ADVERTISEMENT

ನಗರೀಕರಣದ ಸುಳಿಯಲ್ಲಿ `ನಿದಿ'ಗೆ ಗ್ರಾಮ

ಎನ್.ನಾಗರಾಜ್
Published 25 ಜುಲೈ 2013, 5:50 IST
Last Updated 25 ಜುಲೈ 2013, 5:50 IST
ನಗರೀಕರಣದ ಸುಳಿಯಲ್ಲಿ `ನಿದಿ'ಗೆ ಗ್ರಾಮ
ನಗರೀಕರಣದ ಸುಳಿಯಲ್ಲಿ `ನಿದಿ'ಗೆ ಗ್ರಾಮ   

ಸುತ್ತುವರೆದ ತೋಟ, ಗದ್ದೆಗಳ ಸಾಲು, ಅಲ್ಲಲ್ಲಿ ಮೈದುಂಬಿ ತುಳುಕುತ್ತಿರುವ ಕೆರೆಗಳು. ಕೃಷಿ ಭೂಮಿ ಮಧ್ಯದಲ್ಲೇ ಎದ್ದು ನಿಂತ ದೊಡ್ಡ-ದೊಡ್ಡ ಕೈಗಾರಿಕೆ-ಕಂಪೆನಿಗಳು. ಮಗ್ಗುಲಲ್ಲೇ ಹಾದು ಹೋಗಿರುವ ಬಿ.ಎಚ್.ರಸ್ತೆ. ಶಿವಮೊಗ್ಗ ನಗರದಿಂದ ಕೇವಲ 6 ಕಿ.ಮೀ. ದೂರದಲ್ಲಿದ್ದರೂ ಗ್ರಾಮೀಣ ಸೊಗಡು ಬಿಟ್ಟು ಕೊಡದ ಗ್ರಾಮ ನಿದಿಗೆ.

ಗ್ರಾಮದಿಂದ ತುಸು ದೂರದಲ್ಲೇ ನಿರ್ಮಾಣ ಆಗುತ್ತಿರುವ ವಿಮಾನ ನಿಲ್ದಾಣ, ಜಿಲ್ಲಾ ಕಾರಾಗೃಹಗಳು, ಗ್ರಾಮವನ್ನು ಮತ್ತಷ್ಟು ನಗರೀಕರಣದ ತೆಕ್ಕೆಗೆ ಸೆಳೆಯುತ್ತಿವೆ.

ಗ್ರಾಮದಲ್ಲಿ 630 ಕುಟುಂಬಗಳಿದ್ದು, ಸುಮಾರು 2,600 ಜನ ವಾಸ ಮಾಡುತ್ತಿದ್ದಾರೆ. ಬಳಸಕೆರೆ, ದೊಡ್ಡಕೆರೆ, ಹುಚ್ಚಣ್ಣನ ಕೆರೆ, ಬಳಸುವಕೆರೆ, ಬೆಳ್ಳೊಳ್ಳಿ ಕೆರೆ, ದಸಶೆಟ್ಟಿ ಕೆರೆ, ತುಮರೆ ವಡ್ಡು ಎಂಬ 7 ಕೆರೆಗಳು ಇವೆ.

ಎರಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಒಂದು ಸರ್ಕಾರಿ ಪ್ರೌಢಶಾಲೆ, ನಾಲ್ಕು ಅಂಗನವಾಡಿ ಕೇಂದ್ರಗಳು. ಸಾರ್ವಜನಿಕ ಗ್ರಂಥಾಲಯ, ಸರ್ಕಾರಿ ಪ್ರಾಥಮಿಕ ಆಯುಷ್ ಆರೋಗ್ಯ ಕೇಂದ್ರ, ಸರ್ಕಾರಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಗಳೂ ಇವೆ. ವ್ಯವಸಾಯ ಸೇವಾ ಸಹಕಾರ ಬ್ಯಾಂಕ್ ನಿಯಮಿತ, ಸಹಕಾರ ಹಾಲು ಉತ್ಪಾದಕರ ಕೇಂದ್ರಗಳಿವೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಸೇರುವ ನಿದಿಗೆ, ಹೋಬಳಿ ಕೇಂದ್ರವಾಗಿದ್ದು, ತಾಲ್ಲೂಕು ಪಂಚಾಯ್ತಿ ಕ್ಷೇತ್ರವೂ ಹೌದು. ಹಾಗೆಯೇ ಹಸೂಡಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಕ್ಕೆ ಸೇರಿದೆ. ನಿದಿಗೆ ಗ್ರಾಮ ಪಂಚಾಯ್ತಿ ವಾಪ್ತಿಯಲ್ಲಿ ಮಾಚೇನಹಳ್ಳಿ, ದುಮ್ಮಳ್ಳಿ ಗ್ರಾಮಗಳು ಬರುತ್ತವೆ. ಗ್ರಾಮ ಪಂಚಾಯ್ತಿ 11 ಸದಸ್ಯರ ಸಂಖ್ಯಾ ಬಲ ಹೊಂದಿದೆ. 
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಶಿವಮೊಗ್ಗ ಹಾಲು ಉತ್ಪಾದಕರ ನಿಯಮಿತ, ಇಂಡಿಯನ್ ಆಯಿಲ್ ಗ್ಯಾಸ್ ಪ್ಲಾಂಟ್, ಕೆಎಸ್‌ಆರ್‌ಪಿ 8ನೇ ಬೆಟಾಲಿಯನ್ ಇವೆ. ಎಕ್ಸ್‌ಚೇಂಜಿಂಗ್, ಶಾಹಿ, ಭಾರತ್ ಸ್ಟಾರ್ಚ್ಸ್ ಹಾಗೂ ಇತರ ಪ್ರಮುಖ ಕೈಗಾರಿಕೆಗಳು, ಕಂಪೆನಿಗಳು ಇವೆ.

ಹೆಸರಿನ ಹಿನ್ನೆಲೆ
`ನಿಧಿ' ಎಂದರೆ ಸಂಪತ್ತು; `ಗೆ' ಎಂದರೆ ದಾರಿ. ಎರಡು ಸೇರಿ ನಿಧಿಗೆ ಆಗಿದೆ. ಜನರ ಮಾತಿನಲ್ಲಿ ಬೆಳೆದು ನಿದಿಗೆ ಎಂಬ ಹೆಸರು ಊರಿಗೆ ಬಂದಿದೆ ಎನ್ನುತ್ತಾರೆ ಗ್ರಾಮಸ್ಥ ಮಹೇಶ್ವರಪ್ಪ.  

ಹಿಂದೆ ಗ್ರಾಮ ಇರುವ ಸ್ಥಳದಲ್ಲಿ ನಿಧಿ ಇತ್ತು ಎಂಬ ನಂಬಿಕೆ ಸುತ್ತಲಿನ ಊರುಗಳ ಜನರಲ್ಲಿ ಇತ್ತು. ಇದಕ್ಕೆ ಪೂರಕವಾಗಿ ಹಾಲಪ್ಪ ಎಂಬುವವರ ತೋಟದಲ್ಲಿ ಸುಮಾರು 7ಅಡಿ ಉದ್ದ, 3 ಅಡಿ ಅಗಲ ಹಾಗೂ 6 ಇಂಚು ದಪ್ಪದ ಕಲ್ಲು ಇದೆ. ಈ ಕಲ್ಲಿನ ಒಂದು ಪಾಶ್ವದಲ್ಲಿ ಪಾಶ್ವನಾಥನ ಚಿತ್ರ ಆನೆ, ಎತ್ತು, ಸೂರ್ಯ, ಚಂದ್ರ ಹಾಗೂ ಸೇವಕಿಯರನ್ನು ಕೆತ್ತಲಾಗಿದೆ.

