ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಬದುಕು, ಜನಪದ ಸೊಗಡನ್ನು ಬಿಂಬಿಸುವ ಬೀಸುವ ಕಲ್ಲು, ಖಾರದ ಒರಳು, ಅಡಿಕೆ ಕುಟ್ಟುವ ಕಲ್ಲುಗಳು ಕಣ್ಮರೆಯಾಗುತ್ತಿವೆ!ಆಧುನೀಕರಣದ ಭರಾಟೆಯಲ್ಲಿ ನಮ್ಮ ಪೂರ್ವಜರ ಕಾಲದಿಂದ ಬಳಕೆಯಲ್ಲಿದ್ದ ಈ ಸಾಮಗ್ರಿಗಳು ವಸ್ತು ಸಂಗ್ರಹಾಲಯದ ಕಡೆ ಮುಖ ಮಾಡಿವೆ. ಇದನ್ನೇ ನಂಬಿ ವೃತ್ತಿಯಾಗಿ ಸ್ವೀಕರಿಸಿ, ಜೀವನ ನಡೆಸುತ್ತಿದ್ದ ಜನಾಂಗಗಳ ಪಾಡು ಈಗ ಮೂರಾಬಟ್ಟೆ ಆಗಿದೆ.
ಸಾವಿರಾರು ಜನಪದ ಹಾಡುಗಳ ಹುಟ್ಟಿಗೆ ಕಾರಣವಾದ ಈ ಸಾಮಗ್ರಿಗಳು ಅವಸಾನದ ಅಂಚಿನಲ್ಲಿವೆ. ರುಚಿಯಾದ ಅಡುಗೆ, ಸದೃಢ ಆರೋಗ್ಯ, ವಿದ್ಯುತ್ ಸಮಸ್ಯಗೆ ಪರಿಹಾರ ಆಗಿರುವ ಈ ಸಾಮಗ್ರಿಗಳು ಗ್ರಾಮೀಣ ಜನತೆಯಿಂದ ಕೂಡ ದೂರ ಆಗುತ್ತಿರುವುದು ವಿಷಾದದ ಸಂಗತಿ.
ಉತ್ತಮವಾದ ಕಲ್ಲು ಕೆತ್ತನೆಯ ಕೌಶಲ ಹೊಂದಿರುವ ಈ ಕಲ್ಲು ಒಡೆಯುವ ಜನಾಂಗವನ್ನು ಗುರುತಿಸಿ ಗೌರವಿಸುವ ಕೆಲಸವಾಗ ಬೇಕಾಗಿದ್ದು, ಇಂದಿಗೂ ಅದು ಸಾಕಾರವಾಗಿಲ್ಲ. ಅತ್ಯಂತ ಹಿಂದುಳಿದ ಈ ಜನಾಂಗವನ್ನು ಸಮಾಜ ಕೀಳುಮಟ್ಟದಲ್ಲಿಯೇ ನೋಡುತ್ತಿದೆ. ಬಿಸಿಲು, ಚಳಿ, ಮಳೆಯನ್ನು ಲೆಕ್ಕಿಸದೇ ತುತ್ತಿನ ಚೀಲ ತುಂಬಿಸಿಕೊಳ್ಳಲು ಹರಕಲು, ಮುರಕಲು ಗುಡಿಸಲ ಕೆಳಗೆ ವರ್ಷಪೂರ್ತಿ ಕಲ್ಲು ಕುಟ್ಟುತ್ತಾ ಕುಳಿತಿರುತ್ತಾರೆ.
ಬೆಳಗಾವಿ, ಸವದತ್ತಿ, ತಡಸನೂರು, ಬೈಲಹೊಂಗಲ, ಇಂಚಲದಿಂದ ಕರಿಕಲ್ಲು ತಂದು ಶಿರಾಳಕೊಪ್ಪದಲ್ಲಿ ಕೆತ್ತನೆ ಮಾಡಿ ಗೃಹ ಉಪಯೋಗಿ ಸಾಮಗ್ರಿ ಮಾಡುತ್ತಾರೆ. ಹಿಂದೆ ಹಲವಾರು ಕುಟುಂಬಗಳು ಕಲ್ಲು ಕುಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದವು. ಆದರೆ, ಈಗ ಒಂದೇ ಕುಟುಂಬ ಮಾತ್ರ ಈ ಕೆಲಸ ಮಾಡುತ್ತಿದೆ.
ಹಿಂದೆ ಊರೂರು ಅಲೆದು ಜೀವನ ನಡೆಸುತ್ತಿದ್ದ ಇವರು ಇಂದು ಶಿರಾಳಕೊಪ್ಪದ ಆನವಟ್ಟಿ ರಸ್ತೆಯಲ್ಲಿ ನೆಲೆಸಿದ್ದಾರೆ. ಮತದಾರರ ಗುರುತಿನ ಚೀಟಿ, ಪಡಿತರ ಚೀಟಿಯನ್ನು ಸಹ ಪಡೆದಿದ್ದಾರೆ. ಆದರೆ, ಶಿಕ್ಷಣ ಇವರಿಗೆ ನಿಲುಕದ ನಕ್ಷತ್ರ! ಕಾರಣ ಬಡತನದ ಬೇಗೆ.
ಇವರು ಅಲ್ಪ ಲಾಭದಲ್ಲೂ ಕೂಡ ತುಂಬಾ ಸಂತೋಷವಾಗಿ ಕಲ್ಲು ಕುಟ್ಟುವ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಕಲ್ಲುಗಳನ್ನು ರಾಜ್ಯದ ನಾನಾಕಡೆಗಳಿಂದ ಲಾರಿಗಳಲ್ಲಿ ತರುತ್ತಾರೆ. ಬಂಡವಾಳದ ಕೊರತೆ ಅನುಭವಿಸುತ್ತಿರುವ ಇವರು ಶೇ. 5, 6ರಷ್ಟು ಬಡ್ಡಿಯಂತೆ ಹಣ ತಂದು ಕೆಲಸಕ್ಕೆ ತೊಡಗಿಸಿಕೊಳ್ಳುತ್ತಾರೆ. ಬರುವ ಅಲ್ಪ ಲಾಭವೂ ಸಿಗದೇ ಬಡ್ಡಿ ಕಟ್ಟಲು ಹೋಗುತ್ತಿದೆ.
ಸರ್ಕಾರ ಸಾಲ ಸೌಲಭ್ಯಗಳನ್ನು ನೀಡಿದರೆ ನಾವು ಎಲ್ಲರಂತೆ ಬದುಕಬಹುದು. ಕಲ್ಲುಗಳನ್ನು ಸಂಗ್ರಹಿಸಿಡಲು ಸ್ಥಳದ ಕೊರತೆ ಇದ್ದು, ಹೆದ್ದಾರಿ ನಿರ್ಮಾಣವಾದರೆ ಇನ್ನಷ್ಟು ಉಲ್ಬಣವಾಗಬಹುದು ಎಂದು ಕಲ್ಲು ಒಡೆಯುವ ಮಂಜು ತಿಳಿಸಿದರು.
ಶ್ರಮಜೀವಿಗಳಿಗೆ ಕೆಲಸಕ್ಕೇನು ಕೊರತೆಯಿಲ್ಲ. ಆದರೆ, ಅವರು ತಮ್ಮ ಪೂರ್ವಜರ ಕಾಲದಿಂದ ಬಳುವಳಿಯಾಗಿ ಬಂದ ವೃತ್ತಿಯನ್ನು ಗೌರವದಿಂದ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.