ADVERTISEMENT

ತೀರ್ಥಹಳ್ಳಿ: ಇಂದಿನಿಂದ ಎಳ್ಳಮಾವಾಸ್ಯೆ ಜಾತ್ರೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2011, 10:20 IST
Last Updated 4 ಜನವರಿ 2011, 10:20 IST

ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವರ ಎಳ್ಳಮಾವಾಸ್ಯೆ ತೀರ್ಥಸ್ನಾನ ಹಾಗೂ ಜಾತ್ರಾ ಮಹೋತ್ಸವ ಜ. 4ರಿಂದ ಆರಂಭಗೊಳ್ಳಲಿದೆ. ಚಿತ್ತಾಕರ್ಷಕ ತೆಪ್ಪೋತ್ಸವ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ. ಈಗಾಗಲೇ, ಜಾತ್ರಾ ಸಿದ್ಧತೆಗಳು ನಡೆದಿದ್ದು, ಪಟ್ಟಣದ ರಥಬೀದಿ ಅಲಂಕೃತಗೊಂಡಿದೆ. ಮಂಗಳವಾರ ಇಲ್ಲಿನ ತುಂಗಾನದಿಯ ಶ್ರೀರಾಮಕೊಂಡದಲ್ಲಿ ಭಕ್ತರು ಪುಣ್ಯಸ್ನಾನ ಮಾಡುವ ಮೂಲಕ ಶ್ರೀರಾಮೇಶ್ವರ ದೇವರ ಕೃಪೆಗೆ ಪಾತ್ರರಾಗುವರು.

ಮಲೆನಾಡಿಗರ ಹೆಮ್ಮೆಯ ಜಾತ್ರೆ ಎಂದೇ ಬಿಂಬಿತವಾದ ಎಳ್ಳಮಾವಾಸ್ಯೆ ಜಾತ್ರೆಗೆ ಶ್ರೀರಾಮೇಶ್ವರ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿದೆ. ತುಂಗಾನದಿಯಲ್ಲಿ ಭಕ್ತರು ಪುಣ್ಯಸ್ನಾನ ಮಾಡಲು ಅನುಕೂಲ ಕಲ್ಲಿಸುವ ಸಲುವಾಗಿ ರಾಮಕೊಂಡದ ಬಳಿ ತಡೆಬೇಲಿಯನ್ನು ನಿರ್ಮಿಸಲಾಗಿದೆ. 5ರಂದು ನಡೆಯುವ ರಥೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತರಿಗೆ ಮನರಂಜನೆ ಒದಗಿಸಲು ಜಾಯಿಂಟ್ ವ್ಹೀಲ್ ಹಾಗೂ ಡ್ರ್ಯಾಗನ್ ಟ್ರೈನ್ ಮುಂತಾದ ಮನರಂಜನೆಯ ಆಟಿಕೆಗಳು ಈಗಾಗಲೇ, ರಥಬೀದಿಯಲ್ಲಿ ಬೀಡುಬಿಟ್ಟಿವೆ. ಬಗೆಬಗೆಯ ಸಿಹಿತಿಂಡಿಗಳ ಮಿಠಾಯಿ ಅಂಗಡಿಗಳು ರಥಬೀದಿಯ ಅಕ್ಕ ಪಕ್ಕ ಜಮಾಯಿಸಿವೆ.

ನಾಡಿನ ಮೂಲೆಮೂಲೆಯಿಂದ ತೀರ್ಥಹಳ್ಳಿಯ ಪ್ರಸಿದ್ಧ ಎಳ್ಳಮಾವಾಸ್ಯೆ ಜಾತ್ರೆಗೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಪಟ್ಟಣ ಪಂಚಾಯ್ತಿ ಆಡಳಿತ ಮುಂದಾಗಿದೆ.
7ರಂದು ತುಂಗಾನದಿಯಲ್ಲಿ ಜರುಗುವ ಚಿತ್ತಾಕರ್ಷಕ ತೆಪ್ಪೋತ್ಸವ ಕಾರ್ಯಕ್ರಮವನ್ನು ವೀಕ್ಷಿಸಲು ತುಂಗಾನದಿಯ ಮರಳದಂಡೆಯ ಮೇಲೆ ಅವಕಾಶ ಕಲ್ಪಿಸಲಾಗಿದೆ. ವಿದ್ಯುತ್ ದೀಪಗಳು ಹಾಗೂ ಆಕರ್ಷಕ ಸಿಡಿಮದ್ದುಗಳು ಭಕ್ತರನ್ನು ರಂಜಿಸಲಿವೆ. ಜಾತ್ರೆಯಲ್ಲಿ ಎಲ್ಲಿಯೂ ಕೂಡ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರವಹಿಸಲು ಪೊಲೀಸ್ ಇಲಾಖೆ ಸೂಕ್ತಕ್ರಮ ಕೈಗೊಂಡಿದೆ.

‘ಮಾನವೀಯತೆ ನಿಜ ಧರ್ಮ’

ಕಾರ್ಗಲ್ ವರದಿ: ಎಲ್ಲಾ ಧರ್ಮಗಳಿಗೂ ಮಾತೃಧರ್ಮ ಮಾನವೀಯತೆ. ಅದಕ್ಕಿಂತ ಮಿಗಿಲಾದ ಧರ್ಮವಿಲ್ಲ ಎಂದು ಶಿವಮೊಗ್ಗ ಧರ್ಮಕ್ಷೇತ್ರದ ಯುವ ಸಂಚಲನ ನಿರ್ದೇಶಕ ಫಾದರ್ ರೋಮನ್ ಪಿಂಟೋ ನುಡಿದರು. ಇತ್ತೀಚೆಗೆ ಜೋಗಫಾಲ್ಸ್‌ನಲ್ಲಿ ಕ್ರಿಸ್‌ಮಸ್ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸೂರ್ಯ, ಭೂಮಿ, ಗಾಳಿ, ನೀರು ಎಲ್ಲವೂ ಎಲ್ಲರಿಗೂ ಒಂದೇ. ಆದರೂ, ಮಾನವ ಎಲ್ಲೆಲ್ಲೂ ಜಾತಿ, ಭಾಷೆ, ಧರ್ಮಕ್ಕಾಗಿ ಹೋರಾಡುವುದು ಶೋಚನೀಯ. ಪರಸ್ಪರ ಪ್ರೀತಿ, ಶಾಂತಿ ಮಾನವೀಯತೆಯಿಂದ ಬಾಳಿದಾಗ ಮಾತ್ರ ಮಾನವ ಜನ್ಮ ಸಾರ್ಥಕ ಎಂದು ಆಭಿಪ್ರಾಯಪಟ್ಟರು. ಜೋಗ-ಕಾರ್ಗಲ್ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸರೋಜಾ, ಸದಸ್ಯರಾದ ರಾಜ್‌ಕುಮಾರ್, ಆಂಬ್ರೊಸ್ ಮೇರಿ, ಫಾದರ್ ವೀನಸ್ ಪ್ರವೀಣ್ ಉಪಸ್ಥಿತರಿದ್ದರು. ಸ್ಟ್ಯಾನ್ಲಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಲೋಪಿಸ್ ಸ್ವಾಗತಿಸಿದರು. ಪಿ. ಸತೀಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.