ADVERTISEMENT

ಕಾಂಗ್ರೆಸ್‌ನತ್ತ ಜನರ ಒಲವು

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2012, 8:55 IST
Last Updated 13 ಅಕ್ಟೋಬರ್ 2012, 8:55 IST

ಸೊರಬ: ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ ಎಂಬ ಪಕ್ಷದ ಘೋಷಣೆ ತಾಲ್ಲೂಕಿನಾದ್ಯಂತ ಜನಪ್ರಿಯಗೊಂಡು ಬಿಜೆಪಿ ಮತ್ತು ಜೆಡಿಎಸ್ ತೊರೆದು ಹಲವಾರು ಜನ ಕಾಂಗ್ರೆಸ್‌ನತ್ತ ಒಲವು ತೋರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದರು.

ಪಟ್ಟಣದಲ್ಲಿ ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಪ್ರಮುಖರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ನಡಿಗೆ ಹಳ್ಳಿಯ ಕಡೆಗೆ ಎಂಬುದು ಮಾರ್ಪಾಡಾಗಿ ಜನರ ನಡೆ ಕಾಂಗ್ರೆಸ್ ನಡೆ ಎಂಬಂತೆ ಸಮರೋಪಾದಿಯಲ್ಲಿ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಬರಗಾಲಯ ಛಾಯೆ ಇದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಸಮೀಕ್ಷೆ ನಡೆಸಿಲ್ಲ.  ರೈತರಪರ ಕಾಳಜಿ ಇದ್ದಲ್ಲಿ ಕೂಡಲೇ ಸಮೀಕ್ಷೆ ಕೈಗೊಳ್ಳುವ ಮೂಲಕ ತಾಲ್ಲೂಕನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಲು ಒತ್ತಾಯಿಸಿದರು.

ಮಳೆಯ ಅಭಾವದಿಂದ ಶೇ 80 ರಷ್ಟು ಬೆಳೆ ನಾಶವಾಗಿದೆ.  ಕೆರೆ ಕಟ್ಟೆಗಳು ಬತ್ತಿ ಹೋಗಿವೆ.  ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಹಾಹಾಕಾರ ಮುಂದಿನ ದಿನಗಳಲ್ಲಿ ಉಂಟಾಗುವ ಸಾಧ್ಯತೆ ಇದ್ದು, ಕೆರೆಗಳ ನೀರನ್ನು ಪೋಲು ಮಾಡದೆ ತೂಬುಗಳ ಮಟ್ಟಕ್ಕೆ ನೀರಿನ ಸಂರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಎಸ್. ಬಂಗಾರಪ್ಪ ಸಾರ್ವಜನಿಕ ಕ್ಷೇತ್ರಕ್ಕಾಗಿ ಸಾಮಾಜಿಕ ನೆಲೆಗಟ್ಟಿನ ಅಡಿ ಶ್ರಮಿಸಿದವರು.  ರಾಷ್ಟ್ರೀಯ ನಾಯಕರ ಪುತ್ಥಳಿಯನ್ನು ಅನಾವರಣಗೊಳಿಸಲು ಕುಟುಂಬದವರು ಮಾತ್ರವಲ್ಲದೇ ಪ್ರತಿಯೊಬ್ಬರೂ ಹಕ್ಕಿದೆ.  ಹಾಗೂ ಕಾನೂನಿನಲ್ಲೂ ಅವಕಾಶವಿದ್ದು, ಇಂತಹ ಕಾರ್ಯಗಳಿಗೆ ಘರ್ಷಣೆ ನಡೆಸುವುದು ಸಂಸ್ಕೃತಿಯಲ್ಲ ಎಂದು ಟೀಕಿಸಿದರು.

ಬ್ಲಾಕ್ ಅಧ್ಯಕ್ಷ ಕೆ. ಮಂಜುನಾಥ, ಮುಖಂಡರಾದ ತಬಲಿ ಬಂಗಾರಪ್ಪ, ಕೆ. ಅಜ್ಜಪ್ಪ, ಟಿ.ಆರ್. ಸುರೇಶ, ಬಂದಗಿ ಬಸವರಾಜ ಶೇಟ್, ಎಂ.ಡಿ. ಉಮೇಶ, ಯೂಸೂಫ್ ಸಾಬ್, ನಿಟ್ಟಕ್ಕಿ ಜೀವಣ್ಣ, ಕೆ.ಜಿ. ಲೋಲಾಕ್ಷಮ್ಮ, ಮಧುಕೇಶ್ವರ ಹಾಜರಿದ್ದರು.ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಶಾರದಮ್ಮ, ಮಂಚಿ ಹನುಮಂತಪ್ಪ, ಬಲರಾಮಪ್ಪ ಸೇರಿದಂತೆ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.