ADVERTISEMENT

ಕಲೆ, ಸಾಹಿತ್ಯದ ಅರಿವಿಲ್ಲದ ನೇತಾರರು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 10:40 IST
Last Updated 6 ಫೆಬ್ರುವರಿ 2012, 10:40 IST

ಶಿವಮೊಗ್ಗ: ಕಲೆ, ಸಾಹಿತ್ಯ, ಸಂಸ್ಕೃತಿ ತಮ್ಮ ರಾಜಕೀಯ ಚಟುವಟಿಕೆಗಳಿಗಿಂತ ಮುಖ್ಯ ಅಥವಾ ಅದಕ್ಕಿಂತ ಹೆಚ್ಚು ಎಂಬ ಸಾಮಾನ್ಯ ಅರಿವು ನಮ್ಮ ರಾಜಕಾರಣಿಗಳಿಗೆ ಇಲ್ಲ ಎಂದು 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಸಿ.ಪಿ. ಕೃಷ್ಣಕುಮಾರ್ ವಿಷಾದಿಸಿದರು.

ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಭಾನುವಾರ ಕನ್ನಡ ಪರಿಷತ್ ಜಿಲ್ಲಾ ಶಾಖೆ, ಕನ್ನಡ ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ  ಸಾಹಿತ್ಯ ಹುಣ್ಣಿಮೆಯ 80ನೇ  `ಮನೆ-ಮನ ಸಾಹಿತ್ಯ~ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಹಿಂದಿನ ರಾಜಕಾರಣಿಗಳಲ್ಲಿ ಬಹುತೇಕರು ಸಾಹಿತ್ಯಾಸಕ್ತರಾಗಿದ್ದರು. ಕೆ. ಹನುಮಂತಯ್ಯ ಹಾಗೂ ಎಸ್. ನಿಜಲಿಂಗಪ್ಪ ಕಲೆ, ಸಾಹಿತ್ಯ, ಸಂಗೀತದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಆದರೆ, ಇಂದಿನ ರಾಜಕಾರಣಿಗಳಿಗೆ ಅದಾವುದರ ಪರಿವೆ, ಗೊಡವೆಯೂ ಬೇಕಾಗಿಲ್ಲ ಎಂದು ವ್ಯಂಗ್ಯವಾಡಿದರು.

ಭಾರತೀಯರದ್ದು ತ್ಯಾಗದ ಸಂಸ್ಕೃತಿ, ಪಾಶ್ಚಿಮಾತ್ಯರದ್ದು ಭೋಗ ಸಂಸ್ಕೃತಿ. ಆದರೆ, ಇಂದಿನ ದಿನಗಳಲ್ಲಿ ಭಾರತೀಯರು ನಮ್ಮ ಸಂಸ್ಕೃತಿ ಕಡೆಗಣಿಸಿ ಭೋಗ ಸಂಸ್ಕೃತಿಯತ್ತ ವಾಲುತ್ತಿರುವುದು ದುರಂತವೇ ಸರಿ ಎಂದು ವಿಷಾದಿಸಿದರು.

ಹಣಕ್ಕಿಂತ ಹಣತೆ ಮುಖ್ಯ. ದೀಪ ಸಂಸ್ಕೃತಿ ನಮ್ಮದು. ಆದರೆ, ಬೆಳಗಬೇಕಾದ ದೀಪವನ್ನು ಆರಿಸುವ ಮೂಲಕ ಹುಟ್ಟಿದ ಹಬ್ಬ ಆಚರಿಸುವ ಪರಿ ಭಾರತದಲ್ಲಿ ಹೆಚ್ಚುತ್ತಿರುವುದು ನಮ್ಮಗಳ ಮೌಢ್ಯತೆಗೆ ಹಿಡಿದ ಕನ್ನಡಿ ಎಂದ ಅವರು, ದೀಪ ಆರಿಸುವ ಮೂಲಕ ಮನೆ ಹೊರಗಷ್ಟೆ ಅಲ್ಲದೇ, ಮನದೊಳಗೂ ಕತ್ತಲು ತುಂಬಿಕೊಳ್ಳುತ್ತಿದ್ದೇವೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ. ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಜಾನಪದ ವಿದ್ವಾಂಸ ಜಿ.ಎಸ್. ಭಟ್ ಸಿಪಿಕೆ ಕುರಿತ ಅಭಿನಂದನಾ ಭಾಷಣ ಮಾಡಿದರು.

ರಾಷ್ಟ್ರೀಯ ಭಾರತೀಯ ಕುಟುಂಬ ಯೋಜನಾ ಸಂಘದ ಉಪಾಧ್ಯಕ್ಷ ಉಮೇಶ್ ಆರಾಧ್ಯ, ಹಾಸ್ಯ ಕಲಾವಿದ ಮೈಸೂರು ಆನಂದ್, ಲೋಕೋಪಯೋಗಿ ಮುಖ್ಯ ಎಂಜಿನಿಯರ್ ಬಿ.ಟಿ. ಕಾಂತರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್, ನಗರಸಭಾ ಮಾಜಿ ಅಧ್ಯಕ್ಷ ಬಿ.ಎ. ರಮೇಶ್, ಆರ್. ರತ್ನಯ್ಯ, ಡಾ.ರಾಜೇಂದ್ರ ಬುರಡಿಕಟ್ಟಿ, ಡಾ.ಶಾಂತಕುಮಾರ್, ಎ.ಪಿ. ಕುಮಾರ್, ವಿ.ಟಿ ಸ್ವಾಮಿ, ಚಂದ್ರಶೇಖರ್ ಶೇರಿಗಾರ್ ಮತ್ತಿತರರು ಉಪಸ್ಥಿತರಿದ್ದರು. ಶಿವಮೂರ್ತಿ, ಭಾಗ್ಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.