ADVERTISEMENT

ಇನ್ನಿಬ್ಬರು ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್

ಕುವೆಂಪು ವಿಶ್ವವಿದ್ಯಾಲಯ ಪರೀಕ್ಷಾ ಅಕ್ರಮ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 8:08 IST
Last Updated 12 ಡಿಸೆಂಬರ್ 2012, 8:08 IST

ಭದ್ರಾವತಿ: ಕುವೆಂಪು ವಿವಿ ಪರೀಕ್ಷಾಂಗ ವಿಭಾಗದಲ್ಲಿ ನಡೆದಿರುವ ಅಕ್ರಮಗಳ ಕುರಿತಂತೆ ಪೊಲೀಸರು ಎರಡು ಪ್ರಕರಣದಲ್ಲಿ ದೋಷಾರೋಪಣೆ ಸಲ್ಲಿಕೆ ಮಾಡಿದ ನಂತರ, ವಿವಿ ಆಡಳಿತ ಅಮಾನತಾದ ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ನೀಡಿತ್ತು.

ಹಾಲೇಶಪ್ಪ ಪ್ರಕರಣದ ಆರೋಪಿ ಪಟ್ಟಿಯಲ್ಲಿ ಇರುವ ಇಬ್ಬರು ಸಿಬ್ಬಂದಿ ವಿರುದ್ಧ ತನಿಖೆ ಪ್ರಗತಿಯಲ್ಲಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ನಿವೇದನೆ ಸಲ್ಲಿಸಿದ ಬೆನ್ನಲ್ಲೇ ಅವರಿಬ್ಬರಿಗೂ ಸಹ ಕಾರಣ ಕೇಳಿ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣದ 4ನೇ ಆರೋಪಿ ಸ್ಥಾನದಲ್ಲಿರುವ ಅಸಿಸ್ಟೆಂಟ್ ರಿಜಿಸ್ಟ್ರಾರ್ ಎ.ಆರ್. ಬಸವರಾಜಪ್ಪ, ಸೀನಿಯರ್ ಅಸಿಸ್ಟೆಂಟ್ ರಾಜೇಶ್ ಅವರಿಗೂ ಸಹ ನೋಟಿಸ್ ನೀಡಲಾಗಿದೆ. ಅದಕ್ಕೆ ಅವರಿಂದ ಸಮಜಾಯಿಷಿ ಬಂದಿದೆ ಎಂದು ವಿವಿ ಮೂಲ ಹೇಳಿದೆ.

ಅಮಾನತು ವಾಪಸ್‌ಗೆ ಒತ್ತಾಯ: ಎರಡು ಪ್ರಕರಣದಲ್ಲಿ ಆರೋಪಿಗಳಾಗಿರುವ 8 ಮಂದಿ ಸಿಬ್ಬಂದಿ ತಮ್ಮ ಮೇಲಿನ ಅಮಾನತು ಆದೇಶ ಹಿಂದಕ್ಕೆ ಪಡೆಯುವಂತೆ ಮನವಿ ಸಲ್ಲಿಸಿದ್ದಾರೆ.ಇದಕ್ಕೆ ಪೂರಕವಾಗಿ ವಿವಿ ಆಡಳಿತ ಸಮಜಾಯಿಷಿ ನೋಟಿಸ್ ನೀಡಿದ್ದು, ಉತ್ತರವನ್ನು ಸಹ ಪಡೆದಿದೆ. ಅವರನ್ನು ಪುನಃ ನೇಮಕ ಮಾಡಿಕೊಳ್ಳುವ ನಿಟ್ಟಿನಲ್ಲಿ ನಡೆಯುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಇದರ ನಡುವೆ ತನಿಖೆ ಎದುರಿಸುತ್ತಿರುವ ಇಬ್ಬರು ಸಿಬ್ಬಂದಿ ವಿರುದ್ಧ ಕಾರಣ ಕೇಳಿ ನೋಟಿಸ್ ಹೊರತಾಗಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬ ಅಪಸ್ವರ ಸಹ ಅಮಾನತುಗೊಂಡ ಸಿಬ್ಬಂದಿ ನಡುವೆ ಚರ್ಚೆಗೆ ಕಾರಣವಾಗಿದೆ.   
ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರಾಗಿ ಬಿಡುಗಡೆ ಹೊಂದಿದ ಕೆಲವು ಕಾಲೇಜು ಸಿಬ್ಬಂದಿ ಅಮಾನತು ಆದೇಶ ಹಿಂದಕ್ಕೆ ಪಡೆಯಲಾಗಿದೆ. ಆದರೆ, ವಿವಿ ಸಿಬ್ಬಂದಿ ವಿಷಯದಲ್ಲಿ  ಅನುಸರಿಸಿರುವ ವಿಳಂಬ ಧೋರಣೆ ಸಿಬ್ಬಂದಿ ಅಸಮಾಧಾನ ಹೆಚ್ಚು ಮಾಡಿದೆ.

16ಕ್ಕೆ ಕವಿಗೋಷ್ಠಿ: ಇಲ್ಲಿನ ಕನ್ನಡ ಸಾಹಿತ್ಯ ಪರಿಷತ್ ಯುವ ಸಾಹಿತ್ಯ ವೇದಿಕೆಯಿಂದ ಡಿ. 16ರಂದು ಬೆಳಿಗ್ಗೆ 10.30ಕ್ಕೆ ಕವಿಗೋಷ್ಠಿ ಏರ್ಪಡಿಸಲಾಗಿದೆ.ನ್ಯೂಟೌನ್ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಕವಿಗೋಷ್ಠಿ ನಡೆಯಲಿದೆ. ಆಸಕ್ತಿ ಕವಿಗಳು ಯಾವುದೇ ವಿಷಯದ ಮೇಲಿನ ಕವಿತೆಗಳನ್ನು ವಾಚಿಸಲು ಅವಕಾಶವಿದೆ.

ಭಾಗವಹಿಸಲು ಇಚ್ಛಿಸುವ ವ್ಯಕ್ತಿಗಳು ಡಿ. 15ರ ಒಳಗೆ  2 ಸ್ವರಚಿತ ಕವಿತೆಗಳನ್ನು ಅಧ್ಯಕ್ಷರು, ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಟ್ರೈನೀಸ್ ಬ್ಲಾಕ್-2, ನ್ಯೂಟೌನ್, ಭದ್ರಾವತಿ -ಇಲ್ಲಿಗೆ ತಲುಪುವಂತೆ ಕಳುಹಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.