ADVERTISEMENT

ಅನುಪಾಲನಾ ವರದಿ ನೀಡದ ಅಧಿಕಾರಿಗಳು: ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2017, 8:37 IST
Last Updated 24 ನವೆಂಬರ್ 2017, 8:37 IST

ಶಿಕಾರಿಪುರ: ಅಧಿಕಾರಿಗಳು ಅನುಪಾಲನಾ ವರದಿ ನೀಡಿಲ್ಲ ಎಂಬ ಕಾರಣಕ್ಕಾಗಿ ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯನ್ನು ಬುಧವಾರ ರದ್ದು ಪಡಿಸಲಾಯಿತು. ತಾಲ್ಲೂಕು ಪಂಚಾಯ್ತಿ ಸದಸ್ಯರು ಮಾತನಾಡಿ, ‘ಅನುಪಾಲನಾ ವರದಿಯನ್ನು ಸದಸ್ಯರಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಿಲ್ಲ. ಸಾಮಾನ್ಯ ಸಭೆಗೆ ಕೆಲವು ಇಲಾಖೆ ಅಧಿಕಾರಿಗಳು ನಿರಂತರವಾಗಿ ಗೈರಾಗುತ್ತಿದ್ದಾರೆ. ಅನುಪಾಲನಾ ವರದಿ ನೀಡದ ಹಿನ್ನೆಲೆಯಲ್ಲಿ ಸಭೆ ರದ್ದುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ, ‘ಅಧಿಕಾರಿಗಳು ಅನುಪಾಲನಾ ವರದಿಯನ್ನು ಸದಸ್ಯರಿಗೆ ತಲುಪಿಸದಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ತಾಲ್ಲೂಕು ಪಂಚಾಯ್ತಿ ಸದಸ್ಯರಿಗೆ ಬೆಲೆ ಇಲ್ಲವೇ ಎಂದು ಅಧಿಕಾರಿಗಳಿಗೆ’ ಪ್ರಶ್ನಿಸಿದರು.

‘ಅನುಪಾಲನಾ ವರದಿ ನೀಡದ ಕಾರಣ ಸಭೆಯನ್ನು ಡಿ. 1ಕ್ಕೆ ಮುಂದೂಡಿದ್ದೇವೆ. ಇಲಾಖೆಗಳ ಮುಖ್ಯಾಧಿಕಾರಿ ಸಭೆಗೆ ಬರಬೇಕು. ನಿಮ್ಮ ಸಹಾಯಕರನ್ನು ಕಳುಹಿಸಬಾರದು. ಶೀಘ್ರದಲ್ಲಿ ಸದಸ್ಯರಿಗೆ ಅನುಪಾಲನಾ ವರದಿ ತಲುಪಿಸಬೇಕು’ ಎಂದು ಸೂಚಿಸಿದರು.

ADVERTISEMENT

ಉಪಾಧ್ಯಕ್ಷೆ ರೂಪಾ ದಯಾನಂದ್, ಕಾರ್ಯ ನಿರ್ವಾಹಕಾಧಿಕಾರಿ ಆನಂದ ಕುಮಾರ್, ಸದಸ್ಯರಾದ ಕವಲಿ ಸುಬ್ರಮಣ್ಯ, ಈಸೂರು ಜಯಣ್ಣ, ಆರ್.ಕೆ.ಶಂಭು, ಸುರೇಶ್‌ ನಾಯ್ಕ, ಮಲ್ಲಿಕಾರ್ಜುನ ರೆಡ್ಡಿ, ಪ್ರಕಾಶ್‌ ಉಡುಗಣಿ, ಚನ್ನಳ್ಳಿ ಪ್ರಕಾಶ್‌, ಪ್ರೇಮಾ ಲೋಕೇಶ್, ಮಮತಾ, ಗೀತಾ, ವಿಜಯಲಕ್ಷ್ಮಿ, ಶಿಲ್ಪಾ ಇದ್ದರು.

ಭತ್ತದ ಬೆಳೆಗೆ ಮಾರಕವಾಗಿರುವ ಸೈನಿಕ ಹುಳುಗಳ ನಿಯಂತ್ರಣದ ಬಗ್ಗೆ ಕೃಷಿ ಅಧಿಕಾರಿಗಳು ಗಮನ ಹರಿಸಬೇಕು. ಸೈನಿಕ ಹುಳುಗಳಿಂದ ಭತ್ತದ ಬೆಳೆ ಹಾನಿ ಬಗ್ಗೆ ಸಮೀಕ್ಷೆ ನಡೆಸಿ, ರೈತರ ಪರಿಹಾರ ನೀಡಬೇಕು. ಸರ್ಕಾರ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.