ADVERTISEMENT

ಚುನಾವಣಾ ಅಧಿಕಾರಿಗಳ ಭೇಟಿ, ಪರಿಶೀಲನೆ

ಸೌಲಭ್ಯ ವಂಚಿತ ಸುಂಕದ ಮನೆ ನಡುಗಡ್ಡೆ ಮತದಾನ ಕೇಂದ್ರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 13:21 IST
Last Updated 18 ಜೂನ್ 2018, 13:21 IST
ಕಾರ್ಗಲ್ ಸಮೀಪದ ತಳಕಳಲೆ ಕಂದಾಯ ಗ್ರಾಮಗಳಿಗೆ ಹಿನ್ನೀರಿನ ಕಡುವು ಮಾರ್ಗದ ಏಕೈಕ ಸಂಪರ್ಕ ಮೋಟಾರ್ ಬೋಟಿನಲ್ಲಿ ಗ್ರಾಮ ವಾಸಿಗಳು ಪಯಣಿಸಿದ ದೃಶ್ಯ.
ಕಾರ್ಗಲ್ ಸಮೀಪದ ತಳಕಳಲೆ ಕಂದಾಯ ಗ್ರಾಮಗಳಿಗೆ ಹಿನ್ನೀರಿನ ಕಡುವು ಮಾರ್ಗದ ಏಕೈಕ ಸಂಪರ್ಕ ಮೋಟಾರ್ ಬೋಟಿನಲ್ಲಿ ಗ್ರಾಮ ವಾಸಿಗಳು ಪಯಣಿಸಿದ ದೃಶ್ಯ.   

ಕಾರ್ಗಲ್: ತಳಕಳಲೆ ಹಿನ್ನೀರಿನ ಮಧ್ಯ ಭಾಗದಲ್ಲಿರುವ ಸುಂಕದಮನೆ ನಡುಗಡ್ಡೆ ಮತದಾನ ಕೇಂದ್ರಕ್ಕೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಹಾಯಕ ಚುನಾವಣಾ ಅಧಿಕಾರಿ ಡಾ. ಬಿ.ಉದಯಕುಮಾರ ಶೆಟ್ಟಿ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ತಳಕಳಲೆ ಕಡವು ದಾಟಿ ಭಾನುವಾರ ಭೇಟಿ ನೀಡಿ ಮತಗಟ್ಟೆ ಕೇಂದ್ರದ ಸ್ಥಿತಿ ಗತಿ  ಅವಲೋಕಿಸಿದರು.

ತಾಲ್ಲೂಕಿನಲ್ಲಿಯೇ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಒಂದಾಗಿರುವ ಸುಂಕದ ಮನೆ, ಕಲ್ಲೋಟ್ಟಿ, ತಾಸೊಳ್ಳಿ, ಹೆರ್ಕಣಿ, ಜಬ್ಬುಗದ್ದೆ, ಐತೋಳ್ ಮನೆ ಸೇರಿದಂತೆ ತಳಕಳಲೆ ಕಂದಾಮಯ ಗ್ರಾಮಕ್ಕೆ ಸೇರಿದ ಮಜಿರೆ ಗ್ರಾಮಗಳಿಗೆ ಈ ಮತದಾನ ಕೇಂದ್ರ ಮೀಸಲಾಗಿದ್ದು, ತಾಲ್ಲೂಕಿನ ಪ್ರಥಮ ಮತದಾನ ಕೇಂದ್ರ ಸಂಖ್ಯೆ 1ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

33ಕುಟುಂಬದ 180ಜನ ಮತದಾರರನ್ನು ಹೊಂದಿರುವ ಈ ಮತಗಟ್ಟೆ ಕೇಂದ್ರದಲ್ಲಿ ಪರಿಶಿಷ್ಟ ವರ್ಗದ ಮತದಾರರು ಶೇಕಡ 95ರಷ್ಟು ಬಲ ಹೊಂದಿರುವುದು ಇಲ್ಲಿನ ಮತ್ತೊಂದು ವಿಶೇಷವಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ದ್ವೀಪ ವಾಸಿಗಳೇ ಜಾಸ್ತಿಯಿರುವ ಇಲ್ಲಿನ ಆದಿವಾಸಿಗಳ ಸತತ ಹೋರಾಟದ ಫಲವಾಗಿ 2013ರ ವಿಧಾನ ಸಭೆ ಚುನಾವಣೆ ಸಮಯದಲ್ಲಿ ಸ್ವಾತಂತ್ರ್ಯ ನಂತರ ಮೊದಲ ಬಾರಿಗೆ ಮತದಾನ ಕೇಂದ್ರ ಇಲ್ಲಿಗೆ ಲಭ್ಯವಾಗಿತ್ತು. ರಾಜ್ಯಕ್ಕೆ ಬೆಳಕನ್ನು ನೀಡಲು ತಮ್ಮ ಸರ್ವಸ್ವ ಕಳೆದುಕೊಂಡು ಕತ್ತಲ ಬದುಕಿಗೆ ನೂಕಿರುವ ಇಲ್ಲಿನ ಆದಿವಾಸಿ ಗೊಂಡ ಜನಾಂಗದವರು ಸಂಪೂರ್ಣ ಕೃಷಿ ಮತ್ತು ಅರಣ್ಯ ಉತ್ಪನ್ನ ವಸ್ತುಗಳ ಸಂಗ್ರಹಣೆಯಿಂದ ಜೀವನ ನಡೆಸುತ್ತಿದ್ದಾರೆ.

