ADVERTISEMENT

ಆಡಳಿತದ ಮೌನ ದಂಧೆಕೋರರಿಗೆ ವರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 7:43 IST
Last Updated 16 ಏಪ್ರಿಲ್ 2017, 7:43 IST
ತೀರ್ಥಹಳ್ಳಿ ತಾಲ್ಲೂಕಿನ ಗಬಡಿಯ ಮರಳು ಕ್ವಾರೆಯಲ್ಲಿ ಲೋಕೋಪಯೋಗಿ ಇಲಾಖೆ ಮರಳು ದಾಸ್ತಾನು ಮಾಡಿರುವುದು.
ತೀರ್ಥಹಳ್ಳಿ ತಾಲ್ಲೂಕಿನ ಗಬಡಿಯ ಮರಳು ಕ್ವಾರೆಯಲ್ಲಿ ಲೋಕೋಪಯೋಗಿ ಇಲಾಖೆ ಮರಳು ದಾಸ್ತಾನು ಮಾಡಿರುವುದು.   

ತೀರ್ಥಹಳ್ಳಿ:  ಬತ್ತಿ ಬರಿದಾಗಿರುವ ಜೀವ ನದಿ ತುಂಗಾ, ಮಾಲತಿಗೆ ತನ್ನೊಡಲಿನ ಮರಳೇ ಶಾಪವಾಗಿ ಪರಿಣಮಿಸಿದೆ. ವ್ಯಾಪಕವಾಗಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆಯಿಂದ ಸೊರಗಿದ ನದಿಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ.ಪರಿಸರ ಸಂರಕ್ಷಣೆ ನಿಯಮಗಳನ್ನು ಗಾಳಿಗೆ ತೂರುತ್ತಿರುವುದರಿಂದ ನದಿಗಳ ಒಡಲು ಬರಿದಾಗುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಆಡಳಿತದ ಮೌನ ಮರಳು ದಂಧೆಕೋರರಿಗೆ ವರವಾಗಿ ಪರಿಣಮಿಸಿದೆ.

ನದಿ ಪಾತ್ರದಲ್ಲಿ ಅಕ್ರಮ– ಸಕ್ರಮ ಹೆಸರಿನಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಮರಳು ಅಕ್ರಮ ಸಾಗಣೆಯಿಂದ ಜಲಚರಗಳ ಜೀವಕ್ಕೆ ಕುತ್ತು ಬಂದಿದೆ. ಮರಳು ಖಾಲಿ ಆಗುತ್ತಿರುವುದರಿಂದ ನದಿ ನೀರಿನ ಹರಿವಿನ ಪಥ ಬದಲಾಗುವ ಸೂಚನೆ ಗಳು ಕಂಡುಬರುತ್ತಿದೆ. ಇದರ ನಡುವೆಯೇ ಪರಿಸರ ಇಲಾಖೆ ಅನು ಮತಿ ಪಡೆಯದೇ ಮರಳು ಕ್ವಾರಿ ಹರಾಜು ಗೊಳಿಸಿರುವುದು ಮಾರಕವಾಗಿದೆ. ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಹಸಿರು ಪೀಠ ನೀಡಿರುವ ನಿರ್ದೇಶನಗಳು ನದಿ ಪಾತ್ರದಲ್ಲಿ ಉಲ್ಲಂಘನೆಯಾಗುತ್ತಿದೆ. ಕೇಂದ್ರ ಪರಿಸರ ಸಚಿವಾಲಯ, ಪರಿಸರ ಮಂಡಳಿ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಅರಣ್ಯ ಇಲಾಖೆ ಇದನ್ನು ಕಂಡೂ ಕಾಣದಂತಿದೆ. ಪರಿಸರ ಹಾನಿಯಿಂದಾಗಿ ಕೃಷಿ ಚಟುವಟಿಕೆಗೂ ತೊಂದರೆ ಎದುರಾಗಿದೆ.

