ADVERTISEMENT

ಕಡಿಮೆ ವೆಚ್ಚದಲ್ಲಿ ಸಮಸ್ಯೆಗೆ ಪರಿಹಾರ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 10:25 IST
Last Updated 11 ಫೆಬ್ರುವರಿ 2012, 10:25 IST

ಸೊರಬ: ಬ್ಯಾಂಕುಗಳು ನೀಡುವ ಹಲವು ನಿರ್ದಿಷ್ಟ ಸೇವೆಗಳಿಗೆ ಸಂಬಂಧಪಟ್ಟ ಗ್ರಾಹಕರ ದೂರುಗಳನ್ನು ಬ್ಯಾಂಕಿಂಗ್ ಲೋಕಪಾಲ ಯೋಜನೆ ಪರಿಹರಿಸುತ್ತದೆ. ಶೀಘ್ರ ಹಾಗೂ ಕಡಿಮೆ ವೆಚ್ಚದಲ್ಲಿ ಕುಂದುಕೊರತೆ ಬಗೆಹರಿಸುವುದೇ ಯೋಜನೆಯ ಉದ್ದೇಶ ಎಂದು ಬ್ಯಾಂಕಿಂಗ್ ಲೋಕಪಾಲ ಎಂ.ಪಳನಿಸ್ವಾಮಿ ನುಡಿದರು.

ಕೆನರಾ ಬ್ಯಾಂಕ್ ವೃತ್ತ ಕಚೇರಿ ಹಾಗೂ ಕರ್ನಾಟಕ ಬ್ಯಾಂಕಿಂಗ್ ಲೋಕಪಾಲ ಬೆಂಗಳೂರು ಇವರ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈಚೆಗೆ ಮಾತನಾಡಿದರು.

 ಅರ್ಜಿ ಸಲ್ಲಿಸಿ ಒಂದು ತಿಂಗಳೊಳಗಾಗಿ ಅರ್ಜಿಗೆ ಸೂಕ್ತ ಉತ್ತರ ದೊರಕದಿದ್ದಾಗ ಲೋಕಪಾಲಕ್ಕೆ ಅರ್ಜಿ ಸಲ್ಲಿಸಬಹುದು. ಇ-ಮೇಲ್ ಮುಖಾಂತರವೂ ದೂರು ದಾಖಲಿಸಬಹುದು ಎಂದರು.

ಗ್ರಾಹಕರೊಂದಿಗೆ ಸಿಬ್ಬಂದಿ ಉತ್ತಮವಾಗಿ ಸ್ಪಂದಿಸುವುದು ಅಗತ್ಯ ಎಂದು ಸಲಹೆ ನೀಡಿದರು.
ಆರ್‌ಬಿಐ ಸಹಾಯಕ ವ್ಯವಸ್ಥಾಪಕ ಎಸ್.ಶಂಕರ್ ಓಂಬುಡ್ಸಮನ್ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು.
 ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಉಪ ಮಹಾಪ್ರಬಂಧಕ ಸುನೀಲ್ ಎಸ್. ಕುರ್ತುಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಆರ್‌ಬಿಐ ಸಹಾಯಕ ಜನರಲ್ ಮ್ಯಾನೇಜರ್ ಜೆ.ಎನ್.ಎಸ್. ಶರ್ಮಾ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕ ಎಲ್.ಸುಬ್ಬರಾವ್ ಉಪಸ್ಥಿತರಿದ್ದರು.

ಗ್ರಾಹಕರು, ವಿವಿಧ ಬ್ಯಾಂಕ್ ವ್ಯವಸ್ಥಾಪಕರು ಹಾಜರಿದ್ದರು. ರೇಖಾ ಪ್ರಾರ್ಥಿಸಿದರು. ಜಿಲ್ಲಾ ಮಾರ್ಗದರ್ಶಿ ಹಾಗೂ ವ್ಯವಸ್ಥಾಪಕ ಎಲ್. ಸುಬ್ಬರಾವ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.