ADVERTISEMENT

ಗೇರು ಕೃಷಿಗೆ ಮಾರುಹೋಗುತ್ತಿರುವ ರೈತ

ಗುಟ್ಕಾ ನಿಷೇಧ, ಕೃಷಿ ಕಾರ್ಮಿಕರ ಕೊರತೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 13:42 IST
Last Updated 19 ಜೂನ್ 2013, 13:42 IST

ಶಿವಮೊಗ್ಗ: ಗುಟ್ಕಾ ನಿಷೇಧ, ಕೃಷಿ ಕಾರ್ಮಿಕರ ಕೊರತೆ ಇವುಗಳಿಂದ ಬಸವಳಿದ ಮಲೆನಾಡಿನ ರೈತರು, ಈಗ ನಿಧಾನಕ್ಕೆ ಗೇರು ಕೃಷಿ ಅಪ್ಪಿಕೊಳ್ಳಲು ಮುಂದಾಗಿದ್ದಾರೆ. ಕೇವಲ ಗುಡ್ಡಗಾಡು, ಒಣ ಪ್ರದೇಶಗಳಿಗೆ ಮಾತ್ರ ಸೀಮಿತಗೊಂಡಿದ್ದ ಗೇರು ಕೃಷಿ, ಈಗ ಮಲೆನಾಡಿಗೂ ಕಾಲಿಟ್ಟಿದೆ.

ಗುಟ್ಕಾ ನಿಷೇಧದಿಂದ ಅಡಿಕೆ ಬೆಲೆ ಸದ್ಯಕ್ಕೆ ವ್ಯತ್ಯಯಗೊಳ್ಳದಿದ್ದರೂ ಮುಂದಿನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಕುಸಿತ ನಿಶ್ಚಿತ ಎನ್ನುವುದು ಮಾರುಕಟ್ಟೆ ಮೂಲಗಳ ಅಭಿಪ್ರಾಯ. ಜತೆಗೆ ಯಾವುದೇ ಕೃಷಿ ಚಟುವಟಿಕೆಗೂ ಕೃಷಿ ಕಾರ್ಮಿಕರ ಅಗತ್ಯತೆ ಇದ್ದೇ ಇದೆ. ಆದರೆ, ಗೇರು ಕೃಷಿಯಲ್ಲಿ ಖರ್ಚು ಕಡಿಮೆ; ಕಾರ್ಮಿಕರ ಅಗತ್ಯ ತೀರಾ ಕಡಿಮೆ. ಹೀಗಾಗಿ ಮಲೆನಾಡಿನ ಖುಷ್ಕಿ ಜಮೀನುಗಳಲ್ಲಿ ಗೇರು ಕೃಷಿ ಕೈಗೊಳ್ಳುವುದಕ್ಕೆ ರೈತರು ಮುಂದೆ ಬಂದಿದ್ದಾರೆ.

`ನಾಲ್ಕು ಎಕರೆ ಖುಷ್ಕಿ ಜಮೀನು ಇದೆ. ಅದರಲ್ಲಿ ಒಂದು ಎಕರೆಯಲ್ಲಿ ಗೇರು ಬೆಳೆಯಲು ನಿರ್ಧರಿಸಿದ್ದೇವೆ. ಗೋಡಂಬಿಗೆ ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ಅಲ್ಲದೇ, ಈ ಕೃಷಿಗೆ ಕೆಲಸಗಾರರು ಬೇಕಾಗಿಲ್ಲ. ಹಾಗಾಗಿ, ಗೇರು ಬೆಳೆಯಲು ಯೋಚನೆ ಮಾಡಿದ್ದೇವೆ' ಎನ್ನುತ್ತಾರೆ ಸಾಗರದ ಶಿರೂರಿನ ರೈತ ನಟರಾಜ್.

