ADVERTISEMENT

ಛಾಯಾಗ್ರಹಣ ಸೃಜನಶೀಲತೆಯ ಅಭಿವ್ಯಕ್ತಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 5:19 IST
Last Updated 2 ಸೆಪ್ಟೆಂಬರ್ 2013, 5:19 IST

ಸಾಗರ: `ಸದಾ ಹೊಸತನ್ನು ಹುಡುಕುವವರಿಗೆ ಹೇಳಿ ಮಾಡಿಸಿದಂತಹ ವೃತ್ತಿಯಾಗಿರುವ ಛಾಯಾಚಿತ್ರಗ್ರಹಣ ಮನುಷ್ಯನ ಸೃಜನಶೀಲತೆಯ ಅಭಿವ್ಯಕ್ತಿಯಾಗಿದೆ' ಎಂದು ಉಪವಿಭಾಗಾಧಿಕಾರಿ ಡಾ.ಬಿ. ಉದಯಕುಮಾರ್ ಶೆಟ್ಟಿ ಹೇಳಿದರು.

ತಾಲ್ಲೂಕು ಪೋಟೋಗ್ರಾಫರ್ಸ್‌ ಮತ್ತು ವೀಡಿಯೊಗ್ರಾಫರ್ಸ್‌ ಅಸೋಸಿ ಯೇಷನ್ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪರಿಸರ ಛಾಯಾಚಿತ್ರಗ್ರಹಣ ವಿಭಾಗದಲ್ಲಿ ಅಂತರರಾಷ್ಟ್ರೀಯ ಮಟ್ಟದ ಪುರಸ್ಕಾರ ಪಡೆದಿರುವ ಛಾಯಾಚಿತ್ರಗ್ರಾಹಕ ಆರ್.ಸತೀಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.

ಕೈಯಲ್ಲಿ ಕ್ಯಾಮೆರಾ ಇದ್ದ ತಕ್ಷಣ ಒಳ್ಳೆಯ ಛಾಯಾಚಿತ್ರ ತೆಗೆಯಲು ಸಾಧ್ಯವಿಲ್ಲ. ಗುಣಮಟ್ಟದ ಛಾಯಾಚಿತ್ರ ತೆಗೆಯಲು ಸಂವೇದನಾಶೀಲ ಮನಸ್ಸು ಇರುವುದು ಮುಖ್ಯ. ವೃತ್ತಿಯ ಜೊತೆಗೆ ಪೋಟೋಗ್ರಫಿಯನ್ನು ಪ್ರವೃತ್ತಿಯಾಗಿ ನೋಡುವ ಗುಣ ಇದ್ದಲ್ಲಿ ವೃತ್ತಿಗೆ ಕಲಾತ್ಮಕತೆ ಮೂಡಿಬರುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ರಂಗಕರ್ಮಿ ಕಾಗೋಡು ಅಣ್ಣಪ್ಪ ಮಾತನಾಡಿ ಛಾಯಾಚಿತ್ರಗ್ರಾಹಕರಿಗೆ ಒಳಗಣ್ಣು ಇದ್ದಾಗ ಮಾತ್ರ ವಿಶಿಷ್ಟ ಎನ್ನಬಹುದಾದ ಚಿತ್ರ ಮೂಡಿಬರಲು ಸಾಧ್ಯ. ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಜೊತೆಗೆ ತಮ್ಮತನವನ್ನು ಉಳಿಸಿಕೊಳ್ಳಬೇಕಾದ ಸವಾಲು ಛಾಯಾಚಿತ್ರಗ್ರಾಹಕರ ಮುಂದೆ ಇದೆ ಎಂದು ಹೇಳಿದರು.

ತಾಲ್ಲೂಕು ಪೋಟೋಗ್ರಾಫರ್ಸ್‌ ಮತ್ತು ವೀಡಿಯೊಗ್ರಾಫರ್ಸ್‌ ಅಸೋಸಿಯೇಷನ್‌ನ ಅಧ್ಯಕ್ಷ ಅನಿಲ್‌ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಾನಿಗಳಾದ ರಘುಪತಿರಾವ್ ಮತ್ತಿಕೊಪ್ಪ ಮುಖ್ಯ ಅತಿಥಿಯಾಗಿದ್ದರು. ಕೆ.ಎಸ್.ಸುಧಾ ಪ್ರಾರ್ಥಿಸಿದರು. ಷಣ್ಮುಖ ಸ್ವಾಗತಿಸಿದರು.

ಎಂ.ನಾಗರಾಜ್ ಪ್ರಾಸ್ತಾವಿಕ ಮಾತನಾಡಿದರು. ಮಧು ಗೋಟಗಾರು ವಂದಿಸಿದರು. ಉಲ್ಲಾಸ್ ಶ್ಯಾನಭಾಗ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.