ADVERTISEMENT

ಈ ಶ್ರಮಿಕರಿಗೆ ಮಹಿಳಾ ದಿನಾಚರಣೆ ಅರಿವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2012, 6:25 IST
Last Updated 9 ಮಾರ್ಚ್ 2012, 6:25 IST

ಹೊಸನಗರ: ಕೆಸರು ಮಣ್ಣಿನಲ್ಲಿ ಸಸಿ ನಾಟಿ ಮಾಡುತ್ತಿದ್ದ ಕೃಷಿ ಕೂಲಿ ಕಾರ್ಮಿಕರಿಗೆ, ಸುಡು ಬಿಸಿಲಿನಲ್ಲಿ ಕಚ್ಚೆ ಸೀರೆ ಉಟ್ಟು ಡಾಂಬರು ಸುರಿಯುತ್ತಿದ್ದ ರಾಯಚೂರಿನ ಮಹಿಳೆಗೆ, ಕಡಿದ ಅಕೇಶಿಯಾ ಮರಗಳನ್ನು ರಾಶಿ ಹಾಕುತ್ತಿದ್ದ ಆಂಧ್ರವಾಡು ಮಹಿಳೆಯರೂ ಸೇರಿದಂತೆ ಕೂಲಿ ಕಾರ್ಮಿಕರ ವರ್ಗದವರಿಗೆ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಅರಿವೇ ಇಲ್ಲ!

- ಶತಮಾನ(1911) ಮೀರಿದ ವಿಶ್ವ ಮಹಿಳಾ ದಿನಾಚರಣೆಯ ಕುರಿತು ವಿವಿಧ ವರ್ಗದ ಮಹಿಳೆಯರಿಗೆಷ್ಟು ಗೊತ್ತು ಎಂಬ ಪ್ರಶ್ನೆಯ ಜಾಡು ಹಿಡಿದು ಹೊರಟ `ಪ್ರಜಾವಾಣಿ~ಗೆ ದೊರತೆ ನಗ್ನ ಸತ್ಯ.

ಪಟ್ಟಣದ ಹೊರವಲಯದ ಯಡಚಿಟ್ಟೆಯ ಗದ್ದೆಯೊಂದರಲ್ಲಿ ಬತ್ತದ ಸಸಿ ನಾಟಿ ಮಾಡುತ್ತಿದ್ದ ಮಹಿಳಾ ಕೃಷಿ ಕೂಲಿ ಕಾರ್ಮಿಕರು ತಮ್ಮ ಕೆಸರು ಕೈ ಮೇಲೆತ್ತಿ `ವಿಶ್ವ ಮಹಿಳಾ ದಿನಾಚರಣೆ~ ಹಾಗಂದ್ರೇನು? ಎಂಬ ಪ್ರತ್ಯುತ್ತರ ದೊರೆತಿತ್ತು.

ಸುಡು ಬಿಸಿಲಿನಲ್ಲಿ ಡಾಂಬರು ಡಬ್ಬಿ ಹಿಡಿದು ರಸ್ತೆಯಂಚಿನಲ್ಲಿ ಹಾಕುತ್ತಿದ್ದ ಕಚ್ಚೆ ಸೀರೆಯುಟ್ಟ ರಾಯಚೂರು ಮಂದಿಗೆ, ಗಂಡಸರು ಕಡಿದ ಅಕೇಶಿಯಾ ಮರಗಳನ್ನು ತಲೆ ಮೇಲೆ ಹೊತ್ತು ರಾಶಿ ಹಾಕುತ್ತಿದ್ದ ಆಂಧ್ರದ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಗೊಡವೆಯೇ ಗೊತ್ತಿಲ್ಲ ಎನ್ನುವ ಉತ್ತರ ಸಿಕ್ಕಿತು.

ಶುಂಠಿ ಗದ್ದೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಹೊಸನಗರ ತಾ.ಪಂ. ಮಾಜಿ ಉಪಾಧ್ಯಕ್ಷೆ ರೇಣುಕಮ್ಮ, ವೈದ್ಯರ ಮನೆಗೆಲಸ ಮಾಡುತ್ತಿರುವ ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಭದ್ರಮ್ಮ ಹಾಗೂ ಶಾಲೆಯೊಂದರಲ್ಲಿ ಆಯಾ ಆಗಿ ಕೆಲಸ ನಿರ್ವಹಿಸುತ್ತಿರುವ ಶಿವಮೊಗ್ಗ ಜಿಲ್ಲಾ ಪರಿಷತ್ ಕಸಬಾ ಕ್ಷೇತ್ರದ ಸದಸ್ಯೆ ಎ.ಕೆ. ರಾಧಮ್ಮ ಸೇರಿದಂತೆ ಶ್ರಮಿಕ ವರ್ಗದವರಿಗೆ ಮಹಿಳಾ ದಿನಾಚರಣೆಯ ಸಾಧಕ, ಬಾಧಕಗಳ ಅರಿವಿಲ್ಲವಂತೆ!

ವಿಶ್ವ ಮಹಿಳಾ ದಿನಾಚರಣೆ ಕೇವಲ ಸರ್ಕಾರಿ ಕಾರ್ಯಕ್ರಮ ಆಗಬಾರದು. ಎಲ್ಲಾ ದಲಿತ, ಶ್ರಮಿಕ  ವರ್ಗದ ಮಹಿಳೆಯರಿಗೂ ಅದು ತಲುಪಬೇಕು. ಅವರ ಸಮಸ್ಯೆಗಳನ್ನು ಆಲಿಸುವ ಕಿವಿಗಳು ಬೇಕು ಮತ್ತು ಅವರ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸಬೇಕು ಎಂಬುದು ಮಹಿಳಾ ಪರ ಹಿತಚಿಂತಕಿ ನೋರಾ ಮೆಟಿಲ್ಡಾ ಅನಿಸಿಕೆ.

ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕೇವಲ ಒಂದು ದಿನ, ವಾರಕ್ಕೆ ಸೀಮಿತ ಬೇಡ. ಗ್ರಾಮೀಣ ಸ್ತ್ರೀಶಕ್ತಿ ಸಂಘ, ಸ್ವ ಸಹಾಯ ಸಂಘಗಳನ್ನು ಬಲ ಪಡಿಸುವ ಮೂಲಕ  ಮಹಿಳೆಯರು ಸ್ವಾಭಿಮಾನದಿಂದ ಸ್ವಾವಲಂಬಿಯಾಗಿ ಬದುಕುವಂತೆ ಆಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಪ್ರಾಮಾಣಿಕ ಪ್ರಯತ್ನ ಬೇಕು ಎನ್ನುತ್ತಾರೆ ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.