ಜಿಲ್ಲೆಯಲ್ಲಿ ಪ್ರಸ್ತುತ ಗೇರನ್ನು ಸುಮಾರು 150 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ವಾರ್ಷಿಕ 2,013 ಟನ್ ಗೋಡಂಬಿ ಉತ್ಪಾದನೆ ಆಗುತ್ತಿದೆ. ಇಳುವರಿ ಮಟ್ಟ ಕೇವಲ 1.5 ಟನ್ ಮಾತ್ರ ಇದೆ. ಇದು ರಾಜ್ಯದ ಗೋಡಂಬಿ ಬೆಳೆಯುವ ಸಾಂಪ್ರಾದಾಯಿಕ ಜಿಲ್ಲೆಗಳಿಗಿಂತ ಕಡಿಮೆ ಇದೆ. ಆದರೆ, ಅಧಿಕ ಇಳುವರಿ ಕೊಡುವ ಹಾಗೂ ಬೇಗ ಕಾಯಿ ಕೊಡುವ ಕಸಿ ಗಿಡಗಳನ್ನು ರೈತರಿಗೆ ನೀಡಿದರೆ ಉತ್ತಮ ಇಳುವರಿ ಪಡೆಯಬಹುದು ಎಂಬುದು ತಜ್ಞರ ಅಭಿಪ್ರಾಯ.

ಅಡಿಕೆಗೆ ಪರ್ಯಾಯವಾಗಿ ಗೇರು ಬೆಳೆಯಲು ಹೊರಟ ರೈತರ ಬೆಂಬಲಕ್ಕೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರಗಳು ನಿಂತಿವೆ. ಮಲೆನಾಡಿನಲ್ಲಿ ಅಡಿಕೆಗೆ ಪರ್ಯಾಯವಾಗಿ ಕೃಷಿಯಲ್ಲಿ ಗೇರು ಬೆಳೆಯನ್ನು ವ್ಯಾಪಕವಾಗಿ ಬಳಕೆಗೆ ತರಲು ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಗೇರು ಅಭಿವೃದ್ಧಿ ಯೋಜನೆಯ ಮುಖ್ಯಸ್ಥ ಡಾ.ನಾರಾಯಣ ಎಸ್. ಮಾವರ್‌ಕರ್, ಸಹ ಮುಖ್ಯಸ್ಥ ಡಾ.ಗಣಪತಿ ಯೋಜನೆಯನ್ನು ಸಿದ್ಧಪಡಿಸಿದ್ದಾರೆ.

ಕಸಿ ಗಿಡಗಳನ್ನು ನೀಡುವುದು ಹಾಗೂ ಅವುಗಳ ನಿರ್ವಹಣೆಗೆ ಮೂರು ವರ್ಷಗಳವರೆಗೆ ಗೇರು ಅಭಿವೃದ್ಧಿ ಮಂಡಳಿಯಿಂದ ಧನಸಹಾಯ ಒದಗಿಸುವುದು ಈ ಯೋಜನೆಯ ಉದ್ದೇಶ.   
 
ವ್ಯವಸಾಯಕ್ಕೆ ಯೋಗ್ಯವಲ್ಲದ ಬ್ಯಾಣ, ಗೋಮಾಳ, ಸೊಪ್ಪಿನಬೆಟ್ಟಗಳಲ್ಲಿ ಗೇರು ಬೆಳೆ ಬೆಳೆದರೆ ಮೂರು ವರ್ಷಕ್ಕೆ ರೈತರು ಎಕರೆಗೆ ಸುಮಾರು ್ಙ 35ರಿಂದ 40ಸಾವಿರ ನಿವ್ವಳ ಲಾಭ ಪಡೆಯಬಹುದು. ಮೊದಲ 3-4 ವರ್ಷ ಯಾವುದೇ ಬೆಳೆಯನ್ನು ಅಂತರ ಬೆಳೆಯಾಗಿ ಉದಾಹರಣೆಗೆ ಅನಾಸನ್, ಮೆಕ್ಕೆಜೋಳ, ಶುಂಠಿ, ಮೇವಿನ ಬೆಳೆ ಜತೆಗೆ ಆಹಾರದ ಬೆಳೆ, ತರಕಾರಿ ಬೆಳೆಗಳು ಹಾಗೂ ದ್ವಿದಳ ಧಾನ್ಯಗಳನ್ನು ಬೆಳೆಯಬಹುದು ಎನ್ನುತ್ತಾರೆ ಡಾ.ನಾರಾಯಣ ಎಸ್. ಮಾವರ್‌ಕರ್ ಮತ್ತು ಡಾ.ಗಣಪತಿ.

