ಶಿವಮೊಗ್ಗ: ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ವಾಸವಾಗಿರುವ ತಮ್ಮನ್ನು ಜೀತಪದ್ಧತಿಯಿಂದ ಮುಕ್ತಗೊಳಿಸಿ, ಭಾರತೀಯ ಪೌರತ್ವ
ನೀಡುವ ಜತೆಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ 50ಕ್ಕೂ ಅರಣ್ಯವಾಸಿಗಳು ಕರ್ನಾಟಕ ಆದಿವಾಸಿ ಜನಸೇವಾ ಸಂಘದ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಜಿಲ್ಲೆಯ ಆಯನೂರು,ಸಿರಿಗೆರೆ ಹತ್ತಿರ ಬಿಲ್ಲು ಒಡೆಯರ ಕೊಪ್ಪ ಕ್ಯಾಂಪ್, ಶಿಕಾರಿಪುರ ತಾಲ್ಲೂಕಿನ ಕಟ್ಟಿಗೆಹಳ್ಳದ ಬಳಿಯ ಚಾರ್ಡಿ ಮತ್ತು ಬಿಜೋಳಿಯಲ್ಲಿ ಒಟ್ಟು 600ಕ್ಕೂ ಹೆಚ್ಚು ಜನ ಕಾಡಿನಲ್ಲಿದ್ದು, ಎಲ್ಲರನ್ನೂ ಜೀತಪದ್ಧತಿಯಲ್ಲಿ ನಡುತೋಪು ಕಟಾವಿನ ಗುತ್ತಿಗೆದಾರರು ದುಡಿಸಿಕೊಳ್ಳುತ್ತಿದ್ದಾರೆ ಎಂದು ಆದಿವಾಸಿಗಳು ದೂರಿದರು.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಅರಣ್ಯ ವಾಸಿಗಳ ಹಕ್ಕುಗಳನ್ನು ಮಾನ್ಯ ಮಾಡುವ ಅಧಿನಿಯಮ 2006 (ತಿದ್ದುಪಡಿ–2012) ಜಾರಿಗೆ ಮಾಡಿಲ್ಲ. ಮಕ್ಕಳಿಗೆ ಶಿಕ್ಷಣ ಇಲ್ಲ. ಆರೋಗ್ಯ ಸಮಸ್ಯೆಯಿಂದ ಹಿರಿಯರು, ಮಕ್ಕಳು ಸೇರಿದಂತೆ ಎಲ್ಲರೂ ಬಳಲುತ್ತಿದ್ದೇವೆ ಎಂದು ಆರೋಪಿಸಿದರು.
ನಮ್ಮನ್ನು ಕೀಳಾಗಿ ದುಡಿಸಿ ಕೊಳ್ಳುತ್ತಿರುವ ಗುತ್ತಿಗೆದಾರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ನಮಗೆ ಪುನರ್ವಸತಿ ಕಲ್ಪಿಸಿ ಭಾರತೀಯ ಪೌರತ್ವವನ್ನು ಒದಗಿಸಿ, ನಾಗರಿಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮೈಸೂರ ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಜನಸಂಗ್ರಾಮ್ ಪರಿಷತ್ ವಿಭಾಗೀಯ ಕಾರ್ಯದರ್ಶಿ ಪ್ರಸನ್ನ
ಸಿಕ್ರಂ, ಬೆಂಗಳೂರು ಬರ್ಡ್ಸ್ ಸಂಸ್ಥೆ ಕ್ಷೇತ್ರ ಸಂಯೋಜಕ ಬಾಲರಾಜ್, ಉಡುಪಿಯ ನೇಟೀವ್ ಆರ್ಗ್‌ನೈಜೇಷನ್ ಪ್ರೇಮಾನಂದ ಕಲ್ಮಾಡಿ ಹಾಗೂ ಬೆಂಗಳೂರು ಕರ್ನಾಟಕ ಆದಿವಾಸಿ ಜನಸೇವಾ ಸಂಘದ ಸದಸ್ಯ ಕರಿಯಯ್ಯ ಉಪಸ್ಥಿತರಿದ್ದರು.
ಮತದಾನದ ಹಕ್ಕಿಲ್ಲ; ಶಾಲೆ ಮುಖ ಕಂಡಿಲ್ಲ
ಇವರಿಗೆ ಮತದಾನದ ಹಕ್ಕಿಲ್ಲ; ಓದು–ಬರಹ ಗೊತ್ತಿಲ್ಲ. ಪೇಟೆ–ಪಟ್ಟಣ ನೋಡಿಲ್ಲ. ಇವರೆಲ್ಲ ಅರಣ್ಯವಾಸಿಗಳು.ಇವರಿಗೆ ಗೊತ್ತಿರುವುದು ಒಂದೇ ನಡುತೋಪು ಕಟಾವು ಮಾಡುವುದು. ಇದನ್ನು ಇವರು ಕಳೆದ ಮೂರು ತಲೆಮಾರುಗಳಿಂದ ಮಾಡಿಕೊಂಡು ಬಂದಿದ್ದಾರೆ. ಇವರೆಲ್ಲರೂ ಜೀತದಾಳುಗಳು.
ನಾಗರಿಕ ಪ್ರಪಂಚದ ಅರಿವು ಇಲ್ಲದ ಇವರಿಗೆ ಅನುಭವಿಸುತ್ತಿರುವ ದೌರ್ಜನ್ಯ ಹೇಳತೀರದು. ಹುಟ್ಟಿದ ಮಕ್ಕಳೂ ಗರಗಸ ಹಿಡಿದು ಮರ ಕಟಾವಿಗೆ ಸಿದ್ಧರಾಗಬೇಕು. ಹೆಣ್ಣುಮಕ್ಕಳ ಕಷ್ಟವಂತೂ ಹೇಳತೀರದು.
ಜಿಲ್ಲೆಯ ಆಯನೂರು ಸಿರಿಗೆರೆ ಹತ್ತಿರ ಬಿಲ್ಲು ಒಡೆಯರ ಕೊಪ್ಪ ಕ್ಯಾಂಪ್, ಶಿಕಾರಿಪುರ ತಾಲ್ಲೂಕಿನ ಕಟ್ಟಿಗೆಹಳ್ಳದ ಬಳಿಯ ಚಾರ್ಡಿ ಮತ್ತು ಬಿಜೋಳಿಯಲ್ಲಿ ಒಟ್ಟು 600ಕ್ಕೂ ಹೆಚ್ಚು ಜನ ಯಾವುದೇ ಮೂಲ ಸೌಕರ್ಯಗಳಿಲ್ಲದೆ ಬದುಕುತ್ತಿದ್ದಾರೆ. ಸರ್ಕಾರದ ಯಾವುದೇ ದಾಖಲೆಯಲ್ಲೂ ಇವರ ಹೆಸರು ಇಲ್ಲ. ಆರೋಗ್ಯ ಸಮಸ್ಯೆಯಿಂದ ಹಿರಿಯರು, ಮಕ್ಕಳು ಬಳಲುತ್ತಿದ್ದಾರೆ. ಅಧಿಕಾರಿಗಳಿಂದ ಭಾರತೀಯ ಪೌರತ್ವವನ್ನು ಗುರುತಿಸುವಿಕೆ ಮತ್ತು ನೀಡುವಿಕೆ ಆಗಿಲ್ಲ. ಐದು ವರ್ಷದ ಕೆಳಗಿನ 30ಕ್ಕೂ ಮಕ್ಕಳಿದ್ದು, ಅವರೆಲ್ಲರೂ ಪೌಷ್ಟಿಕತೆ ಕೊರತೆಯಿಂದ ಬಳಲುತ್ತಿದ್ದಾರೆ. ಮತ್ತೆ ಯಾರಿಗೂ ಇದುವರೆಗೂ ಪಲ್ಸ್ ಪೊಲೀಯೊ ಲಸಿಕೆ ಹಾಕಿಸಿಲ್ಲ.
ಕಳೆದ ಮೂರ್ನಾಲ್ಕು ದಿನಗಳಿಂದ ಕಾರ್ಯಾಚರಣೆ ನಡೆಸಿದ ಮೈಸೂರು ಮಾನವ ಹಕ್ಕುಗಳ ಕಾರ್ಯಕರ್ತ ಹಾಗೂ ಜನಸಂಗ್ರಾಮ್ ಪರಿಷತ್ ವಿಭಾಗೀಯ ಕಾರ್ಯದರ್ಶಿ ಪ್ರಸನ್ನ ಸಿಕ್ರಂ, ಬೆಂಗಳೂರು ಬರ್ಡ್ಸ್ ಸಂಸ್ಥೆ ಕ್ಷೇತ್ರ ಸಂಯೋಜಕ ಬಾಲರಾಜ್, ಉಡುಪಿಯ ನೇಟೀವ್ ಆರ್ಗ್ ನೈಜೇಷನ್ ಪ್ರೇಮಾನಂದ ಕಲ್ಮಾಡಿ ಹಾಗೂ ಬೆಂಗಳೂರು ಕರ್ನಾಟಕ ಆದಿವಾಸಿ ಜನಸೇವಾ ಸಂಘದ ಸದಸ್ಯ ಕರಿಯಯ್ಯ ಅವರು ಗುರುವಾರ ಇವರೆಲ್ಲರಿಗೂ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಬಳಿ ಕರೆದು ತಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.