ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾ ಲಯ ಈ ಬಾರಿ ಯಾವ ಗಣ್ಯರಿಗೂ ಗೌರವ ಡಾಕ್ಟರೇಟ್ ನೀಡುತ್ತಿಲ್ಲ! ಇದುವರೆಗೂ ಘಟಿಕೋತ್ಸವದಲ್ಲಿ ನೀಡುತ್ತ ಬಂದಿದ್ದ ಈ ಸಂಪ್ರದಾಯಕ್ಕೆ ಈ ವರ್ಷ ಬ್ರೇಕ್ ಬಿದ್ದಿದೆ.ಬೆಂಗಳೂರು ಹಾಗೂ ಗುಲ್ಬರ್ಗ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚೆಗೆ ಗೌರವ ಡಾಕ್ಟರೇಟ್ ಕೊಡುವ ವಿಚಾರ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಕುವೆಂಪು ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವ ಶಂಕರಘಟ್ಟದ ವಿಶ್ವವಿದ್ಯಾಲಯದ ಆವರಣ ಜ್ಞಾನಸಹ್ಯಾದ್ರಿಯಲ್ಲಿ ಮಾರ್ಚ್ 9ರಂದು ನಡೆಯಲಿದೆ. ಅಂದೇ ಪ್ರದಾನವಾಗಬೇಕಿದ್ದ ಗೌರವ ಡಾಕ್ಟರೇಟ್ ಪದವಿಗೆ ಇದುವರೆಗೂ ಯಾರ ಹೆಸರನ್ನೂ ವಿಶ್ವವಿದ್ಯಾಲಯ ಆಯ್ಕೆ ಮಾಡಿಲ್ಲ.
ಗೌರವ ಡಾಕ್ಟರೇಟ್‌ಗೆ ಬರುವ ಹೆಸರುಗಳನ್ನು ಅಂತಿಮಗೊಳಿಸಲು ಆಯಾ ವಿಶ್ವವಿದ್ಯಾಲಯಗಳು ತನ್ನ ಸಿಂಡಿಕೇಟ್ ಸದಸ್ಯರ ಉಪ ಸಮಿತಿ ರಚಿಸಬೇಕು. ಆ ಪ್ರಕಾರ ಇದೇ ತಿಂಗಳು ನಡೆಯಬೇಕಾದ ಕುವೆಂಪು ವಿಶ್ವವಿದ್ಯಾಲಯದ ಘಟಿಕೋತ್ಸವದ ಗೌರವ ಡಾಕ್ಟರೇಟ್‌ಗೆ ಹೆಸರುಗಳನ್ನು ಅಂತಿಮಗೊಳಿಸಲು ಡಿಸೆಂಬರ್‌ನಲ್ಲೇ ಉಪ ಸಮಿತಿ ರಚಿಸಬೇಕಾಗಿತ್ತು. ಆದರೆ, ಈ ಬಾರಿ ಗೌರವ ಡಾಕ್ಟರೇಟ್ ನೀಡದಿರಲು ನಿರ್ಧರಿಸಿದ್ದರಿಂದ ಕುವೆಂಪು ವಿಶ್ವವಿದ್ಯಾಲಯ ಉಪ ಸಮಿತಿ ರಚಿಸುವ ತಲೆಬಿಸಿ ಮಾಡಿಕೊಂಡಿಲ್ಲ ಎಂದು ವಿಶ್ವವಿದ್ಯಾಲಯ ಮೂಲಗಳು ತಿಳಿಸಿವೆ.
ಕಾರಣಗಳೇನು?
ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಮಠಾಧೀಶರು ರಾಜಕಾರಣಿಗಳ ಮೂಲಕ ಪ್ರಭಾವ ಬೀರುವ, ರಾಜಕಾರಣಿಗಳು ಮಠಾಧೀಶರಿಗೆ ಕೊಡಿಸುವ ಪ್ರಯತ್ನಗಳು ಈಗಾಗಲೇ ಚಾಲನೆ ಪಡೆದುಕೊಂಡಿದ್ದವು. ಗೌರವ ಡಾಕ್ಟರೇಟ್‌ಗಾಗಿ ಮಠಾಧೀಶರು, ರಾಜಕಾರಣಿಗಳಿಂದ ಬಂದ ಒತ್ತಡದಿಂದ ತಪ್ಪಿಸಿಕೊಳ್ಳಲು ವಿಶ್ವವಿದ್ಯಾಲಯ ಇಂತಹ ನಿರ್ಧಾರಕ್ಕೆ ಬಂದಿದೆ ಎಂಬ ಮಾತು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರ ವಲಯದಲ್ಲಿದೆ.
‘ಮುಖ್ಯಮಂತ್ರಿಗಳ ಜಿಲ್ಲೆ; ಅದರಲ್ಲೂ ಆಡಳಿತ ಪಕ್ಷದ ಶಕ್ತಿಕೇಂದ್ರವಾದ ಶಿವಮೊಗ್ಗ ವ್ಯಾಪ್ತಿಯ ಕುವೆಂಪು ವಿಶ್ವವಿದ್ಯಾಲಯಕ್ಕೆ ಎಲ್ಲ ವಲಯಗಳಿಂದ ಒತ್ತಡ ಬರುವುದು ಸಹಜ. ಈ ಎಲ್ಲಾ ಮುಜುಗರಗಳಿಂದ ಪಾರಾಗಲು ವಿಶ್ವವಿದ್ಯಾಲಯ ಈ ದಾರಿ ಕಂಡುಕೊಂಡಿದೆ’ ಎಂದು ಹೆಸರು ಹೇಳಲು ಇಚ್ಚಿಸದ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರೊಬ್ಬರು ಒಳಗಿನ ಗುಟ್ಟು ರಟ್ಟು ಮಾಡುತ್ತಾರೆ.
‘ಕುಲಪತಿ ಅವರನ್ನು ಈ ಬಗ್ಗೆ ವಿಚಾರಿಸಿದಾಗ ರಾಜ್ಯಪಾಲರ ಅಣತಿ ಮೇರೆಗೆ ವಿಶ್ವವಿದ್ಯಾಲಯ ಈ ನಿರ್ಧಾರಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಸದ್ಯ ಸಿಂಡಿಕೇಟ್ ಸಭೆ ಕರೆದಿಲ್ಲ. ಹಾಗಾಗಿ, ಈ ಬಗ್ಗೆ ವಿಸ್ತಾರವಾದ ಚರ್ಚೆ ನಡೆದಿಲ್ಲ’ ಎಂದು ಸಿಂಡಿಕೇಟ್ ಸದಸ್ಯ ಧರ್ಮಪ್ರಸಾದ್ ತಿಳಿಸಿದ್ದಾರೆ.ಪ್ರತಿ ವರ್ಷವೂ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ನೀಡಬೇಕೆಂಬ ನಿಯಮವಿಲ್ಲ. ಈ ವರ್ಷ ಕೆಲವು ‘ಕಾರಣ’ಗಳಿಗಾಗಿ ತಡೆ ಹಿಡಿಯಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್.ಎ. ಬಾರಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.