ಅಸಾಂಪ್ರಾದಾಕಯಿಕ ಪ್ರದೇಶದಲ್ಲಿ ಹೆಚ್ಚು ಗೇರು ಬೆಳೆದಲ್ಲಿ ರೈತರಿಗೆ ಒಳ್ಳೆಯ ಮಾರುಕಟ್ಟೆ ಸಿಗುತ್ತದೆ. ಅಷ್ಟೇ ಅಲ್ಲ; ಗೇರು ವಿಸ್ತರಣೆಗೊಂಡಲ್ಲಿ ಗೇರು ಸಂಸ್ಕರಣ ಘಟಕಕ್ಕೆ ಪ್ರೋತ್ಸಾಹ ಸಿಗುತ್ತದೆ. ಹಣ್ಣು ಮತ್ತು ಬೀಜದಿಂದ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ಸಿಗುತ್ತದೆ ಎನ್ನುತ್ತಾರೆ ಅವರು.

`ಇಂದು ಮಲೆನಾಡಿನ ಕೃಷಿ ಜಮೀನಿನಲ್ಲಿ ವ್ಯಾಪಕವಾಗಿ ಅಡಿಕೆ, ರಬ್ಬರ್, ಅಕೇಶಿಯ, ನೀಲಗಿರಿ ತೋಟಗಳನ್ನು ಮಾಡಲಾಗುತ್ತಿದೆ. ಏಕ ಬೆಳೆ ಸಂಸ್ಕೃತಿ ಯಾವಾಗಲೂ ಅಪಾಯಕಾರಿ, ಬಹುಬೆಳೆಯಿಂದ ನಿರಂತರವಾಗಿ ಒಂದು ಮಟ್ಟದ ಆದಾಯವನ್ನು ಕಾಪಾಡಿಕೊಂಡು ಬರಬಹುದು. ಕಾರ್ಮಿಕರ ಅಭಾವ ಇರುವ ಸಂದರ್ಭದಲ್ಲಿ ಗೇರು ಪ್ರಶಸ್ತವಾದ ಪರ್ಯಾಯ ಬೆಳೆ ಆದರಲ್ಲಿಯೂ ಸಣ್ಣ ಮತ್ತು ಅತಿ ಸಣ್ಣ ರೈತರಿಗೊಂದು ವರದಾನ. ಕೃಷಿಯಲ್ಲಿ ಅಡಿಕೆ ತೋಟ ಮಾಡಿ ನಿರಂತರ ನೀರಿಗೆ ಪರದಾಡುವುದರ ಬದಲು ಗೇರು ಬೆಳೆಸಿ ನೆಮ್ಮದಿ ಕಾಣಬಹುದು.

ವ್ಯವಸ್ಥಿತವಾಗಿ ವೈಜ್ಞಾನಿಕ ನಿರ್ವಹಣೆಯಿಂದ ಸರಾಸರಿ ಎಕರೆವಾರು ಲೆಕ್ಕದಲ್ಲಿ ಅಡಿಕೆಯಷ್ಟೇ ಆದಾಯ ಪಡೆಯಬಹುದು' ಎಂದು ಸಲಹೆ ನೀಡುತ್ತಾರೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಗೇರು ವಿಸ್ತರಣಾ ಯೋಜನೆ ಸಹಮುಖ್ಯ ಸಂಶೋಧಕ ಡಾ.ಎಂ.ಎಸ್.ವಿಘ್ನೇಶ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.