ADVERTISEMENT

`ಅಪಪ್ರಚಾರ ಮಾಡುವವರಿಗೆ ತಕ್ಕಪಾಠ'

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 5:45 IST
Last Updated 10 ಏಪ್ರಿಲ್ 2013, 5:45 IST

ಸೊರಬ: ತಾಲ್ಲೂಕಿನ ಮತದಾರರಗೆ ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡು, ಈಗ ನನಗೆ ದೊರೆಯುತ್ತಿರವ ಜನ ಬೆಂಬಲ ಸಹಿಸದೇ ಮತಿಭ್ರಮಣೆಯಿಂದ ನನ್ನ ಬಗ್ಗೆ ಅಪಪ್ರಚಾರ ಮಾಡುವವರೆಗೆ ಈ ಚುನಾವಣೆಯಲ್ಲಿ ಜನ ತಕ್ಕಪಾಠ ಕಲಿಸಲಿದ್ದಾರೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ತಾಲ್ಲೂಕಿನ ನ್ಯಾರ್ಶಿ ಗ್ರಾಮ ಪಂಚಾಯ್ತಿಯ ಕಮಲಾಪುರ ಗ್ರಾಮದಲ್ಲಿ ಮಂಗಳವಾರ ಮತ ಯಾಚಿಸಿ, ನಂತರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಜನರ ಸಮಸ್ಯೆಗಳನ್ನು ಬಗೆಹರಿಸದೇ ಕೇವಲ ಸ್ವಾರ್ಥ ರಾಜಕಾರಣ ಮಾಡುತ್ತಾ, ಕಾರ್ಯಕರ್ತರನ್ನು ದಿಕ್ಕು ತಪ್ಪಿಸಿ, ದ್ವೇಷದ ರಾಜಕಾರಣ ಮಾಡುವ ಪ್ರವೃತ್ತಿ ನಿಲ್ಲಿಸಬೇಕು ಎಂದು ಪ್ರತಿ ಸ್ಪರ್ಧಿಗಳಿಗೆ ಮನವಿ ಮಾಡಿದರು.

ಅಭಿವೃದ್ಧಿ ಮಾಡದೇ ಚುನಾವಣೆ ಬಂದಾಗ ಮತ ಪಡೆಯಲು ಸಭೆ ನಡೆಸುವುದು ಜನರಿಗೆ ಹಾಗೂ ಪ್ರಜಾಪ್ರಭುತ್ವಕ್ಕೆ ದ್ರೋಹ ಬಗೆದಂತೆ ಎಂದರು.

ತಾವು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸಭೆ ನಡೆಸಿದಾಗ ತಾಲ್ಲೂಕಿನಲ್ಲಿ ಇಬ್ಬರಿಗೆ ಮತ ಕೊಟ್ಟು ಶಾಸಕಾಗಿ, ಮಂತ್ರಿಯಾದರು. ಆದರೂ ನಮ್ಮ ಸಮಸ್ಯೆಗಳನ್ನು ಅವರು ಪರಿಗಣಿಸಿ ಪರಿಹಾರ ಕಂಡುಕೊಟ್ಟಿಲ್ಲ. ಆದ್ದರಿಂದ ಈ ಚುನಾವಣೆಯಲ್ಲಿ ಮಧು ಬಂಗಾರಪ್ಪ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಜನರೇ ಹೇಳಿಕೆ ಕೊಡುತ್ತಿದ್ದಾರೆ ಎಂದು ತಿಳಿಸಿದರು.

ಬಂಗಾರಪ್ಪ ಅವರ ಮಗನಾಗಿ ಓಟಿಗಾಗಿ ರಾಜಕಾರಣ ಮಾಡುತ್ತಿಲ್ಲ. ಬಡವರ ಬಗ್ಗೆ ದೀನದಲಿತರ ಬಗ್ಗೆ ಕನಸು ಕಾಣುತ್ತಿದ್ದ ಅಪ್ಪಾಜಿ ಅವರ ಕನಸು ನನಸಾಗಿಸಲು ಜನರ ಜತೆಗಿದ್ದೇನೆ ಎಂದು ಹೇಳಿದರು. ಅವರ ಆದರ್ಶ, ಸಜ್ಜನಿಕೆ ನನ್ನಲ್ಲಿ ರಕ್ತಗತವಾಗಿ ಬಂದಿದ್ದು, ತಾಲ್ಲೂಕಿನ ಜನರಲ್ಲಿ ಅಪ್ಪಾಜಿ ಅವರನ್ನು ಕಾಣುತ್ತಾ ಜನಪರ ಕೆಲಸ ಮಾಡುತ್ತಿದ್ದೇನೆ ಎಂದರು.

ತಂಪು ಕನ್ನಡಕ ಧರಿಸಿದ ಮಾತ್ರಕ್ಕೆ ಜನಪ್ರತಿನಿಧಿಯಾಗಲು ಸಾಧ್ಯವಿಲ್ಲ. ಅಧಿಕಾರವಿದ್ದಾಗ ಕೆಲಸ ಮಾಡುವುದನ್ನು ಬಿಟ್ಟು ಹಣ ಮಾಡುವ ದೃಷ್ಟಿಯಿಂದ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಕೆಜೆಪಿ ಮುಖಂಡರು ಮಧು ಬಂಗಾರಪ್ಪ ಅವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು.

ರಾಜ್ಯ ಘಟಕದ ಕಾರ್ಯದರ್ಶಿ ಎನ್. ಕುಮಾರ್, ಬ್ಲಾಕ್ ಅಧ್ಯಕ್ಷ ಎಚ್. ಗಣಪತಿ, ತಾಲ್ಲೂಕು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಾಕೊಪ್ಪದ ಪಕ್ಕೀರಪ್ಪ, ಮುಖಂಡರಾದ ರತ್ನಾಕರ, ಸುಧೀರ್ ಹೆಗಡೆ, ಗುತ್ಯಪ್ಪ, ಗಣಪತಿ ಶೆಟ್ರು, ದತ್ತು, ಗೋಪಿ, ಪರುಶುರಾಮ, ಬಂಗಾರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.