ADVERTISEMENT

ಗ್ರಾಮ ಪಂಚಾಯ್ತಿ ನೌಕರರ ಸಂಘದ ಸದಸ್ಯರ ಧರಣಿ.ಶೇ 100ರಷ್ಟು ಮೀಸಲಾತಿಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 6:05 IST
Last Updated 16 ಫೆಬ್ರುವರಿ 2011, 6:05 IST

ಶಿವಮೊಗ್ಗ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯ್ತಿ ನೌಕರರ ಸಂಘದ ಸದಸ್ಯರು ಜಿಲ್ಲಾ ಪಂಚಾಯ್ತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.ಗ್ರಾ.ಪಂ. ಕಾರ್ಯದರ್ಶಿ-2 ಹುದ್ದೆಗೆ ನೇಮಕಾತಿಯಲ್ಲಿ ತಿದ್ದುಪಡಿ ಮಾಡಿ, ಶೇ. 100ರಷ್ಟು ಮೀಸಲಾತಿ ನೀಡಬೇಕು. ಈ ಹುದ್ದೆಗೆ ಕರವಸೂಲಿಗಾರರನ್ನು ಭರ್ತಿ ಮಾಡಿಕೊಳ್ಳಬೇಕು. ಇತರೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಕಾರ್ಯದರ್ಶಿ-2 ಹುದ್ದೆಯಲ್ಲಿರುವವನ್ನು ಕೂಡಲೇ ಮಾತೃ ಇಲಾಖೆಗೆ ಕಳುಹಿಸಬೇಕು. ಇದರಲ್ಲಿ ಕಳೆದ 20ವರ್ಷದಿಂದ ಅನುಸರಿಸಿಕೊಂಡು ಬಂದ ನಿಯಮದಂತೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಕಳೆದ ಎರಡು ವರ್ಷದಿಂದ ಗ್ರಾ.ಪಂ. ನೌಕರರಿಗೆ ಸರ್ಕಾರ ನಿಗದಿಪಡಿಸಿದ ವೇತನ ಸಿಗುತ್ತಿಲ್ಲ. ಗ್ರಾ.ಪಂ.ಗಳಲ್ಲಿ ಆದಾಯದ ಕೊರತೆ ಹಾಗೂ ಬಂದಂತಹಆದಾಯವನ್ನು ಗ್ರಾಮೀಣ ಅಭಿವೃದ್ಧಿ ಕೆಲಸಗಳಿಗೆ ಬಳಕೆಯಾಗುತ್ತಿರುವುದರಿಂದ ಸಿಬ್ಬಂದಿಗೆ ವೇತನ ಇಲ್ಲದಂತಾಗಿದೆ. ಆದ್ದರಿಂದ ಗ್ರಾ.ಪಂ. ನೌಕರರ ಪ್ರತ್ಯೇಕ ಶೀರ್ಷಿಕೆಯನ್ನು ರಚಿಸಿ ಶೇ. 40ರಷ್ಟು ಶಾಸನಬದ್ಧ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಮೂರನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಅನುದಾನ ಹೆಚ್ಚಿಸಬೇಕು. ಗ್ರಾ.ಪಂ. ನೌಕರರಿಗೆ ಭವಿಷ್ಯ ನಿಧಿ ಯೋಜನೆ ಜಾರಿ ಮಾಡಲು ಸರ್ಕಾರ ಆದೇಶ ಮಾಡಿ, ಎರಡು ವರ್ಷ ಕಳೆದರೂ ತಾಲ್ಲೂಕು ಕಾರ್ಯ ನಿರ್ವಾಹಣಾಧಿಕಾರಿ ನಿರ್ಲಕ್ಷ್ಯದಿಂದ ಗ್ರಾ.ಪಂ.ನಲ್ಲಿ ಇದುವರೆಗೂ ಜಾರಿಯಾಗಿಲ್ಲ. ತಕ್ಷಣ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಜಿ.ಪಂ. ಸಿಇಒ ಮೂಲಕ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯುನ ಎಸ್.ಬಿ. ಶಿವಶಂಕರ್, ಕೊಟ್ಟೂರು ಶ್ರೀನಿವಾಸ್, ಸುರೇಶ್ ಅಗಸವಳ್ಳಿ, ನಾಗೇಶಪ್ಪ, ಮಂಜುನಾಥ್, ಸುಬ್ಬರಾಯಶೆಟ್ಟಿ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.