ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ: ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2011, 10:40 IST
Last Updated 9 ಸೆಪ್ಟೆಂಬರ್ 2011, 10:40 IST

ಹೊಸನಗರ: ಲೋಕಾಯುಕ್ತರ ಆದೇಶವನ್ನು ಉಲ್ಲಂಘಿಸಿ ತಾಲ್ಲೂಕಿನ ಮೀಸಲು ಅರಣ್ಯ ಪ್ರದೇಶದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವಂತೆ ಆಗ್ರಹಿಸಿ ಗ್ರಾಮಸ್ಥರು ಗುರುವಾರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ಎಂ. ಗುಡ್ಡೆಕೊಪ್ಪ, ಮಾರುತಿಪುರ ಹಾಗೂ ಜೇನಿ ಗ್ರಾ.ಪಂ. ವ್ಯಾಪ್ತಿಯಲ್ಲಿನ ಮೀಸಲು ಅರಣ್ಯ ಪ್ರದೇಶದಲ್ಲಿ ಹಲವು ವರ್ಷಗಳಿಂದ ಪ್ರಭಾವಿ ಜನಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆಯ ಮರ್ಜಿಯಿಂದಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ ಎಂಬುದು ಪ್ರತಿಭಟನಾಕಾರರ ದೂರು.

ಹಿಂದೆ ಲೋಕಾಯುಕ್ತರು ಹೊಸನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿನ ಅಕ್ರಮ ಕಲ್ಲು ಗಣಿಗಾರಿಕೆ ಕುರಿತಂತೆ ದೂರು ನೀಡಲಾಗಿತ್ತು. ದೂರು ಪರಿಶೀಲಿಸಿದ ಲೋಕಾಯುಕ್ತರು ಕೂಡಲೆ ಗಣಿಗಾರಿಕೆ ನಿಗ್ರಹ ಮಾಡುವಂತೆ ಅರಣ್ಯ ಹಾಗೂ ಪರಿಸರ ಇಲಾಖೆಗೆ ಆದೇಶ ನೀಡಿದ್ದರು.

ಕಲ್ಲು ಗಣಿಗಾರಿಕೆ ಹಾಗೂ ಅತಿಕ್ರಮಣ ಕುರಿತ ಲೋಕಾಯುಕ್ತ ಆದೇಶ ಪಾಲಿಸಬೇಕು ಇಲ್ಲವಾದಲ್ಲಿ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಾಲಗದ್ದೆ ಉಮೇಶ್, ಅರಳಿಕೊಪ್ಪ ಸತೀಶ್, ಕಾಡುವಳ್ಳಿ ಸತೀಶ್, ಮಹೇಶ್, ವೀರಭದ್ರಪ್ಪ, ಪಿ.ಬಿ. ಗುರುಪಾದಪ್ಪ, ಮಂಜಪ್ಪ, ಈಶ್ವರ ಮತ್ತಿತರರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.