ಕಾರ್ಗಲ್ ಕೇಂದ್ರ ಪ್ರದೇಶದಿಂದ ರಸ್ತೆ ಮಾರ್ಗವಾಗಿ ಸುಮಾರು 35ಕಿಮೀ ದೂರದಲ್ಲಿ ಬದುಕನ್ನು ಸಾಗಿಸುತ್ತಿರುವ ಇವರಿಗೆ ಸದ್ಯದ ಏಕೈಕ ಸಂಪರ್ಕ ಮಾರ್ಗ ತಳಕಳಲೆ ಕಡವು. ದಡದಿಂದ ಸುಮಾರು 9ಕಿಮೀ ಜಲ ಸಾರಿಗೆ ಮಾರ್ಗದಲ್ಲಿ ಪ್ರತಿ ನಿತ್ಯ ಜೀವನದ ಅಗತ್ಯಗಳಿಗೆ ಇಲ್ಲಿನವರು ಸಂಚರಿಸಬೇಕಿದೆ.

ವಾರದಲ್ಲಿ ಎರಡು ದಿನಗಳು  ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ನೀಡಿರುವ ಮೋಟಾರು ಬೋಟಿನಲ್ಲಿ ಪಯಣ ಮಾಮೂಲಿಯಾಗಿದ್ದರೆ, ಉಳಿದ ಸಂದರ್ಭದಲ್ಲಿ ನಾಡ ದೋಣಿ ಬಳಕೆಯೇ ಸಾರಿಗೆ ವ್ಯವಸ್ಥೆ.

ಪಟ್ಟಣ ಪಂಚಾಯ್ತಿಯಿಂದ ಸಂಬಂಧಪಟ್ಟ ತಳಕಳಲೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ದೃಷ್ಟಿಯಿಂದ ಮಿನಿ ಸೇತುವೆ ಕಾಮಗಾರಿ ಟೆಂಡರ್ ಆಗಿ ಒಂದು ವರ್ಷ  ಕಳೆದಿದೆ.  ಟೆಂಡರ್ ನಲ್ಲಿ ನಿಗದಿಯಾಗಿದ್ದ ₨ 29ಲಕ್ಷದಲ್ಲಿ  ಶೇಕಡ 65ಭಾಗದಷ್ಟು ಹಣ ಗುತ್ತಿಗೆದಾರನ ಪಾಲಾಗಿದ್ದರೂ, ಇದುವರೆಗೂ ಕಾಮಗಾರಿ ಮಾತ್ರ ಶೇಕಡ 35ಭಾಗ ದಾಟಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿತನಕ್ಕೆ ಇದು ಕನ್ನಡಿ ಎಂದು ದಲಿತ ಸಂಘರ್ಷ ಸಮಿತಿ ಭೀಮರಾಜ್ ಆರೋಪಿಸಿದ್ದಾರೆ.

ಕೂಡಲೇ ಸದರಿ ಮಿನಿ ಸೇತುವೆ ಕಾಮಗಾರಿಯನ್ನು ಪೂರ್ತಿಗೊಳಿಸುವಂತೆ ಉಪವಿಭಾಗಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ, ಸುಂಕದ ಮನೆ ನಡುಗಡ್ಡೆ ಮತದಾನ ಕೇಂದ್ರಕ್ಕೆ ತುರ್ತು ಮೂಲ ಅಗತ್ಯಗಳಿಗಾಗಿ ಸೋಲಾರ್ ವಿದ್ಯುತ್ ದೀಪ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆದೇಶ ನೀಡಿದ್ದಾರೆ.

ತಹಶೀಲ್ದಾರ್ ಭಾಗ್ಯಲಕ್ಷ್ಮೀ,  ಡಿವೈಎಸ್ ಪಿ  ಸುರೇಶ್, ಸಿಡಿಪಿಒ ಜೋಯಪ್ಪ, ಕಂದಾಯ ನಿರೀಕ್ಷಕ ಕಲ್ಲಪ್ಪ ಮೆಣಸಿನಾಳ್, ಗ್ರಾಮ ಲೆಕ್ಕಾಧಿಕಾರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.