ADVERTISEMENT

ಕಾಡುಪ್ರಾಣಿಗಳಿಂದ ಬೆಳೆ ಸಂರಕ್ಷಿಸಿಕೊಳ್ಳಲು ರೈತರ ಪರದಾಟ

ಶಿವಾನಂದ ಕರ್ಕಿ
Published 22 ಅಕ್ಟೋಬರ್ 2017, 7:24 IST
Last Updated 22 ಅಕ್ಟೋಬರ್ 2017, 7:24 IST
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಅಗಸರಕೋಣೆ ಗ್ರಾಮದ ರೈತ ಕೇಶವಮೂರ್ತಿ ಅವರ ಗದ್ದೆಗೆ ಕಾಡಾನೆ ನುಗ್ಗಿದ್ದರಿಂದಾಗಿ ಭತ್ತದ ಬೆಳೆ ನಷ್ಟವಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಹೋಬಳಿ ಅಗಸರಕೋಣೆ ಗ್ರಾಮದ ರೈತ ಕೇಶವಮೂರ್ತಿ ಅವರ ಗದ್ದೆಗೆ ಕಾಡಾನೆ ನುಗ್ಗಿದ್ದರಿಂದಾಗಿ ಭತ್ತದ ಬೆಳೆ ನಷ್ಟವಾಗಿದೆ.   

ತೀರ್ಥಹಳ್ಳಿ: ಕಾಡುಪ್ರಾಣಿಗಳ ಹಾವಳಿಯಿಂದ ಬೆಳೆಯನ್ನು ಉಳಿಸಿಕೊಳ್ಳಲು ಆಗುಂಬೆ ಹೋಬಳಿ ರೈತರು ಪ್ರತಿ ವರ್ಷ ಹೆಣಗಾಡುವಂತಾಗಿದೆ. ಈಚೆಗೆ ಅಗಸರಕೋಣೆ ಗ್ರಾಮದಲ್ಲಿ ಕಾಡಾನೆಗಳು ಭತ್ತದ ಗದ್ದೆ ಮೇಲೆ ಓಡಾಡಿ ಬೆಳೆಯನ್ನು ಹಾಳುಮಾಡಿವೆ.

ಹೋಬಳಿಯ ರೈತರು ಒಂಟಿ ಕಾಡಾನೆ, ಕಾಡುಕೋಣ, ಕಡವೆ, ಜಿಂಕೆ, ಕಾಡು ಹಂದಿ ಹಾವಳಿಯಿಂದ ಬೆಳೆಯನ್ನು ಉಳಿಸಿಕೊಳ್ಳಲು  ಕಸರತ್ತು ನಡೆಸುತ್ತಿದ್ದಾರೆ. ಒಂದು ಬಾರಿ ಕಾಡುಪ್ರಾಣಿಗಳು ದಾಳಿಯಿಟ್ಟರೆ ಕನಿಷ್ಟ ಹತ್ತಾರು ಎಕರೆ ಪ್ರದೇಶದಲ್ಲಿ ನಾಟಿ ಮಾಡಿದ ಬೆಳೆಗಳು ನಾಶವಾಗುತ್ತವೆ. ಕಾಡುಕೋಣಗಳ ಹಿಂಡು ಜಮೀನಿಗೆ ನುಗ್ಗಿದರೆ ತಿಂದು ಹಾಳು ಮಾಡುವುದರ ಜೊತೆಗೆ ತುಳಿದು ಹಾಳು ಮಾಡುವುದೇ ಹೆಚ್ಚು. ಆನೆ, ಕಾಡುಕೋಣ, ಕಾಡುಹಂದಿಗಳಂಥಹ ದೊಡ್ಡ ದೊಡ್ಡ ಪ್ರಾಣಿಗಳಿಗೆ ಬೇಲಿ ನಿರ್ಮಿಸಿ ತಡೆಗಟ್ಟುವುದು ಕಷ್ಟಸಾಧ್ಯ. ಈ ಸಮಸ್ಯೆ ರೈತರನ್ನು ಚಿಂತೆಗೀಡುಮಾಡಿದೆ.

ಅರಣ್ಯ ಇಲಾಖೆ ನೀಡುವ ಬೆಳೆ ನಷ್ಟ ಪರಿಹಾರ ತೊಡಗಿಸಿದ ಹಣಕ್ಕೆ ಸರಿಹೋಗುತ್ತಿಲ್ಲ. ಎಷ್ಟೋ ಸಂದರ್ಭದಲ್ಲಿ ನಷ್ಟಕ್ಕೆ ಒಳಗಾದ ರೈತರಿಗೆ ಪರಿಹಾರ ಕೂಡಾ ಸಿಗುತ್ತಿಲ್ಲ. ರಾತ್ರಿ ಹಗಲೆನ್ನದೇ ಏಕಾಏಕಿ ವನ್ಯಪ್ರಾಣಿಗಳು ಜಮೀನಿಗೆ ದಾಳಿ ನಡೆಸುತ್ತಿವೆ. ಈ ಕುರಿತು ಗ್ರಾಮ ಸಭೆಗಳಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸಮರ್ಪಕ ಉತ್ತರ ದೊರಕುತ್ತಿಲ್ಲ. ಅರಣ್ಯ ಇಲಾಖೆ, ರೈತರ ಸಹಭಾಗಿತ್ವದ ಸೋಲಾರ್‌ ವಿದ್ಯುತ್‌ ಬೇಲಿ ನಿರ್ಮಾಣದ ಪ್ರಸ್ತಾವನೆಗೆ ಸರ್ಕಾರ ಸ್ಪಂದಿಸಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ADVERTISEMENT

ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಆಗುಂಬೆ ಹೋಬಳಿಯ ಅಗಸರಕೋಣೆ, ಹೊಸಗದ್ದೆ, ಗಾರ್ಡರಗದ್ದೆ, ಪಡುವಳ್ಳಿ, ಶೀರೂರು, ಮುಳುವಾಡಿ, ಬಾಳೇಹಳ್ಳಿ, ಹನಸ, ಅಚ್ಚೂರು, ಮುಂಡುವಳ್ಳಿ, ಅಣ್ಣುವಳ್ಳಿ, ವಡೇಗದ್ದೆ, ಕುಂದ, ಚಂಗಾರು ಸೇರಿದಂತೆ ಹೋಬಳಿ ವ್ಯಾಪ್ತಿಯ ಬಹುತೇಕ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಿದ್ದು, ಕಡವೆ, ಜಿಂಕೆ, ಕಾಡು ಹಂದಿ, ಕಾಡು ಕೋಣ, ಆನೆಗಳು ಕಾಡಿನ ಸೆರಗಿನಂಚಿನಲ್ಲಿರುವ ಜಮೀನಿನ ಮೇಲೆ ಪದೇ ಪದೇ ದಾಳಿ ಮಾಡಿ ಬೆಳೆಯನ್ನು ಧ್ವಂಸ ಮಾಡುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.