾಗಿ ಶೌಚಾಲಯ ಸ್ವಚ್ಛತೆ ಸೇರಿದಂತೆ ಇತರ ಕಠಿಣ ಕೆಲಸಗಳನ್ನು ಮಾಡಿಸಿದರೆ ಅದು ತಪ್ಪು. ಸ್ವಚ್ಛತೆ ವಿಷಯಕ್ಕೆ ಶಿಕ್ಷಕಿ ಅಮಾನತು ಮಾಡಿದ್ದು ಶಿಕ್ಷಕರ ಮನೋಬಲ ಕುಗ್ಗಿಸುವ ನಡೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸರ್ಕಾರಿ ಶಾಲೆಗಳ ಸ್ವಚ್ಛತೆಗೆ ‘ಡಿ’ ಗ್ರೂಪ್‌ ಸಿಬ್ಬಂದಿಯೇ ಇಲ್ಲದಿರುವಾಗ ಏನು ಮಾಡಬೇಕು? ತರಗತಿ ಹಾಗೂ ಶಾಲಾ ವರಾಂಡದ ಸ್ವಚ್ಛತೆಯನ್ನು ವಿದ್ಯಾರ್ಥಿಗಳಿಂದ ಮಾಡಿಸುವುದು ತಪ್ಪಲ್ಲ. ಸ್ವಚ್ಛತೆ ಸಹ ಶಿಕ್ಷಣದ ಒಂದು ಭಾಗ
– ರಮೇಶ್ ಜಿಲ್ಲಾಧ್ಯಕ್ಷ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೆಂಗಳೂರು ದಕ್ಷಿಣ ಜಿಲ್ಲೆ
ಆದರೆ ಮಕ್ಕಳು ತರಗತಿ ಸ್ವಚ್ಛಗೊಳಿಸಿದ್ದನ್ನೇ ತಪ್ಪೆಂದು ಶಿಕ್ಷಕಿಯನ್ನು ಅಮಾನತು ಮಾಡುವುದಾದರೆ ‘ಡಿ’ ಗ್ರೂಪ್ ಇಲ್ಲದ ಎಲ್ಲಾ ಶಾಲೆಗಳ ಶಿಕ್ಷಕರನ್ನು ಸಹ ಅಮಾನತು ಮಾಡಬೇಕಾಗುತ್ತದೆ
– ಸಿದ್ದರಾಜು ನಿವೃತ್ತ ಶಿಕ್ಷಕ ರಾಮನಗರ
ತಡೆಯಾಜ್ಞೆ ಬೆನ್ನಲ್ಲೇ ಅಮಾನತು ರದ್ದು ಅಮಾನತು
ಆದೇಶಕ್ಕೆ ಶಿಕ್ಷಕರ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಶಿಕ್ಷಕರ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸಹ ಈ ಕುರಿತು ಆಕ್ರೋಶ ಹೊರಹಾಕಿದ್ದರು. ಅಮಾನತು ಪ್ರಶ್ನಿಸಿ ಶಿಕ್ಷಕಿ ಗಂಗಾಂಬಿಕ ಅವರು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಮಂಡಳಿ ಅಮಾನತಿಗೆ ತಡೆಯಾಜ್ಞೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಜೂನ್ 12ರಂದು ಅಮಾನತು ರದ್ದುಪಡಿಸಿ ಅದೇ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಮರು ಆದೇಶ ಹೊರಡಿಸಿದರು. ಆದರೆ ಶಿಕ್ಷಕಿ ಅಮಾನತು ಘಟನೆಯು ಅಲ್ಲಿಗೆ ನಿಲ್ಲದೆ ಬೇರೆ ಆಯಾಮ ಪಡೆದಿದೆ. ಶಾಲಾ ಸ್ವಚ್ಛತೆ ಕುರಿತ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
‘ಡಿ ಗ್ರೂಪ್ ಸಿಬ್ಬಂದಿ ನೇಮಕವೇ ಪರಿಹಾರ’
