ADVERTISEMENT

ಕೆರೆ ಪುನಶ್ಚೇತನ ಯೋಜನೆಯಲ್ಲಿ ಭ್ರಷ್ಟಾಚಾರ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 8:40 IST
Last Updated 15 ಜೂನ್ 2011, 8:40 IST

ತೀರ್ಥಹಳ್ಳಿ: ಕೆರೆಗಳ ಪುನಶ್ಚೇತನ ಯೋಜನೆ ಅಡಿ ತಾಲ್ಲೂಕಿನಲ್ಲಿ ನಿರ್ಮಾಣಗೊಳ್ಳುತ್ತಿರುವ 26 ಕೆರೆಗಳ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದ್ದು, ಇದಕ್ಕೆ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಸಹಾಯಕ ಎಂಜಿನಿಯರ್ ಹಾಗೂ ಸಿಬ್ಬಂದಿ ನೇರ ಹೊಣೆಗಾರರಾಗಿದ್ದಾರೆ ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಕೆಸ್ತೂರ್ ಮಂಜುನಾಥ್ ಆರೋಪಿಸಿದರು.

ತಾಲ್ಲೂಕು ಪಂಚಾಯ್ತಿ ಸಾಮಾನ್ಯ ಸಭೆಯ ವಿಶೇಷ ಚರ್ಚೆಯಲ್ಲಿ ಮಂಗಳವಾರ ಈ ವಿಚಾರ ಪ್ರಸ್ತಾಪಿಸಿದ ಅವರು, ಮೂರು ಕೋಟಿ ಎಪ್ಪತ್ತು ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೆರೆಗಳ ಕಾಮಗಾರಿ ತೀರಾ ಕಳಪೆಯಾಗಿದ್ದು, ಯಾವುದೇ ಕೆರೆಗಳನ್ನು ಕೂಡಾ ನಿಯಮದಂತೆ ಮಾಡಿಲ್ಲ. ಕೆರೆಗಳ ಆಯ್ಕೆ, ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ ಎಸಗಲಾಗಿದ್ದು, ಟೆಂಡರುದಾರರು ಕೆರೆಗಳ ಕಾಮಗಾರಿಯನ್ನು ಒಳಗುತ್ತಿಗೆ ನೀಡಿ  ನಡೆಸುತ್ತಿದ್ದಾರೆ. ಇದನ್ನು ಲೋಕಾಯುಕ್ತ ತನಿಖೆಗೆ ಒಳಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಕೆರೆಗಳ ಕಾಮಗಾರಿ ಕಳಪೆ ಆಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ಗಮನಿಸುತ್ತಿಲ್ಲ. ಸಾರ್ವಜನಿಕ ಹಣ ಲೂಟಿಯಾಗುತ್ತಿದೆ. ಎಲ್ಲಾ ಕೆರೆಗಳ ಕಾಮಗಾರಿಯನ್ನು ತನಿಖೆಗೆ ಒಳಪಡಿಸಬೇಕು. ಈ ಕುರಿತು ತಾಲ್ಲೂಕು ಪಂಚಾಯ್ತಿ ನಿರ್ಣಯ ಕೈಗೊಂಡು ಕೂಡಲೇ ಫ್ಯಾಕ್ಸ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಕೆಸ್ತೂರ್ ಮಂಜುನಾಥ್ ಒತ್ತಾಯಿಸಿದರು.

ತಾಲ್ಲೂಕಿನ ಅಧಿಕಾರಿಗಳು ಮನಬಂದಂತೆ ನಡೆದುಕೊಳ್ಳುತ್ತಿದ್ದಾರೆ. ಅವರನ್ನು ಪ್ರಶ್ನಿಸಲು ಮುಖ್ಯಮಂತ್ರಿಗಳೇ ಬರಬೇಕು. ಸಣ್ಣ ನೀರಾವರಿ ಇಲಾಖೆ ಕಳೆದ 15 ವರ್ಷಗಳ ಹಿಂದೆ ಕೋಟ್ಯಂತರ ವೆಚ್ಚದಲ್ಲಿ ನಿರ್ಮಿಸಿದ ಹೊಸಹಳ್ಳಿ, ಮುಳುಬಾಗಿಲು ಏತ ನೀರಾವರಿಯಿಂದ ಇಂದಿಗೂ ಒಂದು ಹನಿ ನೀರು ಕೂಡ ಬಂದಿಲ್ಲ. ತಾಲ್ಲೂಕಿನಲ್ಲಿ ನಿರ್ಮಿತಿ ಕೇಂದ್ರಗಳು ನಿರ್ಮಿಸಿದ ಕಟ್ಟಡಗಳು ಬೀಳುತ್ತಿವೆ. ಈ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆದರೂ ಸ್ಪಂದಿಸಿಲ್ಲ ಅವರಿಗೆ ಕಣ್ಣು, ಕಿವಿ ಇಲ್ಲದಂತಾಗಿದೆ ಎಂದರು.

ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು. ಒಂದು ವೇಳೆ ವರ್ಗಾವಣೆ ಮಾಡಿದರೆ. ಆ ಸ್ಥಳಕ್ಕೆ ಬೇರೆ ಶಿಕ್ಷಕರನ್ನು ನೇಮಕಗೊಳಿಸಿದ ನಂತರವೇ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ತಾಲ್ಲೂಕು ಕಚೇರಿಯಲ್ಲಿ ಸರಿಯಾಗಿ ಜನರ ಕೆಲಸ ಆಗುತ್ತಿಲ್ಲ. ಮೇಗರವಳ್ಳಿ ನಾಡ ಕಚೇರಿಗೆ ಸಿಬ್ಬಂದಿ ಸರಿಯಾಗಿ ಹೋಗುತ್ತಿಲ್ಲ ಎಂದು ಸದಸ್ಯ ಬಾಳೇಹಳ್ಳಿ ಪ್ರಭಾಕರ್ ಹೇಳಿದರು.

ಆಗುಂಬೆ ಹೋಬಳಿಯಲ್ಲಿ ಕಾಡುಕೋಣ ಹಾಗೂ ಮಂಗಗಳ ಹಾವಳಿಯಿಂದ ರೈತರು ಬೆಳೆಯನ್ನು ಉಳಿಸಿಕೊಳ್ಳುವುದೇ ಕಷ್ಟವಾಗಿದೆ. ಮಂಗಗಳು ಅಡಿಕೆ ಮೆಳೆಯನ್ನು ಹಾಳು ಮಾಡುತ್ತಿವೆ. ಇದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸುತ್ತಿದೆ. ರೈತರಿಗಾದ ನಷ್ಟವನ್ನು ತುಂಬಿಕೊಡಲು ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಟಿ.ಎಲ್. ಸುಂದರೇಶ್ ಒತ್ತಾಯಿಸಿದರು.

ಮಂಗನಕಾಯಿಲೆ ವ್ಯಾಪಿಸಿರುವ ಹಳ್ಳಿಗಳಲ್ಲಿ ಈಗ ಮಂಗನ ಖಾಯಿಲೆ ನಿಯಂತ್ರಣಕ್ಕೆ ಬಂದಿದೆ. ಈಗಾಗಲೇ ಈ ಭಾಗದ ಜನರಿಗೆ ಎರಡು ಸುತ್ತಿನ ಲಸಿಕೆಯನ್ನು ನೀಡಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್ ಸಭೆಗೆ ಮಾಹಿತಿ ನೀಡಿದರು.

ತೆರೆದ ಬಾವಿ ಕಾಮಗಾರಿಗಳಿಗೆ ಗುತ್ತಿಗೆದಾರರು ಮುಂದಾಗುತ್ತಿಲ್ಲ. ತಾಲ್ಲೂಕಿಗೆ ಬಂದ ಹಣ ವಾಪಸ್ ಹೋಗುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಬಾವಿ ತೋಡಲು ಸಾಧ್ಯವೇ? ಗುತ್ತಿಗೆದಾರರು ಹೆಚ್ಚು ಹಣ ಬರುವ ಕೆಲಸವನ್ನು ಮಾತ್ರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸದಸ್ಯ ಕಟ್ಟೆಹಕ್ಕಲು ಕಿರಣ್ ಹೇಳಿದರು.

ಮನೆ ಮೇಲೆ ಮರಬೀಳುತ್ತಿದೆ. ಅದನ್ನು ತೆರವುಗೊಳಿಸಲು ಅನುಮತಿ ನೀಡುವಂತೆ ಕಂದಾಯ ಇಲಾಖೆಗೆ ಅರ್ಜಿ ನೀಡಿ 13 ವರ್ಷ ಕಳೆದರೂ ಅರ್ಜಿಗೆ ಸ್ಪಂದಿಸುತ್ತಿಲ್ಲ ಎಂದು ಸದಸ್ಯ ಹುಂಚದಕಟ್ಟೆ ವೆಂಕಟೇಶ್ ಕಂದಾಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಅಂತ್ಯ ಸಂಸ್ಕಾರದ ಹಣ ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ. ತಕ್ಷಣ ಹಣ ಫಲಾನುಭವಿಗಳಿಗೆ ತಲುಪುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ತಾ.ಪಂ. ಉಪಾಧ್ಯಕ್ಷೆ ಜೀನಾವಿಕ್ಟರ್ ಡಿಸೋಜ ಹೇಳಿದರು.

ಜಿಲ್ಲೆಗೆ ಈಚೆಗೆ ಹೊಸದಾಗಿ ಬಂದಿರುವ ಜಿಲ್ಲಾ ರಕ್ಷಣಾಧಿಕಾರಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾರೆ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಾಲ್ಲೂಕು ಪಂಚಾಯ್ತಿ ಆಡಳಿತಕ್ಕೆ ಒಂದು ಕೋಟಿ ಅನುದಾನ ನೀಡಿದ್ದು, ಅವರನ್ನು ಸಾಮಾನ್ಯ ಸಭೆಯಲ್ಲಿ ಅಭಿನಂದಿಸಲಾಯಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ರಾಮಪ್ಪ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಪುಟ್ಟಸ್ವಾಮಿ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಿ.ಎಸ್. ಯಲ್ಲಪ್ಪ, ಶ್ರುತಿವೆಂಕಟೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.