ADVERTISEMENT

ಚಿತ್ರಕ್ಕೆ ವ್ಯಕ್ತಿತ್ವ ರೂಪಿಸುವ ಶಕ್ತಿ

ಚಿತ್ರಕಲಾ ಸ್ಪರ್ಧೆಯಲ್ಲಿ ಕೆ.ಎಸ್. ಈಶ್ವರಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 6:27 IST
Last Updated 24 ಡಿಸೆಂಬರ್ 2012, 6:27 IST

ಶಿವಮೊಗ್ಗ: ಚಿತ್ರಗಳಿಗೆ ಮನುಷ್ಯನ ವ್ಯಕ್ತಿತ್ವ ರೂಪಿಸುವ ಶಕ್ತಿ ಇರುತ್ತದೆ ಎಂದು ಉಪ ಮುಖ್ಯಮಂತ್ರಿಕೆ.ಎಸ್. ಈಶ್ವರಪ್ಪ ಅಭಿಪ್ರಾಯಪಟ್ಟರು.

ನಗರದ ಶಿವಪ್ಪನಾಯಕ ಅರಮನೆ ಆವರಣದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಹಮ್ಮಿಕೊಂಡಿರುವ ಮೂರು ದಿನಗಳ ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಚಿತ್ರಗಳಿಗೆ ಮನುಷ್ಯನ ಜೀವನವನ್ನೇ ಬದಲಿಸುವ ಶಕ್ತಿ ಇರುತ್ತದೆ. ಭಾವನೆಗಳನ್ನು ತುಂಬಿಕೊಂಡು ಉತ್ತಮ ವ್ಯಕ್ತಿತ್ವವನ್ನೇ ರೂಪಿಸುವ ಶಕ್ತಿ ಚಿತ್ರಗಳಿಗೆ ಇರುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಜೀವನದಲ್ಲೂ ಚಿತ್ರಗಳು ಬಹಳಷ್ಟು ಪ್ರಮುಖ ಪಾತ್ರಗಳನ್ನು ವಹಿಸುತ್ತವೆ ಎಂದರು.

ಭಾವಜೀವಿಗಳಾದ ಕಲಾವಿದರು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ತಮ್ಮ ಚಿತ್ರ ಜೀವನವನ್ನು ಉಜ್ವಲಗೊಳಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು. ಕೃಷ್ಣಸೆಟ್ಟಿ ಮಾತನಾಡಿ, ದೃಶ್ಯಕಲೆ ಮನುಷ್ಯನ ನಕಾರಾತ್ಮಕ ಭಾವನೆಗಳನ್ನು ಹೋಗಲಾಡಿಸಿ ಸಕಾರಾತ್ಮಕ ಭಾವನೆಗಳನ್ನು ಬೆಳೆಸುತ್ತದೆ. ಈ ಮೂಲಕ ಸಾಮಾಜಿಕ ಬದಲಾವಣೆಯ ಪ್ರಮುಖ ಅಸ್ತ್ರವಾಗಿದೆ ಎಂದರು.

ಕರ್ನಾಟಕ ಲಲಿತ ಕಲಾ ಅಕಾಡೆಮಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ಕಲಾವಿದರನ್ನು ರೂಪಿಸುವ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳುತ್ತಿದೆ ಎಂದರು.

ಮೂರು ದಿನಗಳು ನಡೆಯುವ ಶಿಬಿರದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಶಿವಮೊಗ್ಗಕ್ಕೆ ಆಗಮಿಸಿದ್ದು, ತಮ್ಮ ಕಲಾಪ್ರೌಢಿಮೆ ತೋರಲಿದ್ದಾರೆ. ಅಲ್ಲದೆ ಅಕಾಡೆಮಿಯ ಚಿತ್ರಕಲಾ ಪ್ರದರ್ಶನ ವಾಹನ ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಚರಿಸಿ ಕಲೆಯ ಪರಿಚಯ ಮಾಡಲಿದೆ ಎಂದರು.

ಸಭೆಯಲ್ಲಿ ನಗರಸಭೆ ಆಯುಕ್ತ ಪಿ.ಜಿ. ರಮೇಶ್, ಲಲಿತಕಲಾ ಅಕಾಡೆಮಿ ಸದಸ್ಯೆ ಕಾತ್ಯಾಯಿನಿ, ಅಕಾಡೆಮಿ ರಿಜಿಸ್ಟ್ರಾರ್ ಸುಧೀಂದ್ರ ಉಪಸ್ಥಿತರಿದ್ದರು. ಅಕಾಡೆಮಿಯ ವಿವಿಧ 16 ಸದಸ್ಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.