ಮತ್ತೊಂದು ಪಾಶ್ವದಲ್ಲಿ ಯಾವುದೋ ಲಿಪಿಯಲ್ಲಿ ಕೆತ್ತನೆ ಮಾಡಲಾಗಿದ್ದು, ಇದನ್ನು ತಲೆ ಕೆಳಗೆ ಕಾಲು ಮೇಲೆ ಮಾಡಿ ಓದಿದರೆ ನಿಧಿ ಇರುವ ಸ್ಥಳ ಮತ್ತು ಅದನ್ನು ಪಡೆಯುವ ವಿಧಾನ ತಿಳಿಯುತ್ತದೆ ಎಂಬ ನಂಬಿಕೆ ಇತ್ತು ಎಂದು ವಿವರಣೆ ನೀಡುತ್ತಾರೆ ಅವರು.

ನಿದಿಗೆಯಲ್ಲಿ ವಜ್ರ -ವೈಡೂರ್ಯ, ಚಿನ್ನ-ರತ್ನಗಳಿಂದ ಕೂಡಿದ ನಿಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಕೈಗಾರಿಕಾ ವಲಯ ಹಾಗೂ ರಿಯಲ್ ಎಸ್ಟೇಟ್‌ನಿಂದ ನಿದಿಗೆಯ ಭೂಮಿಗೆ ನಿಧಿಗೂ ಹೆಚ್ಚಿನ ಬೆಲೆ ಬಂದಿದೆ. ಕೆಲವರು ಅಡಿಕೆ ತೋಟಗಳನ್ನೂ ಕಡಿದು ಬಡಾವಣೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ವಿಸ್ಮಿತರಾಗಿ ನುಡಿಯುತ್ತಾರೆ ಅವರು.

ಕೃಷಿಯಿಂದ ವಿಮುಖವಾಗುತ್ತಿದೆ ಗ್ರಾಮ
ಅತ್ತ ಶಿವಮೊಗ್ಗ ನಗರ ಅಭಿವೃದ್ಧಿ ಆಗುತ್ತಿದ್ದಂತೆ, ಇತ್ತ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶವೂ ಬೆಳೆಯುತ್ತಿದೆ. ಗ್ರಾಮಕ್ಕೆ ಒಂದೆರೆಡು ಕಿಲೋ ಮೀಟರ್ ದೂರದಲ್ಲಿದ್ದ ಕೈಗಾರಿಕಾ ಪ್ರದೇಶ ಊರಿನ ಬುಡದ ಬಳಿಯೇ ಬಂದು ಬೃಹತ್ತಾಗಿ ಬೆಳೆಯುತ್ತಿದೆ. ಕಂಪೆನಿಗಳ, ಕೈಗಾರಿಕೆಗಳ ಸೆಳೆತ ಇಲ್ಲಿನ ವಿದ್ಯಾವಂತರನ್ನ ಇರಲಿ ಸಣ್ಣ ರೈತರನ್ನು, ಕೃಷಿ ಕಾರ್ಮಿಕರನ್ನೂ ಬಿಟ್ಟಿಲ್ಲ.

ಒಂದೆಡೆ ಕೃಷಿಗೆ ಕಾರ್ಮಿಕರ ಕೊರತೆ ಕಾಡುತ್ತಿದ್ದರೆ, ಮತ್ತೊಂದೆಡೆ ಕಾರ್ಖಾನೆಗಳು ಕೃಷಿ ಭೂಮಿ ಮೇಲೆ ವಕ್ರದೃಷ್ಟಿ ಬೀರುತ್ತಿವೆ. ಜತೆಗೆ ರಿಯಲ್ ಎಸ್ಟೇಟ್ ಉದ್ದಿಮೆಯೂ ಕಾಲಿಟ್ಟಿದೆ. ಇವೆಲ್ಲವೂ ಒಟ್ಟೊಟ್ಟಿಗೆ ಗ್ರಾಮಸ್ಥರನ್ನು ಕೃಷಿಯಿಂದ ವಿಮುಖರನ್ನಾಗಿ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.