ADVERTISEMENT

ಇಂದು ಬಿಜೆಪಿ ವಿರುದ್ಧ ಕೆಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 5:34 IST
Last Updated 26 ಡಿಸೆಂಬರ್ 2012, 5:34 IST

ಶಿವಮೊಗ್ಗ: ರಾಜ್ಯ ಬಿಜೆಪಿ ಸರ್ಕಾರ ನಿಷ್ಕ್ರಿಯಗೊಂಡಿದೆ ಎಂದು ಆರೋಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಕೆಜಿಪಿ ಡಿ. 26ರಂದು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಪಿ. ಪುರುಷೊತ್ತಮ್ ಹೇಳಿದರು.

ಬಿಜೆಪಿ ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮಾಡುವಲ್ಲಿ ವೀಫಲವಾಗಿದ್ದು, ಇದನ್ನು ಜನರ ಗಮನಕ್ಕೆ ತರಲು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಬಿಜೆಪಿ ಸರ್ಕಾರ ಕೂಡಲೆ ವಿಧಾನಸಭೆ ವಿಸರ್ಜಿಸಿ ಜನಾದೇಶಕ್ಕೆ ಮುಂದಾಗುವಂತೆ ಪ್ರತಿಭಟನೆಯಲ್ಲಿ ಆಗ್ರಹಿಸಿ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಸರ್ಕಾರ ಕಳೆದ 6ತಿಂಗಳಿಂದ ವೃದ್ಧಾಪ್ಯ ವೇತನ ಹಾಗೂ ಇತರ ಭದ್ರತಾ ಯೋಜನೆಗಳಿಗೆ ಹಣ ಬಿಡುಗಡೆ ಮಾಡುವಲ್ಲಿ ವಿಫಲವಾಗಿದೆ. ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನಿರ್ಲಕ್ಷದಿಂದ ಸುಮಾರು 10ಲಕ್ಷ ಫಲಾನುಭವಿಗಳಿಗೆ ತೊಂದರೆ ಆಗಿದೆ ಎಂದು ಅವರು ದೂರಿದರು.

ಸಹಕಾರಿ ಕ್ಷೇತ್ರಗಳಲ್ಲಿ ಶೇ 10ರ ಬಡ್ಡಿ ದರದಲ್ಲಿ ನೀಡಿದ ಸಾಲದ ಹಣದ ಬಾಕಿ ಮೊತ್ತ ್ಙ 3,846 ಕೋಟಿ ಪಾವತಿಸಿಲ್ಲ. ಇದರಿಂದ 17ಲಕ್ಷ ರೈತರಿಗೆ ಸಮಸ್ಯೆಯಾಗಿದೆ. ಆದ್ದರಿಂದ, ಸರ್ಕಾರಕ್ಕೆ ತನ್ನ ತಪ್ಪನ್ನು ಮನವರಿಕೆ ಮಾಡಿಕೊಡಲು ಪ್ರತಿಭಟನೆ ನಡೆಸಲಾಗುವುದು ಎಂದರು.

ಈಶ್ವರಪ್ಪ ಆತ್ಮಹತ್ಯೆ ಬೇಡ
ಯಡಿಯೂರಪ್ಪ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಾಗ ಇಂಥಹ ಸ್ಥಿತಿ ನನಗೆ ಬಂದಿದ್ದರೆ ನೇಣು ಹಾಕಿಕೊಳ್ಳುತ್ತಿದೆ ಎಂದು ಈಶ್ವರಪ್ಪ ಹೇಳಿದ್ದರು. ಈಗ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಅವರಂತೆ ನಾವು ಮಾತನಾಡೊಲ್ಲ ಈಶ್ವರಪ್ಪ ಅವರೇ ನೀವು ನೇಣು ಹಾಕಿಕೊಳ್ಳುವುದು ಬೇಡ ಎಂಬುದು ನಮ್ಮ ಅಪೇಕ್ಷೆ ಎಂದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ರುದ್ರೇಗೌಡ, ಜ್ಯೋತಿ ಪ್ರಕಾಶ್, ಬಳ್ಳೆಕೆರೆ ಸಂತೋಷ್, ಹೊನ್ನಪ್ಪ, ಐಡಿಯಲ್ ಗೋಪಿ, ರಾಜೇಶ್ ಕಾಮತ್, ಶೇಖರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.