ADVERTISEMENT

ಜನವರಿ 8ರಂದು ರಾಷ್ಟ್ರ ವ್ಯಾಪಿ ಮುಷ್ಕರ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2019, 14:22 IST
Last Updated 17 ಡಿಸೆಂಬರ್ 2019, 14:22 IST
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್. ಉಮೇಶ್ ಮಾತನಾಡಿದರು
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್. ಉಮೇಶ್ ಮಾತನಾಡಿದರು   

ರಾಮನಗರ: ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಜನ ವಿರೋಧಿ ನೀತಿಗಳನ್ನು ವಿರೋಧಿಸಿ, 12 ಅಂಶಗಳ ಬೇಡಿಕೆ ಆಧಾರಿತ ಪರ್ಯಾಯ ಆರ್ಥಿಕ ನೀತಿಗಾಗಿ 2020ರ ಜನವರಿ 8ರಂದು ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ನಡೆಸಲಾಗುವುದು ಎಂದು ಸಿಐಟಿಯು ರಾಜ್ಯ ಘಟಕದ ಕಾರ್ಯದರ್ಶಿ ಕೆ.ಎನ್. ಉಮೇಶ್ ಹೇಳಿದರು.

ಇಲ್ಲಿನ ಸ್ಫೂರ್ತಿ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಕಾರ್ಮಿಕ ವರ್ಗವನ್ನು ವಿಭಜಿಸುವ ಜಾತಿ, ಧರ್ಮ ಆಧಾರಿತ ವಿಭಜಕ ಶಕ್ತಿಗಳನ್ನು, ಹುಸಿ ರಾಷ್ಟ್ರೀಯತೆಯ ಘೋಷಣೆಗಳನ್ನು ಹಿಮ್ಮಟ್ಟಿಸಿ ದುಡಿಯುವ ಜನತೆಯ ಹಕ್ಕುಗಳ ರಕ್ಷಣೆಗೆ ಎಲ್ಲರೂ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಕಾರ್ಮಿಕ ಇಲಾಖೆಯಲ್ಲಿ ಹೆಚ್ಚು ದೂರು ದಾಖಲಾಗುತ್ತಿದ್ದು, ವೇತನ ಪಾವತಿ, ಕನಿಷ್ಟ ವೇತನ ಪಾವತಿ, ಉಪಧನ ಪಾವತಿ, ಕಾನೂನು ಉಲ್ಲಂಘನೆ ಕುರಿತು ದೂರುಗಳು ಹೆಚ್ಚುತ್ತಿವೆ. ರಾಜಿ ಸಂಧಾನ ಯಶಸ್ಸಿನ ಪ್ರಮಾಣವು ಶೇ 3 ರಿಂದ 5 ಮಾತ್ರವಾಗಿದೆ. ಉಳಿದ ಶೇ 95 ಪ್ರಕರಣಗಳು ನ್ಯಾಯಾಲಯಕ್ಕೆ ಹೋಗುತ್ತಿವೆ. ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ ಇಲ್ಲದಂತಾಗಿದೆ’ ಎಂದು ಆರೋಪಿಸಿದರು.

ADVERTISEMENT

ಆರ್ಥಿಕ ನಿಧಾನಗತಿಗೆ ಕಾರಣವಾಗಿರುವ ನೀತಿಗಳ ವಿರುದ್ಧ, ಅದರಿಂದಾಗಿ ಉದ್ಯೋಗ ಕಳೆದುಕೊಳ್ಳುವ ಕಾರ್ಮಿಕರ, ಉದ್ಯೋಗ, ವೇತನ, ಗಳಿಕೆಯ ರಕ್ಷಣೆಗಾಗಿ ಉದ್ಯೋಗ ಸೃಷ್ಟಿಯ ಕ್ರಮಗಳಿಗೆ, ಕಾರ್ಮಿಕ ಕಾನೂನುಗಳ ಕಟ್ಟಿನಿಟ್ಟಿನ ಜಾರಿಗಾಗಿ, ಎಲ್ಲಾ ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯಗಳಿಗಾಗಿ ಒತ್ತಾಯಿಸಿಲಾಗವುದು ಎಂದು ತಿಳಿಸಿದರು.

