ADVERTISEMENT

ಕೈ ಬಿಡುವ ಪ್ರದೇಶಗಳ ವರದಿ ಶೀಘ್ರ ನೀಡಿ

ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 10:22 IST
Last Updated 3 ಅಕ್ಟೋಬರ್ 2017, 10:22 IST

ಶಿವಮೊಗ್ಗ: ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಾಗಿರುವ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಯಾವ ಪ್ರದೇಶಗಳನ್ನು ಕೈಬಿಡಬಹುದು ಎಂದು ಗುರುತಿಸಿ ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಡೀಮ್ಡ್ ಅರಣ್ಯ ವರದಿ ಸಿದ್ಧಪಡಿಸುವ ಕುರಿತು ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿರುವ ಪ್ರದೇಶದ ತಾಲ್ಲೂಕುವಾರು ಪಟ್ಟಿ ಅರಣ್ಯ ಇಲಾಖೆಯಲ್ಲಿ ಲಭ್ಯವಿದೆ. ತಾಲ್ಲೂಕು ಮಟ್ಟದಲ್ಲಿ ಶಾಸಕರು, ತಹಶೀಲ್ದಾರ್, ಅರಣ್ಯ ಇಲಾಖೆ ಅಧಿಕಾರಿಗಳು ಈ ವಾರದ ಒಳಗಾಗಿ ಸಭೆ ನಡೆಸಿ ಇದರಲ್ಲಿ ಯಾವ ಪ್ರದೇಶಗಳನ್ನು ಕೈಬಿಡಬಹುದು ಎಂದು ಗುರುತಿಸಿ ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದರು.

ADVERTISEMENT

ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷರು, ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಸರ್ವೇವಾರು ಪರಿಶೀಲನೆ ನಡೆಸಿ, ಜನವಸತಿ ಇರುವಂತಹ ಪ್ರದೇಶಗಳನ್ನು ಕೈಬಿಡುವ ಕುರಿತು ವರದಿ ಸಿದ್ಧಪಡಿಸಬೇಕು ಎಂದರು.

ಅಧಿಕಾರಿಗಳು ವಸ್ತುಸ್ಥಿತಿ ಅರಿತು ಕಾರ್ಯ ನಿರ್ವಹಿಸಬೇಕು. ಸೊಪ್ಪಿನಬೆಟ್ಟ, ಕಾನು ಕುರಿತಾಗಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಕ್ರಮ ಕೈಗೊಳ್ಳಬೇಕು. ಇದೆ ರೀತಿ 94ಸಿ ಅಡಿಯಲ್ಲಿ ಹಕ್ಕುಪತ್ರ ಒದಗಿಸುವ ಕುರಿತಾದ ಸಾವಿರಾರು ಅರ್ಜಿಗಳು ವಿಲೇವಾರಿಗೆ ಬಾಕಿಯಿವೆ. ಇವುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಅವರು ತಿಳಿಸಿದರು.

ಸಭೆಗೆ ಮಾಹಿತಿ ನೀಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಸರ್ಕಾರದ ಮಟ್ಟದಲ್ಲಿ ಡೀಮ್ಡ್ ಅರಣ್ಯ ಪಟ್ಟಿ ಅಂತಿಮಗೊಳಿಸುವ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 1997ರಲ್ಲಿ ಒಟ್ಟು 1.75ಲಕ್ಷ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದು ಗುರುತಿಸಲಾಗಿತ್ತು. ಬಳಿಕ ಅದನ್ನು 1.53ಲಕ್ಷ ಹೆಕ್ಟೇರ್ ಎಂದು ನಿಗದಿಪಡಿಸಲಾಗಿತ್ತು. 2014ರಲ್ಲಿ ಮತ್ತೆ ಸರ್ವೇ ಕಾರ್ಯ ನಡೆಸಿದ ಬಳಿಕ ಜಿಲ್ಲೆಯಲ್ಲಿ 60,380 ಸಾವಿರ ಹೆಕ್ಟೇರ್ ಪ್ರದೇಶವನ್ನು ಡೀಮ್ಡ್ ಅರಣ್ಯ ಎಂದು ಮರು ನಿಗದಿಪಡಿಸಲಾಗಿತ್ತು. ಶೀಘ್ರದಲ್ಲಿ ಜಿಲ್ಲೆಯ ಅಂತಿಮ ಪಟ್ಟಿಯನ್ನು ಸಲ್ಲಸಬೇಕಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್, ಎಡಿಸಿ ಕೆ.ಚನ್ನಬಸಪ್ಪ, ಎ.ಸಿ.ಗಳಾದ ಕೃಷ್ಣಮೂರ್ತಿ, ನಾಗರಾಜ ಸಿಂಗ್ರೇರ್, ತಹಶೀಲ್ದಾರರು, ಅರಣ್ಯ ಇಲಾಖೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.