ತಾಲ್ಲೂಕಿನ ಹೆದ್ದೂರು, ಹೊಳೇಕೊಪ್ಪ, ಮಹಿಷಿ, ಹುಣಸವಳ್ಳಿ, ದಬ್ಬಣಗದ್ದೆ,  ಗಬಡಿ, ಕೋಡ್ಲು, ಕಲ್ಮನೆ, ಮಳಲೂರು, ಕುಂದಾ, ಚಂಗಾರು, ಬಸವಾನಿ ಸೇರಿದಂತೆ ಅನೇಕ ಭಾಗಗಳಲ್ಲಿ ಈ ಮರಳು ದಂಧೆ ವ್ಯಾಪಕವಾಗಿದೆ. ಸ್ಥಳೀಯವಾಗಿ ನೀಡುತ್ತಿರುವ ಗ್ರಾಮ ಪಂಚಾಯ್ತಿ ಪರವಾನಗಿ ಹೆಸರಲ್ಲಿ ಮರಳು ಅಕ್ರಮ ಸಾಗಾಟ ಮಾಡಿ, ಅನೇಕ ರಹಸ್ಯ ಸ್ಥಳಗಳಲ್ಲಿ ಶೇಖರಿಸಿಡಲಾಗಿದೆ. ಹೆದ್ದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೊಳೆಕೊಪ್ಪ ಕ್ವಾರಿಯಲ್ಲಿ ನೂರಾರು ಟ್ರ್ಯಾಕ್ಟರ್‌ಗಳಲ್ಲಿ ಮರಳು ಸಾಗಣೆಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಕ್ಯಾದಿಗೆರೆ ಗ್ರಾಮದ ಸಂತೆಕೊಪ್ಪ ಮಾರ್ಗದ ನೇರಲೆ ಅರಣ್ಯ ಪ್ರದೇಶದಲ್ಲಿ ಮರಳು ಅಕ್ರಮ ದಾಸ್ತಾನು ಮಾಡಲಾಗಿದೆ. ಲೋಕೋಪಯೋಗಿ ಇಲಾಖೆ ನಿರ್ವಹಣೆಯ ಕ್ವಾರಿ ಸಂಗ್ರಹ ಸ್ಥಳದಲ್ಲಿ ಮರಳಿನ ಲಭ್ಯತೆಯಿದ್ದರೂ ಪರವಾನಗಿ ನೀಡಲು ಕುಂಟು ನೆಪ ಹೇಳಲಾಗುತ್ತಿದೆ. ಮರಳಿನ ಕೃತಕ ಅಭಾವ ಸೃಷ್ಟಿಸಿ ದಂಧೆಕೋರರಿಗೆ ಲಾಭ ಮಾಡಿಕೊಡುಲು ಅಧಿಕಾರಿಗಳು ಸಹಕರಿಸುತ್ತಿದ್ದಾರೆ ಎಂದು ನಾಗರಿಕರು ದೂರಿದ್ದಾರೆ.

ಹೊಸ ಮರಳು ನೀತಿಯಡಿ ಮರಳು ಕ್ವಾರಿ ಹರಾಜು ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತವಾಗುತ್ತಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಮರಳು ವಾಮಮಾರ್ಗದ ಮೂಲಕ ಖಾಸಗಿಯವರ ಪಾಲಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿದೆ.ತೂದೂರು, ನಂಬಳ, ಬಗ್ಗೊಡಿಗೆ ಮರಳು ಕ್ವಾರೆಗಳನ್ನು ಪರಿಸರ ಇಲಾಖೆ ಅನುಮತಿ ಪಡೆಯದೇ ಹರಾಜು ಹಾಕಲಾಗಿದೆ. ಟೆಂಡರ್‌ ಪಡೆದವರು ಪರಿಸರ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂಬ ಷರತ್ತು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಪರಿಸರ ಇಲಾಖೆ ಅನುಮತಿ ವಿಳಂಬವಾದರೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮರಳು ಮೇಲುಸ್ತುವಾರಿ ಸಮಿತಿಯಿಂದ ಅನುಮತಿ ಪಡೆಯುವ ಹುನ್ನಾರ ನಡೆಯುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.ನದಿ ನೀರು ಬತ್ತಿರುವುದರಿಂದ ಅಲ್ಲಲ್ಲಿ ನಿಂತ ನೀರಿನ ಗುಂಡಿಗಳಲ್ಲಿ ಜೀವ ಹಿಡಿದಿಟ್ಟುಕೊಂಡಿದ್ದ ಅನೇಕ   ಅಪರೂಪದ ಜಲಚರಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.