‘ಮಕ್ಕಳಿಂದ ಶಾಲೆಗಳ ಸ್ವಚ್ಛತೆ ಕೆಲಸ ಮಾಡಿಸಬೇಡಿ ಎಂದು ಶಿಕ್ಷಣ ಇಲಾಖೆ ಹೇಳುತ್ತದೆ. ನಮ್ಮನ್ನು ಕೆಲಸಕ್ಕೆ ನೇಮಕ ಮಾಡಿಕೊಂಡಿರುವುದು ಬೋಧನೆ ಮಾಡುವುದಕ್ಕಾಗಿಯೇ ಹೊರತು ಸ್ವಚ್ಛತೆ ಕೆಲಸಕ್ಕಲ್ಲ ಎಂದು ಮಾತು ಶಿಕ್ಷಕರಿಂದಲೂ ಕೇಳಿ ಬರುತ್ತದೆ. ಎಸ್‌ಡಿಎಂಸಿ ಪದಾಧಿಕಾರಿಗಳಿಗೆ ಅವರ ಪಾತ್ರದ ಬಗ್ಗೆಯೇ ಸರಿಯಾದ ಅರಿವಿಲ್ಲ. ಇದಕ್ಕಿರುವುದು ಎರಡೇ ಪರಿಹಾರ. ಶಿಕ್ಷಣ ಇಲಾಖೆ ಪ್ರತಿ ಸರ್ಕಾರಿ ಶಾಲೆಗೆ ಒಬ್ಬರು ‘ಡಿ’ ಗ್ರೂಪ್ ಸಿಬ್ಬಂದಿಯನ್ನು ನೇಮಕ ಮಾಡಬೇಕು. ಇಲ್ಲವಾದರೆ ಸ್ಥಳೀಯ ಆಡಳಿತ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ ಪಟ್ಟಣ ಪಂಚಾಯಿತಿ ನಗರಸಭೆ ಮಹಾನಗರಗಳಲ್ಲಿ ಮಹಾನಗರ ಪಾಲಿಕೆಗಳು ಶಾಲೆಗಳ ಸ್ವಚ್ಛತೆಯನ್ನು ನಿರ್ವಹಣೆ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ ಅಧ್ಯಕ್ಷ ಉಮೇಶ್ ದೊಡ್ಡಗಂಗವಾಡಿ ‘ಪ್ರಜಾವಾಣಿ’ಗೆ ತಿಳಿಸಿದರು.
ಜಿ.ಪಂ. ಎದುರು ಪರಿಷತ್ ಸದಸ್ಯ ಪುಟ್ಟಣ್ಣ ಧರಣಿ
ಇಂದು ಶಿಕ್ಷಕಿ ಅಮಾನತು ಮಾಡಿದ್ದನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ ಅವರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಲಿದ್ದಾರೆ. ಶಿಕ್ಷಕರ ಸಂಘಟನೆಗಳು ಸಹ ಧರಣಿಗೆ ಬೆಂಬಲ ವ್ಯಕ್ತಪಡಿಸಿವೆ. ಅಮಾನತು ಖಂಡಿಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಜಿ.ಪಂ. ಸಿಇಒ ಅವರಿಗೆ ಜೂನ್ 11ರಂದು ಪುಟ್ಟಣ್ಣ ಪತ್ರ ಬರೆದಿದ್ದರು. ‘ಸ್ವಚ್ಛತಾ ಪರಿಕರಗಳಾದ ಪೊರಕೆ ಬುಟ್ಟಿ ಕೈಗವಸು ಸೋಪು ಶೌಚಾಲಯ ಮೂತ್ರಾಲಯ ಸ್ವಚ್ಛಗೊಳಿಸುವ ಬ್ರಷ್‌ ಪರಿಕರಗಳೊಂದಿಗೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಬರುವೆ. ತಾವು ಮತ್ತು ತಮ್ಮ ಕಚೇರಿಯ ಅಧಿಕಾರಿಗಳು ಜಿಲ್ಲೆಯಲ್ಲಿರುವ ಎಲ್ಲಾ ಶಾಲೆಗಳನ್ನು ಶುಚಿಗೊಳಿಸಬೇಕು ಎಂಬ ಅಭಿಯಾನ ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಕರೊಡನೆ ಧರಣಿ ಮಾಡುವೆ’ ಎಂದು ಪತ್ರದಲ್ಲಿ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.