ಗುತ್ತಿಗೆ ಪದ್ಧತಿ ನಿಯಂತ್ರಣಕ್ಕಾಗಿ ಸಮಾನ ಕೆಲಸಕ್ಕೆ ಸಮಾನ ವೇತನಕ್ಕಾಗಿ, ಗುತ್ತಿಗೆ ಮತ್ತಿತರ ಖಾಯಂಯೇತರರ ಖಾಯಂ ಶಾಸನಕ್ಕಾಗಿ, ಸಾರ್ವಜನಿಕ ಉದ್ದಿಮೆಗಳ ಷೇರು ವಿಕ್ರಯ ವಿರೋಧಿಸಿ, ರಕ್ಷಣ ವಲಯದಲ್ಲಿನ ಸಾರ್ವಜನಿಕ ಉದ್ದಿಮೆಗಳ, ರೈಲ್ವೆ ಮತ್ತಿತರ ಇಲಾಕೆಗಳ ಖಾಸಗೀಕರಣ ವಿರೋಧಿಸಲಾಗುವುದು. ₨21 ಸಾವಿರ ರಾಷ್ಟ್ರ ವ್ಯಾಪಿ ಸಮಾನ ಕನಿಷ್ಠ ವೇತನಕ್ಕಾಗಿ ಆಗ್ರಹಿಸಲಾಗುವುದು ಎಂದರು.

ಬ್ಯಾಂಕಿಂಗ್, ವಿಮೆ ಮತ್ತಿತರ ನಿರ್ಣಾಯಕ ಆಯಕಟ್ಟಿನ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ವಿರೋಧಿಸಲಾಗುವುದು. ಅಸಂಘಟಿತ ಕಾರ್ಮಿಕರಿಗೆ ಕಾನೂನು ಬದ್ದ ಭವಿಷ್ಯ ನಿಧಿ ಮತ್ತು ಪಿಂಚಣಿಗಾಗಿ, ಸಾಮಾಜಿಕ ಭದ್ರತಾ ಮಂಡಳಿಗಳಿಗೆ ನಿಧಿಗಾಗಿ ಕಲ್ಯಾಣ ಯೋಜನೆಗಳಿಗಾಗಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ರೈತರ ಬೆಳೆಗಳಿಗೆ ನ್ಯಾಯಯುತ ಬೆಲೆಗಳಿಗಾಗಿ ಡಾ. ಸ್ವಾಮಿನಾಥನ್ ವರದಿ ಜಾರಿಗಾಗಿ, ಸಾಲ ಮನ್ನಾಕ್ಕಾಗಿ, ಆತ್ಮಹತ್ಯೆ ತಡೆಗಾಗಿ, ಗ್ರಾಮೀಣ ಉದ್ಯೋಗ, ಖಾತ್ರಿ ಯೋಜನೆಯನ್ನು ಬಲಪಡಿಸಲು ಒತ್ತಾಯಿಸಲಾಗುವುದು ಎಂದು ಮಾಹಿತಿ ನೀಡಿದರು.

ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಉದ್ಯೋಗಿಗಳ ಒಕ್ಕೂಟದ ಅಧ್ಯಕ್ಷ ಸಿ.ಎಸ್. ಪ್ರಸನ್ನಕುಮಾರ್, ಸಿಐಟಿಯು ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಖಜಾಂಚಿ ಟಿ.ಜೆ. ಕಾಮತ್, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಕೆಂಪಯ್ಯ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ಸಿಐಟಿಯು ಬಿಡದಿ ಅಧ್ಯಕ್ಷ ಯೋಗೇಶ್, ಪ್ರಧಾನ ಕಾರ್ಯದರ್ಶಿ ಬಿ.ಬಿ. ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.