ADVERTISEMENT

ಕೆಂಚನಾಲ: ವೈಭವದ ಮಾರಿಕಾಂಬಾ ಜಾತ್ರೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 6:35 IST
Last Updated 3 ಫೆಬ್ರುವರಿ 2011, 6:35 IST

ರಿಪ್ಪನ್‌ಪೇಟೆ: ಸಮೀಪದ ಕೆಂಚನಾಲದಲ್ಲಿ ಬುಧವಾರ ನಡೆದ ಬೇಸಿಗೆ ಮಾರಿಕಾಂಬಾ ಜಾತ್ರೆಗೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.
 ಜಾತ್ರೆಯ ಅಂಗವಾಗಿ ದೇವಿ ಸನ್ನಿಧಿಯಲ್ಲಿ ಬೆಳಿಗ್ಗೆ 8ರಿಂದ ಪ್ರಾರಂಭವಾದ ನಡೆದ ವಿಶೇಷ ಪೂಜೆಗೆ ಸುತ್ತಮುತ್ತಲಿನ ಗ್ರಾಮಸ್ಥರು, ಜಿಲ್ಲೆ ಹೊರ ಜಿಲ್ಲೆಗಳಿಂದ ಭಕ್ತರು ಸಂಭ್ರಮ ಸಡಗರದಿಂದ ತಂಡೋಪತಂಡವಾಗಿ ಬಂದು ತಮ್ಮ ಹರಕೆ ಕಾಣಿಕೆ, ಹಣ್ಣುಕಾಯಿಯನ್ನು ಆರ್ಪಿಸಿದರು. ಹರಕೆ ಹೊತ್ತ ಭಕ್ತರು ಕೋಳಿಗಳನ್ನು ದೇವಳದ ಆವರಣದಲ್ಲಿ ಹಾರಿ ಬಿಡುವ ದೃಶ್ಯ ಸಾಮಾನ್ಯವಾಗಿತ್ತು.

ವರ್ಷದಲ್ಲಿ ಎರಡು ಬಾರಿ ಜಾತ್ರೆ ನಡೆಯುವುದು ಇಲ್ಲಿನ ವಿಶೇಷ. ಬೇಸಿಗೆಯ ಶೂನ್ಯಮಾಸದಲ್ಲಿ ಮರದ ಉತ್ಸವ ಮೂರ್ತಿಗೆ ಬೆಳ್ಳಿ ಕವಚ ಧರಿಸಿ ಪೂಜೆ ಸಲ್ಲಿಸಿದರು.
ಹರಕೆ ಹೊತ್ತ ಕೆಲವು ಭಕ್ತರು ಬೇವು -ಲಕ್ಕಿಗಿಡದ ತೊಗಟೆಯ ಉಡುಗೆತೊಟ್ಟು ದೇವಸ್ಥಾನಕ್ಕೆ ಪ್ರದಕ್ಷಣೆ ಹಾಕಿ ಕಷ್ಟ-ಕಾರ್ಪಣ್ಯಗಳಿಂದ ದೂರ ಮಾಡುವಂತೆ ಪ್ರಾರ್ಥಿಸಿದರು.

ಶೃಂಗರಿಸಿದ ಮಾರಿಕಾಂಬಾ ದೇವಿಯ ಮೂರ್ತಿಯನ್ನು ನೋಡಿದ ಭಕ್ತರ ಮನದಲ್ಲಿ ಪುಳಕಗೊಂಡು ಹರಕೆ ಸಲ್ಲಿಸಿದ ತೃಪ್ತಿಯೊಂದಿಗೆ ಮರಳುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಕೊನೆಯ ದಿನ  ಜಾತ್ರಾ ಮಹೋತ್ಸವದ ಅಂಗವಾಗಿ ಫೆ. 4ರಂದು ಅಂತರ ಜಿಲ್ಲಾಮಟ್ಟದ ಬಯಲು ಕುಸ್ತಿ ಪಂದ್ಯಾವಳಿ ಹಾಗೂ ರಾತ್ರಿ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಭದ್ರಾವತಿಯ ರಮೇಶ ಮೆಲೋಡಿಸ್ ಇವರಿಂದ ರಸ ಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.  ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಜಾತ್ರಾ ಉಸ್ತುವಾರಿ ವಹಿಸಿದ್ದರು. ಪೊಲೀಸ್ ಇಲಾಖೆಯ ಸಿಬ್ಬಂದಿ  ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

 ಅಭಿನಂದನೆ: ಶಾಂತ ರೀತಿಯಿಂದ ಸಹಕರಿಸಿದ ಎಲ್ಲಾ ಭಕ್ತರಿಗೂ ಹಾಗೂ ರಕ್ಷಣಾ ಮತ್ತು ಕಂದಾಯ ಸಿಬ್ಬಂದಿಗೆ ಸಮಿತಿಯ ಅಧ್ಯಕ್ಷ ಕೆ.ಎಂ.ಬಸವರಾಜ ಹಾಗೂ ಕಾರ್ಯದರ್ಶಿ ಎಚ್. ಪರಮೇಶ ಅಭಿನಂದನೆ ಸಲ್ಲಿಸಿದ್ದಾರೆ.
ಕುಸ್ತಿ ಪಂದ್ಯಾವಳಿ: ಜಾತ್ರಾ ಕೊನೆಯ ದಿನವಾದ ಫೆ. 4ರಂದು ನಡೆಯುವ ಕುಸ್ತಿ ಪಂದ್ಯಾವಳಿಯಲ್ಲೂ ಇದೇ ರೀತಿ ಸಹಕಾರ ನೀಡುವಂತೆ ಅವರು ಪ್ರಕಟಣೆಯಲ್ಲಿ  ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT