ADVERTISEMENT

ತೆರಿಗೆ ಪಾವತಿ; ನಾಗರಿಕರ ಜವಾಬ್ದಾರಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 10:04 IST
Last Updated 6 ಏಪ್ರಿಲ್ 2013, 10:04 IST

ಶಿವಮೊಗ್ಗ: ದೇಶದ ಹಣಕಾಸು ಮೂಲಗಳಲ್ಲಿ ಪ್ರಮುಖವಾದುದು ಆದಾಯ ತೆರಿಗೆ. ಆದಾಯ ತೆರಿಗೆ ಸಂಗ್ರಹದಿಂದ ಅಭಿವೃದ್ಧಿಗೆ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಾಧ್ಯ. ಹಾಗಾಗಿ, ಆದಾಯ ತೆರಿಗೆ ಸಂಗ್ರಹಣೆ ಬಗ್ಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಹುಬ್ಬಳ್ಳಿ ವಲಯದ ಮುಖ್ಯ ಆಯುಕ್ತ ಎಸ್.ಕೆ. ಮಿಶ್ರಾ ಹೇಳಿದರು.

ನಗರದ ಆದಾಯ ತೆರಿಗೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ `ಆದಾಯ ತೆರಿಗೆ ಸೇವಾ ಕೇಂದ್ರ' ಉದ್ಘಾಟಿಸಿ ಅವರು ಮಾತನಾಡಿದರು.

ಆದಾಯ ತೆರಿಗೆ ವ್ಯವಹಾರಗಳನ್ನು ಸರಳಗೊಳಿಸಲು ಆದಾಯ ತೆರಿಗೆ ಸೇವಾ ಕೇಂದ್ರ ಸ್ಥಾಪಿಸಲಾಗಿದೆ. ಈ ಕೇಂದ್ರದಿಂದ ನಾಗರಿಕರಿಗೆ ಅನುಕೂಲವಾಗಲಿದೆ. ಸಕಾಲಕ್ಕೆ ಆದಾಯ ತೆರಿಗೆ ಪಾವತಿಸುವುದು ನಾಗರಿಕರ ಜವಾಬ್ದಾರಿ ಆಗಿದ್ದು, ಕಟ್ಟುನಿಟ್ಟಾಗಿ ತೆರಿಗೆ ಪಾವತಿಸಬೇಕು ಎಂದರು. 

ದಾವಣಗೆರೆ ವಲಯದ ಆಯುಕ್ತ ಎಸ್. ರಾಧಾಕೃಷ್ಣನ್ ಮಾತನಾಡಿ, ಜಾಗತಿಕ ಅರ್ಥ ವ್ಯವಸ್ಥೆಯ ಪ್ರಭಾವಕ್ಕೆ ಪ್ರತಿಯೊಂದು ದೇಶವೂ ಒಳಗಾಗುತ್ತಿದ್ದು, ಆರ್ಥಿಕ ವ್ಯವಸ್ಥೆಯಲ್ಲಿ ಹೊಸ ರೀತಿಯ ಬದಲಾವಣೆ ಉಂಟಾಗುತ್ತಿದೆ. ಜಾಗತಿಕ ಬೆಳವಣಿಗೆಗೆ ತಕ್ಕಂತೆ ಅಭಿವೃದ್ಧಿ ಸಾಧಿಸಬೇಕಾದಲ್ಲಿ ಜಾಗತಿಕ ನೀತಿ- ನಿಯಮಗಳಂತೆ ಅರ್ಥವ್ಯವಸ್ಥೆಯನ್ನು ರೂಪುಗೊಳಿಸಬೇಕು ಎಂದರು.

ಮುಂದುವರಿದ ರಾಷ್ಟ್ರಗಳು ಜಾಗತಿಕ ಆರ್ಥಿಕತೆಗೆ ಹೊಂದಿಕೊಂಡಿವೆ. ಅವು ತೆರಿಗೆ ಸಂಗ್ರಹದಲ್ಲಿ ಶೇಕಡ ನೂರರಷ್ಟು ಸಾಧನೆ ಮಾಡುತ್ತಿವೆ. ಇದೇ ರೀತಿ ದೇಶದಲ್ಲೂ ತೆರಿಗೆ ಸಂಗ್ರಹಣೆಯಲ್ಲಿ ಗರಿಷ್ಠ ಸಾಧನೆ ಮಾಡಬೇಕು ಎಂದು ಹೇಳಿದರು.

ಆದಾಯ ತೆರಿಗೆ ಇಲಾಖೆ ಹುಬ್ಬಳ್ಳಿ ವಲಯದ ಆಯುಕ್ತ ಬನ್ಸಾರಿಲಾಲ್ ಮೀನಾ ಉಪಸ್ಥಿತರಿದ್ದರು. ಜಂಟಿ ಆಯುಕ್ತ ಆರ್. ದೊರೈ ಪಾಂಡಿಯನ್ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.